ಚುನಾವಣಾ ಪ್ರಣಾಳಿಕೆಯಂತೆ ಒಳ‌ಮೀಸಲಾತಿ ಜಾರಿಗೆ ನಾವು ಬದ್ದ: ಈ ದಿಕ್ಕಿನಲ್ಲಿ ಇವತ್ತಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ: ಸಿದ್ದರಾಮಯ್ಯ

Kannada Nadu
ಚುನಾವಣಾ ಪ್ರಣಾಳಿಕೆಯಂತೆ ಒಳ‌ಮೀಸಲಾತಿ ಜಾರಿಗೆ ನಾವು ಬದ್ದ: ಈ ದಿಕ್ಕಿನಲ್ಲಿ ಇವತ್ತಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ: ಸಿದ್ದರಾಮಯ್ಯ

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಒಳ‌ಮೀಸಲಾತಿ ಜಾರಿಗೆ ನಾವು ಬದ್ದ. ಈ ದಿಕ್ಕಿನಲ್ಲಿ ಇವತ್ತಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹ ನಡೆಯಲಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ.

“ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025” ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿದ್ದೆವು. ಪರಿಶಿಷ್ಠ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತು ಸಮಿತಿ ವರದಿ ನೀಡಿದೆ.  ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಈ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು ಸಂಗ್ರಹಿಸಲು ಸಮೀಕ್ಷೆ ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ ಎಂದರು.

ಕಳೆದ 2011ರ ಜನಗಣತಿ ಆಧಾರದಲ್ಲಿ ಸದಾಶಿವ ಆಯೋಗ ಪರಿಶಿಷ್ಟ  ಜಾತಿ ಸಮುದಾಯಗಳ ಜನಸಂಖ್ಯೆಯನ್ನು ಗುರುತಿಸಿತ್ತು. ಆಗಸ್ಟ್ 1, 2024 ರಲ್ಲಿ ಸುಪ್ರೀಂಕೋರ್ಟ್ ಒಳ ಮೀಸಲಾತಿ ಪರವಾಗಿ ನೀಡಿರುವ ಆದೇಶದಂತೆ ನಾವು ಮುಂದುವರೆದೆವು. ಆದಿ ದ್ರಾವೀಡ, ಆದಿ ಕರ್ನಾಟಕ, ಆದಿ ಆಂಧ್ರ  ಸಮುದಾಯದಲ್ಲಿ ಯಾರು ಎಷ್ಟು ಮಂದಿ ಇದ್ದಾರೆ ಎನ್ನುವುದು ಖಚಿತವಾಗಿ ಗೊತ್ತಾಗಬೇಕಿದೆ. ಎಡಗೈ ಸಮುದಾಯ, ಬಲಗೈ ಸಮುದಾಯ ಎಷ್ಟಿದೆ ಎನ್ನುವುದು ವೈಜ್ಞಾನಿಕವಾಗಿ ತಿಳಿಯಬೇಕಿದೆ.  101 ಪರಿಶಿಷ್ಠ ಜಾತಿಗಳಲ್ಲಿ ಒಳ ಮೀಸಲಾತಿ ಕೊಡುವಾಗ ನಿರ್ದಿಷ್ಟ ಅಂಕಿ ಅಂಶಗಳು ಬೇಕಾಗುತ್ತವೆ ಎಂದರು.

ಇವತ್ತಿನಿಂದ 17 ರವರೆಗೆ ಮನೆ ಮನೆಗೆ ಹೋಗಿ ದತ್ತಾಂಶ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಸುಮಾರು 65 ಸಾವಿರ ಶಿಕ್ಷಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ. 10-12 ಮಂದಿ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕ ಇರ್ತಾರೆ. ಮನೆ ಮನೆ ಭೇಟಿ ಕೊಡುವ ಜೊತೆಗೆ, ಮೊದಲ ಹಂತದಲ್ಲಿ ಇದೇ 17 ರ ವರೆಗೆ ಸಮೀಕ್ಷೆ ನಡೆಯಲಿದೆ ಎಂದು ಹೇಳಿದರು.

ನಂತರ ಮೇ 19 ರಿಂದ 21 ರ ವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಸಮೀಕ್ಷೆ ನಡೆಯುತ್ತದೆ. ಯಾರಾದರೂ ಬಿಟ್ಟು ಹೋಗಿದ್ದರೆ ಶಿಬಿರಕ್ಕೆ ಬಂದು ಸೇರಿಸಬಹುದು. ಮೂರನೇ ಹಂತದಲ್ಲಿ 19 ರಿಂದ 22 ರವರೆಗೆ ಆನ್ ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ಕಲ್ಪಿಸಲಾಗಿದೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹಿಸಲಾಗುವುದು. ನಿಖರ ದತ್ತಾಂಶ ಸಂಗ್ರಹಿಸಿದ ಮೇಲೆ ನಮಗೆ ಶಿಫಾರಸ್ಸು ಮಾಡ್ತಾರೆ. ಒಟ್ಟು 60 ದಿನ ಸಮಯಾವಕಾಶ ನೀಡಲಾಗಿದೆ ಎಂದು ಹೇಳಿದರು.

ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6:30 ರಿಂದ ಸಂಜೆ 6:30ರವರೆಗೆ ಮೊಬೈಲ್ ಆಪ್ ಎನಾಬಲ್ ಮಾಡಲಾಗಿರುತ್ತದೆ. ಇದಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಯಾರೂ ತಪ್ಪಿಸಬಾರದು.

ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ವರದಿ ಜಾರಿ ಬಗ್ಗೆ ಘೋಷಣೆ ಮಾಡಿದ್ದೆವು. ಒಳ ಮೀಸಲಾತಿ ಪರವಾಗಿ ಸುಪ್ರೀಂಕೋರ್ಟ್ ಕೂಡ ಹೇಳಿದೆ. ಸಮುದಾಯದ ಸಂಘಟನೆಗಳು, ಮುಖಂಡರಿಗೂ ನಾವು ಒಳ ಮೀಸಲಾತಿ ಬಗ್ಗೆ ಭರವಸೆ ನೀಡಿದ್ದೆವು.   ಆದ್ದರಿಂದ ದತ್ತಾಂಶ ಸಂಗ್ರಹ ಸಮೀಕ್ಷೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಮಾಹಿತಿ ಕೊಡಬೇಕು. ಎಲ್ಲಾ ಸಂಘಟನೆಗಳೂ ಇದಕ್ಕೆ ಸಹಕರಿಸಿ ಎಂದೂ ಸಿಎಂ ಮನವಿ ಮಾಡಿದರು.

ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪ, ಶಿವರಾಜ್ ತಂಗಡಗಿ, ಶಿವಾನಂದ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕರಾದ ರೂಪಶಶಿಕಲ್,  ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ನಸೀರ್ ಅಹಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";