ತಕರಾರು ಪ್ರಕರಣಗಳಿಗೆ ವೇಗ ನೀಡಲಾಗಿದೆ, ಜನರ ಅಲೆದಾಟಕ್ಕೂ ಬ್ರೇಕ್ ಹಾಕಲಾಗಿದೆ

ಬೀದರ್ : ಜನ ಸಾಮಾನ್ಯರ ತಕರಾರು ಅರ್ಜಿಗಳನ್ನು ಕಳೆದ ಎರಡು ತಿಂಗಳಿನಿಂದ ಕಾಲಮಿತಿಯೊಳಗೆ ತ್ವರಿತ ವಿಲೇವಾರಿಗೊಳಿಸಲಾಗುತ್ತಿದೆ, ತಾಲೂಕು ಕಚೇರಿಗಳಿಗೆ ಜನರ ಅನಗತ್ಯ ಓಡಾಟಕ್ಕೂ ಇದೀಗ ಬ್ರೇಕ್ ಹಾಕಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳ ೀ ಜನಪರ ಸೇವೆ ಹೀಗೆ ಮುಂದುವರೆಯಲಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

 

ಕಳೆದ ಎರಡು ತಿಂಗಳಿಂದ ನಿರಂತರವಾಗಿ ಬೆಳಗಾವಿ, ಗುಲಬುರ್ಗಾ, ಮೈಸೂರು ಹಾಗೂ ಬೆಂಗಳೂರು ವಿಭಾಗಗಳಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಾಕಿ ಇದ್ದ ಸಾವಿರಾರು ತಕರಾರು ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು, ಜನಸ್ನೇಹಿ ಆಡಳಿತ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಸಚಿವ ಕೃಷ್ಣ ಬೈರೇಗೌಡ ಅವರು ಮುಂದುವರೆದ ಭಾಗವಾಗಿ ಇಂದಿನಿಂದ ಜಿಲ್ಲಾವಾರು ಪ್ರವಾಸ ಆರಂಭಿಸಿದ್ದಾರೆ.

ಬೀದರ್ ನಲ್ಲಿ ಇಂದು ನಡೆದ ಕಂದಾಯ ಇಲಾಖೆಯ ಮೊದಲ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಜನ ಸಾಮಾನ್ಯರು ಹೊಸ ಸರ್ಕಾರದ ಮೇಲೆ ಸಾಕಷ್ಟು ಭರವಸೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ಭರವಸೆಗಳಿಗೆ ನೀರೆರೆಯುವ ಸಲುವಾಗಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಕಳೆದ ಎರಡು ತಿಂಗಳಿನಿಂದ ತತ್ವರಿತಗೊಳಿಸಲಾಗಿದೆ. ವಿಳಂಬವಾಗುತ್ತಿದ್ದ ತಕರಾರು ಅರ್ಜಿಗಳನ್ನು ಕಾಲಮಿತಿ ನಿಗದಿ ಮಾಡಿ ಜನಗಳು ತಾಲೂಕು ಕಚೇರಿಗಳಿಗೆ ದಿನನಿತ್ಯ ಅಲೆಯುವುದನ್ನು ಕಡಿಮೆ ಮಾಡಲಾಗಿದೆ.  ಮತ್ತು ಆ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಗೆ ಚಿಂತನೆಯೂ ನಡೆಯುತ್ತಿದ್ದು, ಬೀದರ್ ಜಿಲ್ಲೆಯಲ್ಲೂ ಸಹ ಅಧಿಕಾರಿಗಳು ಜನಪರ ಸೇವೆ ನೀಡುವ ಸಂಕಲ್ಪ ಮಾಡಬೇಕು ಎಂದರು. 

ತಕರಾರು ಪ್ರಕರಣಗಳ ಶೀಘ್ರ ಇತ್ಯರ್ಥ: ಅಧಿಕಾರಿಗಳಿಗೆ ಪ್ರಶಂಶೆ

ಬೀದರ್ ಜಿಲ್ಲೆಯಲ್ಲಿ ಕಳೆದ ಜೂನ್ ತಿಂಗಳಿನಲ್ಲಿ ಪಹಣಿ ತಿದ್ದುಪಡಿ ಪ್ರಕರಣಗಳು 4310 ಬಾಕಿ ಇತ್ತು. ಆದರೆ, ವಿಭಾಗವಾರು ಸಭೆಯ ನಂತರ ಇದೀಗ ಈ ಪ್ರಕರಣಗಳ ಸಂಖ್ಯೆ 3010ಕ್ಕೆ ಇಳಿಕೆಯಾಗಿದೆ. ಸುಮಾರು 1300 ಪ್ರಕರಣಗಳಲ್ಲಿ ತತ್ವರಿತ ವಿಲೇವಾರಿ ಮಾಡಲಾಗಿದೆ.

ಇದೇ ಸಮಯದಲ್ಲಿ ತಹಶೀಲ್ದಾರ್ ನ್ಯಾಯಾಲಯದಲ್ಲೂ 651 ಪ್ರಕರಣಗಳು ಬಾಕಿ ಇದ್ದವು. ಆದರೆ, ಇದೀಗ ಆ ಪ್ರಕರಣಗಳ ಸಂಖ್ಯೆ 488ಕ್ಕೆ ಇಳಿದಿದೆ. ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ 1319 ರಿಂದ 321ಕ್ಕೆ ಇಳಿಸಲಾಗಿದೆ. ಇದು ನಿಜಕ್ಕೂ ಇಲಾಖೆಯಲ್ಲಿನ ಉತ್ತಮ ಪ್ರಗತಿಯಾಗಿದ್ದು, ಇದನ್ನು ಹೀಗೆ ಮುಂದುವರೆಸುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ಅವರು ಸೂಚಿಸಿದರು.

ಇ-ಆಡಳಿತಕ್ಕೆ ಸೂಚನೆ:

ಆಡಳಿತಕ್ಕೆ ವೇಗ ನೀಡುವ ಸಲುವಾಗಿ ಬೀದರ್ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿ (ಎಸಿ) ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಇ-ಆಫೀಸ್ ಅಂದರೆ ಆನ್್ಲೈನ್ ಮೂಲಕ ಕಡತ ವಿಲೇವಾರಿ ಮಾಡುವಂತೆಯೂ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಆಗಸ್ಟ್ 15 ರಿಂದಲೇ ಇ-ಆಫೀಸ್ ಜಾರಿ ಮಾಡಲಾಗಿದೆ. ಎಲ್ಲಾ ಕಡತಗಳನ್ನೂ ಇದೀಗ ಆನ್ ಲೈನ್ ಮೂಲಕವೇ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 1ನೇ ತಾರೀಖಿನ ಒಳಗಾಗಿ ಎಲ್ಲಾ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗ ಕಚೇರಿಗಳಲ್ಲೂ ಆನ್ ಲೈನ್ ಮೂಲಕವೇ ಎಲ್ಲಾ ಕಡತಗಳ ವಿಲೇವಾರಿ ಆಗಬೇಕು. ಆಡಳಿತಕ್ಕೆ ವೇಗ ನೀಡಲು, ಪಾರದರ್ಶಕತೆ ಜವಾಬ್ದಾರಿ ಸುಧಾರಣೆಗೆ ಇ-ಆಡಳಿತ ಸಹಕಾರಿ ಎಂದು ಅವರು ತಿಳಿಸಿದರು.

 

ಅಲ್ಲದೆ, ಇದೇ ಸಂದರ್ಭದಲ್ಲಿ ಜಿಲ್ಲೆಯ ನೈಸರ್ಗಿಕ ವಿಕೋಪ ಪ್ರಕರಣಗಳಲ್ಲಿ ಪರಿಹಾರ ಕೈಗೊಳ್ಳಲು 21.34 ಕೋಟಿ ಅನುದಾನ ಲಭ್ಯವಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬೀದರ್ ಜಿಲ್ಲೆ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top