ಬೆಂಗಳೂರು: ರಾಜ್ಯ ಸರ್ಕಾರದ ಕೆಳ ಹಂತದ ಹುದ್ದೆಗಳಲ್ಲಿರುವ ಅಭ್ಯರ್ಥಿಗಳಿಗೆ ಕೆನೆಪದರದಿಂದ ವಿನಾಯಿತಿ ನೀಡುವ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧರಿಸಿ ಹಿಂದುಳಿದ ವರ್ಗಗಳ ಆಯೋಗವು ತನ್ನ ಶಿಫಾರಸುಗಳಲ್ಲಿ ಒಬಿಸಿಗಳಿಗೆ ಕೆನೆಪದರವನ್ನು ಅನ್ವಯಿಸಲು ಶಿಫಾರಸು ಮಾಡಿತ್ತು. ಕಳೆದ ಶುಕ್ರವಾರ ನಡೆದ ಸಚಿವ ಸಂಪುಟದ ಕಾರ್ಯಸೂಚಿಗಳಲ್ಲಿ ಒಂದು ವಿಷಯವಾಗಿತ್ತು.
ಅಭ್ಯರ್ಥಿಗಳಿಗೆ ಕೆನೆಪದರದಿಂದ ವಿನಾಯಿತಿ ನೀಡುವ ಸುತ್ತೋಲೆಯನ್ನು ಸಚಿವ ಸಂಪುಟ ಸಭೆಗೆ ಒಂದು ದಿನ ಮೊದಲು ಅಂದರೆ ಗುರುವಾರ ಹೊರಡಿಸಲಾಗಿದೆ. ಸಂವಿಧಾನದ ವಿಧಿ 15(4) ಮತ್ತು 16(4) ರ ಅಡಿಯಲ್ಲಿ ನೇರ ನೇಮಕಾತಿಗಾಗಿ, ವರ್ಗ 2, 2ಬಿ, 3ಎ, 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು, ಕೆಳ ಹಂತದ ಹುದ್ದೆಗಳಲ್ಲಿ ನಿಗದಿತ-ನಿರ್ದಿಷ್ಟ ಅವಧಿಯ ಅನುಭವವನ್ನು ಹೊಂದಿದ್ದರೆ, ಅಂತಹ ಸಂದರ್ಭದಲ್ಲಿ ಅವರಿಗೆ ಕೆನೆಪದರ ನಿಯಮ ಅನ್ವಯಿಸುವುದಿಲ್ಲ ಎಂದು ಹಿಂದುಳಿದ ವರ್ಗಗಳ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಆದ್ದರಿಂದ, ಈ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಸೇವೆಯಲ್ಲಿ ವಿನಾಯಿತಿ ನೀಡಲು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಮತ್ತು ಜಾತಿ ಪ್ರಮಾಣಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ಗಳಿಗೆ ಸೂಚನೆ ನೀಡಿದೆ. ಈ ನಿರ್ಧಾರವು ಕೆಳ ಹಂತದ ಹುದ್ದೆಗಳಲ್ಲಿರುವ ಸರ್ಕಾರಿ ನೌಕರರ ಮಕ್ಕಳು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕೋಟಾ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಹಿಂದೆ ಎಸ್ ಸಿ/ಎಸ್ ಟಿ ಮತ್ತು ವರ್ಗ I ರ ಅಭ್ಯರ್ಥಿಗಳಿಗೆ ಕೆನೆಪದರದ ವಿನಾಯಿತಿ ನೀಡಲಾಗಿತ್ತು, ಅದನ್ನು ಈಗ ಒಬಿಸಿಗಳಿಗೂ ವಿಸ್ತರಿಸಿದೆ.
ಕರ್ನಾಟಕದಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೆನೆಪದರದ ಸ್ಥಾನಮಾನವನ್ನು ನಿರ್ಧರಿಸಲು ಆದಾಯ ಮಿತಿ ವಾರ್ಷಿಕ 8 ಲಕ್ಷ ರೂಪಾಯಿಗಳಾಗಿದೆ. ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ಈ ಮಿತಿಗಿಂತ ಹೆಚ್ಚಿದ್ದರೆ, ಅವರು ಉದ್ಯೋಗ ಅಥವಾ ಶಿಕ್ಷಣದಲ್ಲಿ ಒಬಿಸಿ ಮೀಸಲಾತಿಗೆ ಅರ್ಹರಲ್ಲ.