ರಾಜಕೀಯ ವ್ಯವಸ್ಥೆಯಲ್ಲಿ ಎದುರಾಳಿಗಳನ್ನು ಎದುರಿಸಲು ಚೆಸ್ ಸಹಕಾರಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Kannada Nadu
ರಾಜಕೀಯ ವ್ಯವಸ್ಥೆಯಲ್ಲಿ ಎದುರಾಳಿಗಳನ್ನು ಎದುರಿಸಲು ಚೆಸ್ ಸಹಕಾರಿ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: “ರಾಜಕೀಯ ಎಂಬುದು ಕೌಶಲ್ಯ. ಚೆಸ್ ಎಂಬುದು ಮೈಂಡ್ ಗೇಮ್. ರಾಜಕೀಯದಲ್ಲಿ ನಾವು  ನಮ್ಮ ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ರಾಜಕೀಯ ವ್ಯವಸ್ಥೆಯಲ್ಲಿ ಎದುರಾಳಿಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಚೆಸ್ ನಮಗೆ ಕಲಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದ ಕೋರಮಂಗಲದ ಒಳಂಗಾಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ “2ನೇ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್ ಗ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿ – 2025” ಕ್ಕೆ ಚೆಸ್ ಆಡುವ ಮೂಲಕ ಉದ್ಘಾಟಿಸಿದ ಅವರು, ರಾಜಕೀಯ ವ್ಯವಸ್ಥೆಯಲ್ಲಿ ಹೇಗೆ ಆಟ ಆಡಬೇಕು ಎಂಬುದನ್ನು ಚೆಸ್ ಅರ್ಥಮಾಡಿಸುತ್ತದೆ. ಚೆಸ್ ನಲ್ಲಿ ರಾಜನನ್ನು ರಕ್ಷಿಸಬೇಕು. ಅದಕ್ಕಾಗಿಯೇ ರಾಜ ಸಮರ್ಥವಾಗಿ ಮೈಂಡ್ ಗೇಮ್ ಆಡಬೇಕು. ಇದೇ ರೀತಿ ರಾಜಕೀಯದಲ್ಲೂ ಎದುರಾಳಿಗಳನ್ನು ಎದುರಿಸುವುದು ಮುಖ್ಯವಾಗಿದೆ. ಚೆಸ್ ಈ ಎಲ್ಲಾ ಕೌಶಲ್ಯಗಳನ್ನು ನಮಗೆ ಕಲಿಸುತ್ತದೆ ಎಂದರು.

ಚೆಸ್ ಆಡುವ ಕುಟುಂಬ ಶಿಸ್ತಿನಿಂದ ಇರಲಿದ್ದು, ವ್ಯವಸ್ಥೆಯಲ್ಲಿ ಸದೃಢವಾಗಿ ರೂಪುಗೊಳ್ಳುತ್ತದೆ. ಚೆಸ್ ಕ್ರೀಡಾಕೂಟಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಕೊಂಡೊಯ್ಯಲು ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಆಸಕ್ತಿ ತೋರಿರುವುದು ಒಳ್ಳೆಯ ಬೆಳವಣಿಗೆ. ಚೆಸ್ ಅನ್ನು ನಮ್ಮ ಜಿಲ್ಲೆಯಲ್ಲೂ ಪ್ರೋತ್ಸಾಹಿಸಲು ಸಾಧ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತೇವೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಭಾಗಿಯಾಲು ಸಂತಸವಾಗುತ್ತಿದೆ. ಚೆಸ್ ಕ್ರೀಡೆಗೆ ಹತ್ತು ಸಾವಿರಕ್ಕೂ ಅಧಿಕ ಆಟಗಾರರು ನೋಂದಣಿಯಾಗಿರುವುದು ಉತ್ತಮ ಬೆಳವಣಿಗೆ. ಈ ಕ್ರೀಡೆಗೆ ಅತ್ಯುತ್ತಮ ಸ್ಪಂದನೆ ದೊರೆತಿದ್ದು, ಸಂಘಟಕರ ಶ್ರಮ ಶ್ಲಾಘನೀಯ. ಐಎಎಸ್ ಅಧಿಕಾರಿಗಳು ಸಹ ಪ್ರೋತ್ಸಾಹ ನೀಡಿದ್ಧಾರ. ಇದು ಒಂದು ದಿನದ ಕಾರ್ಯಕ್ರಮವಲ್ಲ.  ಭಾರತ ಚೆಸ್ ಗೆ ಹೆಸರುವಾಸಿಯಾಗಿದ್ದು, ವಿಶ್ವನಾಥನ್ ಆನಂದ್, ಗುಕೇಶ್ ಜಾಗತಿಕವಾಗಿ ದೊಡ್ಡ ಸಾಧನೆ ಮಾಡಿದ್ದಾರೆ. ಚೆಸ್ ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯನ್ನು ಅನಾವರಣಗೊಳಿಸಲಿದೆ ಎಂದರು.

ಕಲ್ಯಾಣ ಕರ್ನಾಟಕ ಮಂಡಳಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಮಾತನಾಡಿ, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಜನಸಂಖ್ಯೆ ರಾಜ್ಯದ ನಾಲ್ಕನೇ ಒಂದು ಭಾಗದಷ್ಟಿದೆ. ಈ ಭಾಗದಲ್ಲಿ ಚೆಸ್ ಕ್ರೀಡೆಗೆ ಆದ್ಯತೆ ನೀಡುವುದು ತಮ್ಮ ಉದ್ದೇಶವಾಗಿದೆ.. ಚೆಸ್ ಎದುರಾಗಳಿಗಳನ್ನು ಆಧರಿಸಿದ ಆಟ. ನಮ್ಮ ಮುಂದೆ ಇರುವವರು ಹೇಗೆ ಹೇಗೆ ಸಾಗುತ್ತಾರೆ ಎಂಬ ಆಧಾರದ ಮೇಲೆ ನಾವು ನಮ್ಮ ನಡೆಯನ್ನು ನಿರ್ಧರಿಸಬೇಕಾಗುತ್ತದೆ. 20 ದೇಶಗಳು, 25 ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.  ಬೆಂಗಳೂರು ಚೆಸ್ ರಾಜಧಾನಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಮಧುಕರ್ ಟಿ.ಎನ್ ಮಾತನಾಡಿ, 10 ಸುತ್ತಿನ ಸ್ವಿಸ್ ಲೀಗ್ ಸ್ಪರ್ಧೆಯಲ್ಲಿ 22 ವರ್ಷದ ಗ್ರ್ಯಾಂಡ್‌ಮಾಸ್ಟರ್ ಪನ್ನೀರ್‌ಸೆಲ್ವಂ ಇನಿಯನ್ ಭಾಗವಹಿಸುತ್ತಿದ್ದಾರೆ.  ಅಂತರರಾಷ್ಟ್ರೀಯ ಮಾಸ್ಟರ್ ಮತ್ತು ಗ್ರ್ಯಾಂಡ್‌ಮಾಸ್ಟರ್ ಮಾನದಂಡಗಳು ಮತ್ತು ಪ್ರಶಸ್ತಿಗಳನ್ನು ಪಡೆಯಲು ದೊಡ್ಡ ವೇದಿಕೆಗಳೆಂದು ಪರಿಗಣಿಸಲಾಗಿದೆ. 1981 ರಲ್ಲಿ ಕರ್ನಾಟಕದಲ್ಲಿ ನಡೆದ ಮೊದಲ ಚೆಸ್ ಪಂದ್ಯಾವಳಿಯ ನಂತರ, ರಾಜ್ಯದಲ್ಲಿ ಚೆಸ್ ದೀರ್ಘಕಾಲದವರೆಗೆ ನಿಸ್ತೇಜವಾಗಿತ್ತು. ಪೋಷಕರು ಮತ್ತು ಚೆಸ್ ಆಟಗಾರರ ಪ್ರಯತ್ನವು ಕರ್ನಾಟಕದಲ್ಲಿ ಚೆಸ್ ಅನ್ನು ಮತ್ತೆ ಪುನರುಜ್ಜೀವನಗೊಳಿಸಿದೆ.  ರಾಜ್ಯದಲ್ಲಿ ಚೆಸ್ ಪ್ರವರ್ಧಮಾನಕ್ಕೆ ಬರುತ್ತಿರುವುದು ಸಂತಸದಾಯಕ ಎಂದರು.

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸೌಮ್ಯ ಎಂ.ಯು ಮಾತನಾಡಿ, ಬೆಂಗಳೂರಿನಲ್ಲಿ ಚೆಸ್ ಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನಮಾನ ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ. ಪಂದ್ಯಾವಳಿಯಲ್ಲಿ ಗೆದ್ದವರಿಗೆ  50 ಲಕ್ಷ ರೂ ಬಹುಮಾನ ದೊರೆಯುತ್ತಿದೆ. ಈ ಪಂದ್ಯಾವಳಿಯಿಂದ ಚೆಸ್ ಆಟಗಾರರ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. 6 ರಿಂದ 82 ವರ್ಷಗಳ ಚೆಸ್ ಆಟಗಾರರು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ. ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಣದೀಪ್ ಡಿ, ಅಖಿಲ ಭಾರತ ಚೆಸ್ ಫೆಡರೇಷನ್ ಉಪಾಧ್ಯಕ್ಷರಾದ ಡಾ.ಡಿ.ಪಿ. ಅನಂತ, ಮತ್ತಿತರರು ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";