ಬೆಂಗಳೂರು: “ನಾವು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಪರಿಹಾರ ಎಂದು 500 ರೂ ಸೇರಿಸಿ ಮಹಿಳೆಯರಿಗೆ 2 ಸಾವಿರ ನೀಡುತ್ತಿದ್ದೇವೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಯವರು ಗ್ಯಾಸ್ ಸಿಲಿಂಡರ್ ಬೆಲೆಯನ್ನ 200 ರೂಪಾಯಿ ಕಡಿಮೆ ಮಾಡಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ಪ್ರಧಾನಿಗಳು ಹೆದರಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಬುಧವಾರ ಅವರು ಪ್ರತಿಕ್ರಿಯಿಸಿದ್ದು ಹೀಗೆ;
“ಉಚಿತ ಕೊಡುಗೆಯಿಂದ ದಿವಾಳಿಯಾಗಲಿದ್ದೇವೆ ಎಂದವರು ಏಕೆ ಮಧ್ಯಪ್ರದೇಶದಲ್ಲಿ 1,500 ಕೊಡುತ್ತಿದ್ದಾರೆ, 200 ರೂಪಾಯಿ ಸಿಲಿಂಡರ್ ಬೆಲೆ ಏಕೆ ಇಳಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮಹಿಳೆಯರು ಕಾಂಗ್ರೆಸ್‌ನವರು ಕೊಡುತ್ತಿದ್ದಾರೆ ನಿಮಗೆ ಏಕೆ ಆಗುತ್ತಿಲ್ಲ ಎಂದು ಬೈಯ್ಯುತ್ತಿದ್ದಾರೆ, ಅದಕ್ಕೆ ಬಿಜೆಪಿ ಸರ್ಕಾರ ಕರ್ನಾಟಕ ಮಾದರಿ ಅನುಸರಿಸುತ್ತಿದೆ. ಈ ದೇಶದ ಜನರಿಗೆ ಹಣ ಕೊಡಲು ನಮ್ಮದೇನು ತಕರಾರಿಲ್ಲ. ಆದರೆ “ಕರ್ನಾಟಕ ಮಾದರಿ”ಯಿಂದ ಹೆದರಿಕೊಂಡಿದ್ದಾರೆ ಎಂಬುದು ಸತ್ಯ.
ಶಕ್ತಿ, ಗೃಹಜ್ಯೋತಿ, ಅನ್ನ ಭಾಗ್ಯ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿವೆ. ಇದರಿಂದ ಇಡೀ ದೇಶದ ಹೆಣ್ಣು ಮಕ್ಕಳು “ಕರ್ನಾಟಕ ಮಾದರಿ”ಗೆ ಮನಸೋತಿದ್ದಾರೆ. ನಾವು 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಕಾಂಗ್ರೆಸ್ ಪಕ್ಷದ ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದೆ, ಜನರು ಸಂಭ್ರಮಿಸುತ್ತಿದ್ದಾರೆ.
ನಾನು ಮತ್ತು ಸಿದ್ದರಾಮಯ್ಯ ಅವರು ಸೇರಿ ಗ್ಯಾರಂಟಿ ಕಾರ್ಡಿಗೆ ಸಹಿ ಮಾಡಿದ್ದೆವು, ಇದಕ್ಕೆ ಪ್ರಿಯಾಂಕ ಗಾಂಧಿ ಅವರು ಸಾಕ್ಷಿಯಾಗಿದ್ದರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಸೇರಿದಂತೆ 1 ಲಕ್ಷ ಜನ ಮಹಿಳೆಯರು ಸಾಕ್ಷಿಯಾಗಲಿದ್ದಾರೆ. 1.10 ಕೋಟಿ ಮಹಿಳೆಯರ ಬದುಕಿನಲ್ಲಿ ಇದೊಂದು ಪವಿತ್ರವಾದ ದಿನ, 12,600 ಕಡೆ ನೇರಪ್ರಸಾರವಾಗಲಿದೆ.
ನಾವು 1.30 ಕೋಟಿ ಫಲಾನುಭವಿಗಳನ್ನು ತಲುಪುವ ಬಗ್ಗೆ ಅಂದಾಜಿಸಿದ್ದೆವು. ತಾಂತ್ರಿಕ ಕಾರಣಗಳಿಂದ ಅನೇಕ ಮಹಿಳೆಯರಿಗೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಲುಪಿಸುವ ಗ್ಯಾರಂಟಿಯನ್ನು ನಾನು ನೀಡುತ್ತೇನೆ.
ಕೇವಲ 100 ದಿನಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ, ಸಿದ್ದರಾಮಯ್ಯ ಅವರು ಮೊದಲನೇ ಸಚಿವಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಯಿತು. ಬಿಜೆಪಿ ಆಡಳಿತ ಇರುವ ಯಾವ ರಾಜ್ಯಗಳಲ್ಲೂ ಮಾಡದ ಕೆಲಸ ನಾವು ಮಾಡಿದ್ದೇವೆ. ಬಿಜೆಪಿಯವರ ಪ್ರಣಾಳಿಕೆ ತೆಗೆದು ನೋಡಲಿ, ಅವರದ್ದು ಕೇವಲ ಭರವಸೆ ನಮ್ಮದು ಗ್ಯಾರಂಟಿ.”
ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, “ಅದರಲ್ಲಿ ಇರುವುದನ್ನು ಒಂದೇ ಒಂದು ಸಾಬೀತು ಮಾಡಲಿ. ಅವರ ಕರ್ಮಕಾಂಡಗಳನ್ನು ಬಿಚ್ಚುವ ಕಾಲ ಹತ್ತಿರದಲ್ಲಿದೆ. ಚಾರ್ಜ್ ಶೀಟ್ ಎಂದರೆ ಏನು? ಅವರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ.
ಡಿ.ಕೆ.ಶಿವಕುಮಾರ್ 10 – 15 ಪರ್ಸೆಂಟ್ ಕಮಿಷನ್ ಕೇಳಿದರು ಎಂದು ಗುತ್ತಿಗೆದಾರರಿಗೆ ಹೆದರಿಸಿ ಅವರ ಬಾಯಲ್ಲಿ ರಾಜ್ಯಪಾಲರ ಬಳಿ ಸುಳ್ಳು ಹೇಳಿಸಿದರು. ಆನಂತರ ಅದೇ ಗುತ್ತಿಗೆದಾರರು ಪೊಲೀಸರ ಬಳಿ, ರಾಜ್ಯಪಾಲರ ಬಳಿ ನಾವು ಆರೋಪ ಮಾಡಿಲ್ಲ ಎಂದು ಸತ್ಯ ಹೇಳಿದರು” ಎಂದು ವಾಗ್ದಾಳಿ ನಡೆಸಿದರು.
ಕಾವೇರಿ ನೀರು ವಿಚಾರವಾಗಿ ಕೇಳಿದಾಗ, “ನಾಳೆ ದೆಹಲಿಗೆ ಹೋಗುತ್ತಿದ್ದೇನೆ, ಅಲ್ಲಿ ನಮ್ಮ ವಕೀಲರನ್ನು ಭೇಟಿಯಾಗಿ ಕಾವೇರಿ ನೀರಿನ ವಿಚಾರವಾಗಿ ಚರ್ಚೆ ನಡೆಸುತ್ತೇನೆ. ಸೆ.1 ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ಸ್ ಬೇಡಿಕೆ ಇಟ್ಟಿದ್ದರು. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿ ನಾವು 3 ಸಾವಿರ ಕ್ಯೂಸೆಕ್ಸ್ ಬಿಡುತ್ತೇವೆ ಎಂದು ಹೇಳಿದ್ದೆವು. ಕೊನೆಗೆ ವಾದ- ವಿವಾದಗಳು ನಡೆದು 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿದ್ದಾರೆ. ಮುಂದಿನ ಸಭೆಯಲ್ಲಿ ಹೇಗೆ ನಮ್ಮ ವಾದ ಮಂಡಿಸಬೇಕು ಎಂದು ಚರ್ಚೆ ನಡೆಸಲಿದ್ದೇನೆ” ಎಂದು ತಿಳಿಸಿದರು.
ಮೇಲ್ಮನವಿ ಸಲ್ಲಿಸಬಹುದಿತ್ತು ಕರ್ನಾಟಕ ಸರ್ಕಾರ ಈ ಕೆಲಸ ಮಾಡಿಲ್ಲ ಎಂದು ಬೊಮ್ಮಾಯಿ ಅವರು ಆರೋಪ ಬಗ್ಗೆ ಕೇಳಿದಾಗ, “ಅವರು ಏನೇ ಸಲಹೆ ಕೊಟ್ಟರು ನಾವು ತೆಗೆದುಕೊಳ್ಳುತ್ತೇವೆ, ಈ ಡ್ಯಾಂಗಳ ಕೀಲಿ ಕೈ ನಮ್ಮ ಬಳಿ ಇದೆ, ಅದನ್ನು ಬೇರೆಯವರ ಕೈಗೆ ಬಿಟ್ಟುಕೊಡುವುದಿಲ್ಲ, ನಮ್ಮ ರೈತರ ಹಿತ ಮುಖ್ಯ ನಮಗೆ ಅದಕ್ಕೆ ಈಗಾಗಲೇ 2 ಬಾರಿ ನೀರು ಬಿಟ್ಟಿದ್ದೇವೆ. ಬೊಮ್ಮಾಯಿ ಅವರು ರಾಜಕಾರಣ ಮಾಡಬೇಕಲ್ಲ ಅದಕ್ಕೆ ಮಾತನಾಡುತ್ತಾರೆ. ಬಿಜೆಪಿಯ ಮಾಜಿ ನೀರಾವರಿ ಸಚಿವರೊಬ್ಬರು ಯಾವುದೇ ಕಾರಣಕ್ಕು ನೀರು ಬಿಡಬಾರದು ಎಂದು ಹೇಳಿದ್ದಾರೆ, ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು. ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ಏನಾಯಿತು, ದೇವೆಗೌಡರು ಪ್ರಧಾನಿಗಳಾಗಿದ್ದಾಗ ಏನಾಯಿತು, ಇದೆಲ್ಲಾ ಕಾಲ, ಕಾಲದಿಂದ ನಡೆದುಕೊಂಡು ಬಂದಿರುವುದೇ” ಎಂದರು.