ಹೊಸಪೇಟೆ: ನಾವು ಭಾರತೀಯರು, ಹಿಂದೂಸ್ತಾನಿಗಳು. ಪಾಕಿಸ್ತಾನ ಎಂದಿಗೂ ನಮ್ಮ ಶತ್ರು. ಪ್ರಧಾನಮಂತ್ರಿ ನರೇಂದ್ರ, ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿದ್ದೇ ಆದರೆ, ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗಲು ಸಿದ್ಧನಿದ್ದೇನೆಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತೀಯರು, ನಾವು ಹಿಂದೂಸ್ತಾನಿಗಳು. ನಮಗೂ ಪಾಕಿಸ್ತಾನಕ್ಕೂ ಯಾವ ಸಂಬಂಧಾನೂ ಇಲ್ಲ. ಯುದ್ಧ ಮಾಡಬೇಕು ಎಂದರೆ ನಾನು ರೆಡಿ. ಮಂತ್ರಿಯಾಗಿ ನನ್ನನ್ನು ಕಳುಹಿಸುತ್ತಾರೆ ಎಂದರೆ ನಾನು ಸಿದ್ಧ. ಯುದ್ಧಕ್ಕೆ ನಾನು ಹೋಗುತ್ತೇನೆ. ದೇಶಕ್ಕಾಗಿ ಯುದ್ಧ ಮಾಡಲು ನಾನು ರೆಡಿ.. ನಡೀರಿ ಹೋಗಿ ಬಿಡೋಣ ಎಂದು ಹೇಳಿದರು.
ಈ ದೇಶಕ್ಕೋಸ್ಕರ ನಾನು ಯುದ್ಧಕ್ಕೆ ಹೋಗುತ್ತೇನೆ. ನಾನು ತಮಾಷೆಗೆ, ಜೋಶ್ನಲ್ಲಿ ಹೇಳುತ್ತಿಲ್ಲ. ಈ ದೇಶಕ್ಕೋಸ್ಕರ ಹೋಗುತ್ತೇನೆ, ನರೇಂದ್ರ ಮೋದಿ, ಅಮಿತ್ ಶಾ ಅವ್ರು ಶಸ್ತ್ರಾಸ್ತ್ರವನ್ನು ನನ್ನ ಕೈಗೆ ಕೊಡಲಿ. ಅಲ್ಲಾ ಮೇಲೆ ಆಣೆ, ಶಸ್ತ್ರಾಸ್ತ್ರವನ್ನು ಬೆನ್ನಲ್ಲಿ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಹೋಗುತ್ತೇನೆಂದು ಎದೆ ತಟ್ಟಿ ತಟ್ಟಿ ಹೇಳಿದರು.