ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ 100 ದಿನಗಳಲ್ಲಿ ಜನರ ನಿರೀಕ್ಷೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ ಬೋಸರಾಜು ತಿಳಿಸಿದ್ದಾರೆ.
ಕಾಂಗ್ರೆಸ್ ಸರಕಾರ 100 ದಿನಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದು ಶತ ದಿನ ಪೂರೈಸಿದೆ. ನಾಡಿನ ಮತದಾರರು 135 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಪೂರ್ಣ ಬಹುಮತದ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನರಿಗೆ ನಾವು ನೀಡಿರುವ ವಾಗ್ದಾನದಂತೆ ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ಯೋಜನೆಗೂ ಸದ್ಯದಲ್ಲೇ ಚಾಲನೆ ಸಿಗಲಿದೆ. ಗ್ಯಾರಂಟಿ ಮತ್ತು ಅಭಿವೃದ್ದಿ ಯೋಜನೆಗಳ ಅನುಷ್ಠಾನದಲ್ಲಿ ದಾರ್ಶನಿಕರ ತೋರಿಸಿದ ಸಮಾನತೆಯ ಅಂಶಗಳನ್ನು ಅಳವಡಿಸಿಕೊಂಡಿದ್ದೇವೆ. ಜನರು ನೀಡಿರುವ ಅವಕಾಶವನ್ನ ಸದುಪಯೋಗಪಡಿಸಿಕೊಂಡು ಜನರ ನಿರೀಕ್ಷೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮೊಂದಿಗೆ ಕೈಜೋಡಿಸಿ, ಕನ್ನಡ ನಾಡು ನುಡಿ ಗೆಲ್ಲಿಸಿ, ಕರುನಾಡನಲ್ಲಿ ಅಭಿವೃದ್ದಿಯ ದೀಪವನ್ನು ಬೆಳಗಿಸಲು ಬೆಂಬಲವಾಗಿ ನಿಂತಿರುವ ನಾಡಿನ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಚಿವರು ತಿಳಿಸಿದ್ದಾರೆ.