ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

ಮೈಸೂರು: “ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎರಡೂ ರಾಜ್ಯಗಳಲ್ಲಿನ ನೀರಿನ ಪ್ರಮಾಣದ ಮಾಹಿತಿ ಪಡೆದು, ತಮಿಳುನಾಡಿಗೆ ಈ ತಿಂಗಳು 31ರವರೆಗೂ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವುದನ್ನು ಮುಂದುವರಿಸಲು ಆದೇಶಿಸಿದೆ.

ಕಳೆದ ಎರಡು ಮೂರು ದಿನಗಳಿಂದ ನಮ್ಮ ಆಣೆಕಟ್ಟುಗಳಿಗೆ ನಿತ್ಯ 8 ರಿಂದ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಾವು ನಮ್ಮ ರೈತರನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದೇವೆ.

 

ನಾವು ಆಣೆಕಟ್ಟುಗಳಿಂದ ಕಡಿಮೆ ನೀರು ಬಿಟ್ಟರೂ ಬೆಂಗಳೂರಿನ ಸುತ್ತಮುತ್ತಲಿನಲ್ಲಿ ಮಳೆ ಸುರಿದಿರುವ ಪರಿಣಾಮ ಬಿಳಿಗುಂಡ್ಲುವಿಗೆ ಹರಿಯುವ ನೀರಿನ ಪ್ರಮಾಣ ಸರಿದೂಗಿದೆ. ನಾವು ನಮ್ಮ ರಾಜ್ಯದ ಪರಿಸ್ಥಿತಿಯನ್ನು ಮನದಟ್ಟು ಮಾಡಿದ್ದೇವೆ. ಏನೇ ಆದೇಶ ಬಂದರು ನಾವು ನಮ್ಮ ರೈತರ ಹಿತ ಕಾಯುತ್ತೇವೆ.”

ಪ್ರಶ್ನೋತ್ತರ:

ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಎಂದು ಪ್ರಾಧಿಕಾರಕ್ಕೆ ಮನವಿ ಮಾಡಿದ್ದರೂ ಅವರು ಭೇಟಿ ಮಾಡಿಲ್ಲ ಎಂದು ಕೇಳಿದಾಗ, “ನಾವು ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಅಂತಿಮ ತೀರ್ಮಾನ ಅವರು ತೆಗೆದುಕೊಳ್ಳಬೇಕು. ಈ ವಿಚಾರವಾಗಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಮೇಕೆದಾಟು ಯೋಜನೆ ವಿಚಾರದಲ್ಲಿ ಸರ್ಕಾರದ ಸಿದ್ಧತೆಗಳೇನು ಎಂದು ಕೇಳಿದಾಗ, “ಮೇಕೆದಾಟು ಯೋಜನೆ ನಮ್ಮ ಮೊದಲ ಆದ್ಯತೆ. ನ್ಯಾಯಾಲಯದ ಮೆಟ್ಟಿಲೇರಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ನ್ಯಾಯಾಲಯ ತಮಿಳುನಾಡಿಗೆ, ಕರ್ನಾಟಕದವರು ಅವರ ರಾಜ್ಯದಲ್ಲಿ ಆಣೆಕಟ್ಟು ಕಟ್ಟಿಕೊಂಡರೆ ನಿಮ್ಮ ತಕರಾರು ಇರಬಾರದು ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಈ ಯೋಜನೆ ನಮ್ಮ ಪ್ರಮುಖ ಆದ್ಯತೆ ಆಗಿದೆ. ಈ ಯೋಜನೆಯಲ್ಲಿ ಬಳಸಲಾಗುವ ರೈತರ ಜಮೀನಿಗೆ ಬದಲಿ ಜಮೀನು ನೀಡುವ ಕುರಿತು ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಇದು ನಮ್ಮ ಆಂತರಿಕ ವಿಚಾರ. ಇಂತಹ ಕೆಲಸಗಳನ್ನು ನಾವು ಮುಗಿಸುತ್ತಿದ್ದೇವೆ” ಎಂದರು.

 

ಲೋಡ್ ಶೆಡ್ಡಿಂಗ್ ವಿಚಾರವಾಗಿ ಕೇಳಿದಾಗ, “ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣ ಆಗಿರುವ ಕಾರಣ ನೀರಿನಿಂದ ಉತ್ಪಾದನೆ ಆಗುವ ವಿದ್ಯುತ್ ಪ್ರಮಾಣ ಕುಸಿದಿದೆ. ಇದನ್ನು ಸರಿದೂಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top