ಬಳ್ಳಾರಿ: ಬಳ್ಳಾರಿಯ ಬಹುನಿರೀಕ್ಷಿತ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದ್ದು, ನಿರ್ಮಾಣಕ್ಕೆ ತಗುಲಿದ ಬಾಕಿ ಮೊತ್ತವನ್ನು ಬಿಡುಗಡೆಗೊಳಿಸುವಂತೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಬರೆದಿದ್ದ ಪತ್ರಕ್ಕೆ ಸರ್ಕಾರ ಸ್ಪಂದಿಸಿದ್ದು, ಬಾಕಿ ಮೊತ್ತ ಬಿಡುಗಡೆಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಈ ಕುರಿತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ಶಾಸಕ ನಾರಾ ಭರತ್ ರೆಡ್ಡಿ ಆಗಸ್ಟ್ ತಿಂಗಳಲ್ಲಿ ಪತ್ರ ಬರೆದಿದ್ದರು.
ಕಾಮಗಾರಿಯ ಪರಿಷ್ಕೃತ ಅಂದಾಜು ಅನುದಾನದ ಬಾಕಿ 21.90 ಕೋಟಿ ರೂ. ಬಿಡುಗಡೆಗೆ ಸಂಬಂಧಿಸಿ ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡುವ ಉದ್ಧೇಶದಿಂದ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿತ್ತು. ಶಾಸಕ ನಾರಾ ಭರತ್ ರೆಡ್ಡಿ ಸಚಿವರಿಗೆ ಈ ಕುರಿತು ಮನವಿ ಮಾಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ್ದ ಸಚಿವ ಹೆಚ್.ಕೆ.ಪಾಟೀಲ್ ಅವರು ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಒಪ್ಪಿದ್ದರು. ಈಗ ಬಾಕಿ ಮೊತ್ತ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ತಮ್ಮ ಪತ್ರಕ್ಕೆ ಸ್ಪಂದಿಸಿ, ಜಿಲ್ಲೆಯ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಟ್ಟಡದ ಕೆಲಸ ಪೂರ್ಣಗೊಳಿಸಲು, ಬಾಕಿ ಮೊತ್ತ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಂಡ ಸಚಿವ ಹೆಚ್.ಕೆ.ಪಾಟೀಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರಿಗೆ ಶಾಸಕ ನಾರಾ ಭರತ್ ರೆಡ್ಡಿ ಧನ್ಯವಾದ ತಿಳಿಸಿದ್ದಾರೆ.
ಬಳ್ಳಾರಿ ನಗರದ ತಾಳೂರು ರಸ್ತೆ ಬಳಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಪೂರ್ಣಗೊಂಡಿದ್ದು, ಕಾಮಗಾರಿಯ ಅಂದಾಜು ಮೊತ್ತ 85 ಕೋಟಿ ರೂ. ಇತ್ತು. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಲಹೆಯಂತೆ ಕಾಮಗಾರಿಯ ಹೆಚ್ಚುವರಿ ಅನುದಾನವನ್ನು ಪರಿಷ್ಕೃತ ಅಂದಾಜು ಅನುದಾನ ಮೊತ್ತವನ್ನು 121.90 ಕೋಟಿ ರೂ.ಗಳಿಗೆ ನಿಗದಿಗೊಳಿಸಿ ಅನುಮೋದನೆ ನೀಡಲಾಗಿತ್ತು. ರಾಜ್ಯ ಅಂದಾಜು ಪಟ್ಟಿ ಪರಿಶೀಲನಾ ಸಮಿತಿ, ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಚಿಸಲಾದ ನ್ಯಾಯಾಲಯ ಕಟ್ಟಡಗಳ ನಿರ್ವಹಣಾ ಸಮಿತಿ ಸಹ ಅನುಮೋದನೆ ನೀಡಿತ್ತು.
ಪರಿಷ್ಕೃತ ವೆಚ್ಚವೂ ಸೇರಿ ಒಟ್ಟು ಮೊತ್ತವಾದ 121.90 ಕೋಟಿ ಪೈಕಿ ಬಾಕಿ ಇದ್ದ 21.90 ಕೋಟಿ ರೂ. ಅನುದಾನ ಈಗ ಮಂಜೂರಾಗಲಿದೆ.