250 ಕ್ಕೂ ಹೆಚ್ಚು ಅಂಗವಿಕಲರಿಗೆ ಉಚಿತ ಮಾಡ್ಯುಲರ್ ಅಂಗಗಳ ಜೋಡಣೆ

ನಾರಾಯಣ ಸೇವಾ ಸಂಸ್ಥಾನದಿಂದ 250 ಕ್ಕೂ ಹೆಚ್ಚು ಅಂಗವಿಕಲರಿಗೆ ಉಚಿತ ಮಾಡ್ಯುಲರ್ ಅಂಗಗಳ ಜೋಡಣೆ: ಉದಯ್‌ ಪುರದ ಅನುಭವಿ ವೈದ್ಯರ ತಂಡದಿಂದ ಅಕ್ಟೋಬರ್‌ 1 ರಂದು ರಾಜ್ಯಮಟ್ಟದ ಜೋಡಣಾ ಶಿಬಿರ

ಬೆಂಗಳೂರು : ಕಳೆದ 39 ವರ್ಷಗಳಿಂದ ಅಂಗವಿಕಲತೆ ನಿವಾರಣೆ ಮತ್ತು ಮಾನವ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜಸ್ಥಾನದ ನಾರಾಯಣ ಸೇವಾ ಸಂಸ್ಥಾನ ಅಪಘಾತ ಮತ್ತಿತರ ಕಾರಣಗಳಿಂದ ದೈಹಿಕವಾಗಿ ನ್ಯೂನತೆಗೆ ಒಳಗಾಗಿರುವವರಿಗೆ ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ ಆಯೋಜಿಸಿದೆ. ಅಕ್ಟೋಬರ್‌ 1 ರ ಭಾನುವಾರದಂದು ಬೆಂಗಳೂರಿನ ಬುಲ್‌ ಟೆಂಪಲ್‌ ರಸ್ತೆಯ ಮರಾಠ ಹಾಸ್ಟಲ್‌ ಆವರಣದಲ್ಲಿ ಶಿಬಿರ ಆಯೋಜಿಸಲಾಗಿದೆ.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಶಾಖೆ ಅಧ್ಯಕ್ಷ ವಿನೋದ್ ಜೈನ್,  ಭಾನುವಾರ ನಡೆಯಲಿರುವ ಕೃತಕ ಅಂಗಾಂಗ ಜೋಡಣಾ  ಶಿಬಿರದಲ್ಲಿ 250ಕ್ಕೂ ಹೆಚ್ಚು ಅಂಗವಿಕಲರಿಗೆ ಉಚಿತವಾಗಿ ಕೃತಕ ಕೈ ಕಾಲುಗಳನ್ನು ಜೋಡಿಸಲಾಗುವುದು. ಉದಯಪುರದ ನಾರಾಯಣ ಸೇವಾ ಸಂಸ್ಥಾನದಿಂದ ತರಬೇತಿ ಪಡೆದ ಅನುಭವಿ ವೈದ್ಯರು ಹಾಗೂ ಆರ್ಥೋಟಿಸ್ಟ್ ಮತ್ತು ಪ್ರಾಸ್ಥೆಟಿಕ್ ತಂಡ ಈ ಮಾನವೀಯ ಸೇವಾ ಕಾರ್ಯದಲ್ಲಿ ನಿರತವಾಗಲಿದೆ ಎಂದರು.

ಅಕ್ಟೋಬರ್‌ 1 ರಂದು ಅಂತರರಾಷ್ಟ್ರೀಯ ಹಿರಿಯ ನಾಗರಿಕರ ದಿನ ಇರುವ ಹಿನ್ನೆಲೆಯಲ್ಲಿ ಜೋಡಣಾ ಶಿಬಿರಕ್ಕೆ ಆಗಮಿಸುವ ಹಿರಿಯ ನಾಗರಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಜುಲೈ 16 ರಂದು ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕೃತಕ ಅಂಗ ಮಾಪನ ಶಿಬಿರದಲ್ಲಿ 400ಕ್ಕೂ ಹೆಚ್ಚು ದಿವ್ಯಾಂಗರು  ಆಗಮಿಸಿದ್ದರು. ಆ ಸಮಯದಲ್ಲಿ 270 ಕ್ಕೂ ಅಧಿಕ ಅಂಗವಿಕಲರ ಕೃತಕ ಕೈ ಮತ್ತು ಕಾಲುಗಳ ಅಳತೆಗಳನ್ನು ತೆಗೆದುಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಪ್ರಾಸ್ಥೆಟಿಕ್ ಧರಿಸಿ ನಡೆಯಲು ತರಬೇತಿ ನೀಡಲಾಗುವುದು. ಅಂಗವಿಕಲರು ತಮ್ಮ ನಡಿಗೆಯನ್ನು ಸುಧಾರಿಸಲು ಸಾಧ್ಯವಾಗುವ ಕನ್ನಡಿಯನ್ನು ಸಹ ಅಳವಡಿಸಲಾಗುವುದು. ಈ ಮಾಡ್ಯುಲರ್ ಕೃತಕ ಅಂಗಗಳು ಜರ್ಮನ್ ತಂತ್ರಜ್ಞಾನ ಆಧಾರಿತವಾಗಿದ್ದು, ತೂಕದಲ್ಲಿ ಕಡಿಮೆ ಮತ್ತು ಹೆಚ್ಚಿನ ಗುಣಮಟ್ಟ ಹೊಂದಿವೆ. ದೀರ್ಘ ಬಾಳಿಕೆ ಬರುತ್ತವೆ. ನಾರಾಯಣ ಸೇವಾ ಸಂಸ್ಥಾನ ಇದುವರೆಗೆ 40 ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಕೃತಕ ಕೈ ಮತ್ತು ಕಾಲುಗಳನ್ನು ಸಂಪೂರ್ಣವಾಗಿ ಉಚಿತವಾಗಿ ಅಳವಡಿಸಿದೆ ಎಂದರು.  

ಪ್ರತಿ ದಿನ ಸರಾಸರಿ 60 ರಿಂದ 70 ಅಪಘಾತ ಸಂತ್ರಸ್ತರಿಗೆ ಮತ್ತು ದೈಹಿಕವಾಗಿ ಹಿಂದುಳಿದವರಿಗೆ ಸಂಸ್ಥೆಯಲ್ಲಿ ಕೃತಕ ಕೈ ಮತ್ತು ಕಾಲುಗಳನ್ನು ಅಳವಡಿಸಲಾಗುತ್ತಿದೆ. ದೇಶಾದ್ಯಂತ ಅಂಗವಿಕಲರು ಭರವಸೆಯೊಂದಿಗೆ ಸಂಸ್ಥೆಯನ್ನು ತಲುಪುತ್ತಾರೆ. ಕೈಕಾಲುಗಳನ್ನು ಅಳವಡಿಸಿಕೊಂಡ ನಂತರ ಅವರು ಸುಲಭವಾದ ಜೀವನ ನಡೆಸುತ್ತಾರೆ ಎಂದು ಮಾಹಿತಿ ನೀಡಿದರು.

ನಾರಾಯಣ ಸೇವಾ ಸಂಸ್ಥಾನ ವಿಶೇಷವಾಗಿ ಕರ್ನಾಟಕದ ಅಂಗವಿಕಲರಿಗೆ ಅವರ ಮನೆಗಳ ಬಳಿಗೆ ತೆರಳಿ ಸುಲಭ ಮತ್ತು ಯಶಸ್ವಿ ಜೀವನ ನಡೆಸಲು ವರ್ಷಗಳಿಂದ ತನ್ನನ್ನು  ತೊಡಗಿಸಿಕೊಂಡಿದೆ. ಸಂಸ್ಥೆಯು ಕರ್ನಾಟಕದಿಂದ 1000 ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆ ನಡೆಸಿ ದೀರ್ಘಾಯುಷ್ಯ ನೀಡಿದೆ. ಸುಮಾರು 10 ಸಾವಿರ ವಿಕಲಚೇತನರಿಗೆ ಹಲವು ರೀತಿಯಲ್ಲಿ ನೆರವು ನೀಡಿದೆ ಎಂದು ಹೇಳಿದರು. 

ಕಳೆದ ಒಂದು ವರ್ಷದಲ್ಲಿ ಸಂಸ್ಥೆಯು 1000ಕ್ಕೂ ಹೆಚ್ಚು ಅಂಗವಿಕಲರಿಗೆ ಕೃತಕ ಅಂಗಗಳನ್ನು ಒದಗಿಸಿದೆ. ವಿಕಲಚೇತನರಿಗೆ ಹೆಚ್ಚಿನ ನೆರವು ನೀಡಲು ಈ ದಿಸೆಯಲ್ಲಿ ಈ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರಕ್ಕೆ ಬರುವ ವಿಕಲಚೇತನರಿಗೂ ಉಚಿತ ಊಟ ಒದಗಿಸಲಾಗುತ್ತಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಶಿಬಿರಗಳನ್ನು ಆಯೋಜಿಸಿ ವಿಕಲಚೇತನರಿಗೆ ನೆರವು ನೀಡಲಿದೆ. ನಾರಾಯಣ ಸೇವಾ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷ ಕೈಲಾಶ್ ಮಾನವ್ ಅವರಿಗೆ ಅತ್ಯುತ್ತಮ ಸಾಮಾಜಿಕ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಅಗರವಾಲ್ ವಿಕಲಚೇತನರ ಹಿತೈಷಿ. ಅಂಗವಿಕಲರಿಗೆ ಕ್ರೀಡಾ ಸ್ಪರ್ಧೆ, ಕಂಪ್ಯೂಟರ್, ಮೊಬೈಲ್, ಹೊಲಿಗೆ ತರಬೇತಿ ನೀಡುವ ಜೊತೆಗೆ ಅವರಿಗಾಗಿ ಸಾಮೂಹಿಕ ವಿವಾಹಗಳನ್ನು ಸಹ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ನಾರಾಯಣ್‌ ಸೇವಾ ಸಂಸ್ಥೆಯ ವಿನೋದ್ ಜೈನ್, ಖುಬಿ ಲಾಲ್ ಮೆನಾರಿಯಾ, ಕೌಶಲ್ ಪಲಿವಾಲ್, ಹೇಮಂತ್ ಮೇಘವಾಲ್,  ಮಾಧ್ಯಮ ಸಮನ್ವಯಕಾರರಾದ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top