ಪ್ರತಿಯೊಬ್ಬ ಸಾಧಕರು ನೆನಪಿಡಬೇಕಾದ ಮೂರು ಅಂಶಗಳೆಂದರೆ ’ಮೊದಲು ಅವಮಾನ, ನಂತರ ಅನುಮಾನ ತದನಂತರವೇ ಸನ್ಮಾನ ’ ಇವುಗಳನ್ನು ಮನದಲ್ಲಿಟ್ಟುಕೊಂಡು ಮುಂದುವರೆದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ನಿದರ್ಶನವೆಂದರೆ ಇತ್ತೀಚೆಗೆ ಚೀನಾದ ಹಾಂಗ್ ಝೌ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 800 ಮೀ ಹೆಪ್ಟಾಥ್ಲಾನ್ ನಲ್ಲಿ ಕಂಚಿನ ಪದಕ ಪಡೆದ ಆಟಗಾರ್ತಿ ಬಳ್ಳಾರಿಯ ಹೆಮ್ಮೆಯ ಪುತ್ರಿ ನಂದಿನ ಅಗಸರ.
ಇವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಸಮೀಪದ ಶ್ರೀನಗರ ಕ್ಯಾಂಪ್ ಎಂಬ ಪುಟ್ಟ ಗ್ರಾಮದಲ್ಲಿ ತಂದೆ ಯಲ್ಲಪ್ಪ ತಾಯಿ ಅಯ್ಯಮ್ಮರ ಮೊದಲ ಮಗಳಾಗಿ 7ನೇ ಆಗಸ್ಟ್ 2003 ರಲ್ಲಿ ಜನಿಸಿದರು.
ಕಡು ಬಡತನದಲ್ಲಿ ಹುಟ್ಟಿದ ನಂದಿನಿ ಬಾಲ್ಯದ ದಿನಗಳಲ್ಲಿ ತೀವ್ರತರವಾದ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ತನ್ನ ತಂದೆಯು ಮಾಡಿದ ಸಾಲವನ್ನು ತೀರಿಸಲಾಗದೇ ಹೊಟ್ಟೆಪಾಡಿಗಾಗಿ ದುಡಿಯಲು 3 ತಿಂಗಳ ನಂದಿನಿಯನ್ನು ಕರೆದುಕೊಂಡು ಇಡೀ ಕುಟುಂಬ ಹೈದ್ರಾಬಾದ್ಗೆ ವಲಸೆ ಹೋಗುತ್ತದೆ. ಆರಂಭದಲ್ಲಿ ತಂದೆ ಯಲ್ಲಪ್ಪ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸುಮಾರು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಆಗ ಅಲ್ಲಿನ ಸಹೃದಯರ ಒಲುಮೆಯಿಂದಾಗಿ ಅಂಗಳದಲ್ಲಿ ಆಟವಾಡುತ್ತಿದ್ದ 7 ವರ್ಷದ ನಂದಿನಿಯವರನ್ನು ಕರೆದುಕೊಂಡು ಹೋಗಿ ಸೈನಿಕ (ಕೆವಿ ವಿದ್ಯಾಲಯ) ಶಾಲೆಗೆ ಸೇರಿಸುತ್ತಾರೆ. ಅಲ್ಲಿಂದಲೇ ನಂದಿನಿಯವರ ಬಾಳಿನ ಬೆಳಕು ಬೆಳಗಲಾರಂಭಿಸಿತು.
ನಂದಿನಿಯ ಮೊದಲ ಪಿ.ಟಿ.ಟೀಚರ್ ಮುತ್ತಯ್ಯ ರೆಡ್ಡಿ (ಬೊಲಾರಾಮ್) ಮತ್ತು ನಾಗರಾಜ ರವರ ಗರಡಿಯಲ್ಲಿ 5ನೇ ತರಗತಿಯವರೆಗೂ ಪುಟ್ಬಾಲ್, 100 ಮೀ ಓಟ, ಹೈಜಂಪ್, ಲಾಂಗ್ ಜಂಪ್ ಮತ್ತು ಹರ್ಡಲ್ಸ್ ಆಟಗಳಲ್ಲಿ ಪಳಗಿದರು. ಆದರೆ ಹರ್ಡಲ್ಸ್ ಮತ್ತು ಓಟದಲ್ಲಿ ಅತೀವವಾಗಿ ತೋರುತ್ತಿದ್ದ ಆಸಕ್ತಿ ಮತ್ತು ಶ್ರದ್ಧೆಯನ್ನು ಕಂಡು ಇವರನ್ನು ಮತ್ತು ಇವರ ತಂದೆ ತಾಯಿಯನ್ನು ಮನವೊಲಿಸಿ ತೆಲಂಗಾಣದ ಅಥ್ಲೀಟ್ ಹೆಡ್ ಕೋಚ್, 2016ರ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ನಾಗಪುರಿ ರಮೇಶರ ಬಳಿಗೆ ಕರೆತರುತ್ತಾರೆ.
ಈಗಾಗಲೇ ಖ್ಯಾತ ಅಥ್ಲೀಟ್ಗಳಾದ ಪೂವಮ್ಮ, ದ್ಯುತಿ ಚಂದ್, ಸತ್ತಿಗೀತಾ, ದೀಪ್ತಿ ಮುಂತಾದ ರಾಷ್ಟ್ರದ ಪ್ರಮುಖ ಆಟಗಾರರ ಗುರುವಾಗಿದ್ದ ಇವರು ನಂದಿನಿಯವರ ಕ್ರೀಡಾಸಕ್ತಿಗೆ ಬೆರಗಾಗಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನಾಗಿಸಲು ಪಣ ತೊಟ್ಟರು. ಅಂತೆಯೇ ಅತ್ತ ಮಗಳು ನಂದಿನಿ ಆಟಕ್ಕಾಗಿ ಹಠ ತೊಟ್ಟರೇ, ಇತ್ತ ಮಗಳ ಒಲಂಪಿಕ್ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ತಂದೆ ಯಲ್ಲಪ್ಪ ಸಿಕಿಂದರಬಾದ್ನ ಕಪ್ರಾನ್ ನಲ್ಲಿ ಸ್ವಂತ ಟೀ ಅಂಗಡಿಯನ್ನು ತೆರೆದು ಹಗಲಿರುಳು ದುಡಿಯಲು ಮುಂದಾದರು.
ಅಪ್ಪ ಅಮ್ಮನ ಕಷ್ಟಗಳನ್ನು ಕಣ್ಣಾರೆ ಕಂಡ ನಂದಿನಿ ಗುರುಗಳ ಸೂಕ್ತ ಮಾರ್ಗದರ್ಶನದಲ್ಲಿ ವಲಯ, ವಿಭಾಗೀಯ, ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಜಯಭೇರಿಯನ್ನು ಕಾಣುತ್ತಾ ಸಾಗಿದರು. 2020 ರಲ್ಲಿ ಗುವಾಹಟಿಯಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಿ ಅಂಡರ್ 17ರ ಲಾಂಗ್ ಜಂಪ್ ನಲ್ಲಿ ಮತ್ತು 100 ಮೀ ಓಟದಲ್ಲಿ ಗೆದ್ದು ತೆಲಂಗಾಣಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು.
ಅಲ್ಲಿಂದ ಎಲ್ಲಿಯೂ ನಿಲ್ಲದ ನಂದಿನಿ 2021ರ ಜೂನ್ ನಲ್ಲಿ ನಡೆದ ಪಟಿಯಾಲದ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದರು. ಅಲ್ಲದೇ ಮರು ವರ್ಷ 2022ರ ಆಗಸ್ಟ್ ನಲ್ಲಿ ಪ್ಯಾಸ್ಕುವಲ್ ಗೆರೆರೋ ಸ್ಟೇಡಿಯಂ, ಕ್ಯಾಲಿ, ಕೊಲಂಬಿಯಾದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಅಂಡರ್ 20 ಚಾಂಪಿಯನ್ ಶಿಪ್ ನಲ್ಲಿ 100 ಮೀ ಹರ್ಡಲ್ಸ್ ನಲ್ಲಿ ಏಳನೇ ಸ್ಥಾನ ಪಡೆದರು. ಇನ್ನು ಉತ್ತಮ ಪ್ರಯತ್ನದೊಂದಿಗೆ 2022 ರ ಅಕ್ಟೋಬರ್ ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 100 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಗೆದ್ದರು. ಹಠ ಬಿಡದ ನಂದಿನಿ 2023 ರ ಸೆಪ್ಟೆಂಬರ್ 30 ರಂದು ಚೀನಾದ ಹ್ಯಾಂಗ್ ಝೌನಲ್ಲಿ ನಡೆದ 2022ರ ಏಷ್ಯನ್ ಗೇಮ್ಸ್ ನಲ್ಲಿ 800ಮೀ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ತಮ್ಮ ಅತ್ಯುತ್ತಮ ಸಾಧನೆ ಪ್ರದರ್ಶಿಸಿ ಕಂಚಿನ ಪದಕ ಪಡೆಯುವ ಮೂಲಕ ಇಡೀ ದೇಶದ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರುವಂತೆ ಮಾಡಿದ್ದಾರೆ.
ನಂದಿನಿಯವರ ಈ ಯಶೋಗಾಥೆಯ ಹಿಂದೆಯೂ ಎಷ್ಟೋ ಸಾರಿ ಉತ್ತಮವಾದ ಶೂಗಳಿಲ್ಲದೇ ಬರಿಗಾಲಲ್ಲಿ ಪ್ರಾಕ್ಟಿಸ್ ಮಾಡಿದ್ದು, ಇವರ ಕಷ್ಟ ನೋಡದೆ ಕೆಲವು ಸಲ ಗುರುಗಳು ಶೂ ಕೊಡಿಸಿದ ಉದಾಹರಣೆಗಳು ಹಾಗೂ ಮಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನೋಡುವ ಇಚ್ಛೆಯಿಂದ ಮನೆಯಲ್ಲಿನ ಚೂರುಪಾರು ಬಂಗಾರವನ್ನೆಲ್ಲಾ ಒತ್ತೆ ಇಟ್ಟಿದ್ದು, ಕುಟುಂಬಸ್ಥರೆಲ್ಲಾ ಅದೆಷ್ಟು ಸಲ ಉಪವಾಸ ಮಲಗಿದ್ದು, ಹೀಗೆ ಅನೇಕ ಸಂಕಷ್ಟಗಳ ಸರಮಾಲೆಗಳಿರುವುದನ್ನು ಕೇವಲ ಒಡನಾಡಿಗಳಾದ ಯಲ್ಲಪ್ಪ ಮಡಿವಾಳ, ಪ್ರವೀಣ್, ನಾಗರಾಜ ಮಾತ್ರ ಅರಿತಿದ್ದಾರೆ.
ಇಂದಿಗೂ ತೆಲಂಗಾಣವನ್ನು ಪ್ರತಿನಿಧಿಸಿ ಆಟವಾಡುವ ನಂದಿನಿ ಅಗಸರ ಮತ್ತು ಅವರ ಕುಟುಂಬದವರು ತುಂಬಾ ಅಚ್ಚುಕಟ್ಟಾಗಿ ಕನ್ನಡವನ್ನು ಮಾತಾನಾಡುತ್ತಿದ್ದಾರೆ. ಅಲ್ಲದೇ ಹಬ್ಬ ಹರಿದಿನಗಳಲ್ಲಿ ರಾರಾವಿಯ ಯಲ್ಲಮ್ಮನ ಜಾತ್ರೆಗೆ ಕುಟುಂಬಸ್ಥರೆಲ್ಲಾ ಬರುವುದನ್ನು ಬಿಟ್ಟಿಲ್ಲ. ಹೀಗೆ ಅನೇಕ ಕಷ್ಟ ಕಾರ್ಪಣ್ಯದ ನಡುವೆ ಕಾಡಿನ ಸುಮವೊಂದು ನಾಡು ತಲುಪಿ ಅಲ್ಲಿನ ಅದಿ ದೇವತೆ ಕ್ರೀಡಾಮಾತೆಯ ಕೊರಳ ಹಾರ ಆದ ಈ ಸಾಧಕಿಯ ಕಥೆ ಮುಂದಿನ ಯುವ ಪೀಳಿಗೆಯ ಬಾಳಿನಲ್ಲಿ ಸ್ಪೂರ್ತಿ ತುಂಬಲಿ, ಉತ್ತಮ ಪ್ರತಿಭೆಗಳಿಗೆ ಸರ್ಕಾರದ ಸೂಕ್ತ ಸೌಲಭ್ಯಗಳು ಸಿಗಲಿ
* ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ, ರಂಗ ಸಂಶೋಧಕರು / ಬರಹಗಾರರು, ಸಿರುಗುಪ್ಪ.