ತಲೆ ಸುತ್ತುವಿಕೆಗೂ – ಮಧುಮೇಹ, ಅತಿಯಾದ ರಕ್ತದೊತ್ತಡಕ್ಕೂ ಸಂಬಂಧವಿಲ್ಲ : ಡಾ|| ಪ್ರಾಣೇಶ್ ರಾವ್

ತಲೆ ತಿರುಗುವಿಕೆಗೆ ವರ್ಟಿಗೋ ಥೆರಪಿ ಸಂಶೋಧಿಸಿದ ಸಾಧಕ

Kannada Nadu
ತಲೆ ಸುತ್ತುವಿಕೆಗೂ – ಮಧುಮೇಹ, ಅತಿಯಾದ ರಕ್ತದೊತ್ತಡಕ್ಕೂ ಸಂಬಂಧವಿಲ್ಲ : ಡಾ|| ಪ್ರಾಣೇಶ್ ರಾವ್

ನಂಜುಂಡಪ್ಪ.ವಿ.

ಬೆಂಗಳೂರು: ತಲೆ ಸುತ್ತುವಿಕೆ ಇದೀಗ ಸಣ್ಣ ಪ್ರಾಯದವರನ್ನು ಸಹ ಕಾಡುತ್ತಿರುವ ಗಂಭೀರ ಸಮಸ್ಯೆ. ತಲೆ ಸುತ್ತಿದರೆ ಬಹುತೇಕ ಮಂದಿ ಬಿಪಿ ಮತ್ತು ಶುಗರ್ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಆದರೆ ವಾಸ್ತವವಾಗಿ ತಲೆ ಸುತ್ತುವಿಕೆ ಮತ್ತು ಮಧುಮೇಹ, ರಕ್ತದೊತ್ತಡದ ನಡುವೆ ಯಾವುದೇ ಸಂಬಂಧವಿಲ್ಲ. ತಲೆ ಸುತ್ತುವಿಕೆಗೆ ಈ ವರೆಗೆ ಕಾರಣವೇ ಪತ್ತೆಯಾಗಿಲ್ಲ…!!!. ಹೀಗೆನ್ನುತ್ತಾರೆ ಜೀವನದುದ್ದಕ್ಕೂ ವಾಕ್‌ – ಶ್ರವಣ ಸಮಸ್ಯೆ ನಿವಾರಣೆಗಾಗಿ ಶ್ರಮಿಸಿದ ಕಾಯಕ ಯೋಗಿ ಡಾ|| ಪ್ರಾಣೇಶ್ ರಾವ್. 83 ವರ್ಷದ ಇಳಿ ವಯಸ್ಸಿನಲ್ಲೂ ವ್ಯಾಪಕ ಸಂಶೋಧನೆಯಲ್ಲಿ ತೊಡಗಿರುವ ಅವರು, ಪತ್ರಿಕೆಯೊಂದಿಗೆ ಈ ಸಮಸ್ಯೆ ಕುರಿತು ಸಮಗ್ರವಾಗಿ ಬೆಳಕು ಚೆಲ್ಲಿದ್ದಾರೆ.

ತಲೆ ತಿರುಗುವಿಕೆಗೂ – ರಕ್ತದೊತ್ತಡ, ಮಧುಮೇಹಕ್ಕೂ ಸಂಬಂಧವಿಲ್ಲ ಎಂಬುದನ್ನು 1973 ರಲ್ಲಿ ತಮ್ಮ ಅಧ್ಯಯನಗಳ ಮೂಲಕ ಪ್ರಾಣೇಶ್ ರಾವ್ ನಿರೂಪಿಸಿದ್ದಾರೆ. ಇದನ್ನು ಈಗಲೂ ಋಜುವಾತುಪಡಿಸುತ್ತಲೇ ಇದ್ದಾರೆ. ಇದೀಗ ಭಾರತದ ಹೆಮ್ಮೆಯ ಭಾರತೀಯ ವಿಜ್ಞಾನ ಮಂದಿರದಲ್ಲಿ ವಾಕ್ – ಶ್ರವಣ ವಲಯದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

ಭಾಷೆ ಮತ್ತು ಲಿಪಿ ಮುನುಕುಲಕ್ಕೆ ಮಾತ್ರ ಸೀಮಿತ. ಪ್ರಾಣಿಗಳಿಗೆ ಭಾಷೆ ಇದ್ದರೂ ಲಿಪಿ ಇಲ್ಲ. ಹೀಗಾಗಿಯೇ ಮನುಷ್ಯ ಅಸಾಧಾರಣ ಮತ್ತು ಅದ್ಭುತ. ಇಂತಹ ಮಾನವನ ‍ಶ್ರೇಯೋಭಿವೃದ್ಧಿಗಾಗಿ ತಂತ್ರಜ್ಞಾನ ಬೆಳೆಯುತ್ತಿದೆ. ಸವಾಲುಗಳು ಕೂಡ ಹೆಚ್ಚಾಗುತ್ತಿವೆ. ಹೀಗಾಗಿ ತಮ್ಮ ತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೆಂದೇ ಹಲವಾರು ಮಹನೀಯರು ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಅಂತಹ ಶ್ರೇಷ್ಠರ ಸಾಲಿಗೆ, ಅತ್ಯುನ್ನತ ಪರಂಪರೆಗೆ ಮಾದರಿಯಾದವರು ಸ್ಪೀಚ್ ಅಂಡ್ ಹಿಯರಿಂಗ್ ಅಂದರೆ ವಾಕ್ ಶ್ರವಣ ಚಿಕಿತ್ಸಾ ವಲಯದಲ್ಲಿ ಇಡೀ ದೇಶಕ್ಕೆ ಮಾರ್ಗದರ್ಶಕರಾದ ಕಾಯಕಯೋಗಿ ಡಾ|| ಪ್ರಾಣೇಶ್ ರಾವ್.

ಮೂಲತಃ ತುಮಕೂರಿನ ಬೆಳಗುಂದದ ಡಾ|| ಪ್ರಾಣೇಶ್‍ರಾವ್ ವಾಕ್ ಶ್ರವಣ ಸಮಸ್ಯೆಯುಳ್ಳವರಿಗೆ ಆಶಾಕಿರಣ. ಬದುಕಿನುದ್ದಕ್ಕೂ ಅಸಂಖ್ಯಾತ ವ್ಯಕ್ತಿಗಳಿಗೆ, ನಾನಾ ವಲಯಗಳಿಗೆ ಬೆಳಕಾದವರು. ತಂದೆ ಬಿ.ಎಸ್. ನಾರಾಯಣರಾವ್‍ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಬಳಿ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಸರ್.ಎಂ.ವಿ ಉಡುಗೊರೆಯಾಗಿ ನೀಡಿದ ಟೇಬಲ್ ಲ್ಯಾಂಪ್, ಮಂಚ, ಖುರ್ಚಿ ಮತ್ತಿತರ ಪೀಠೋಪಕರಣಗಳನ್ನು ಪ್ರಾಣೇಶ್ ರಾವ್ ಈಗಲೂ ಬಳಸುತ್ತಿದ್ದಾರೆ. ವಿಶ್ವೇಶ್ವರಯ್ಯನವರಂತೆ ಹಿಡಿದ ಕೆಲಸವನ್ನು ಸಮರ್ಥವಾಗಿ ಪೂರ್ಣಗೊಳಿಸುವುದನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಸಂಶೋಧನೆ, ಸಂವಾದ,ಲೇಖನ, ಇತರೆ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವಾರು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಾಕ್‌ ಶ್ರವಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರೌಢ ಪ್ರಬಂಧಗಳು ಮತ್ತು ವಿಷಯ ಮಂಡಿಸಿದ್ದಾರೆ. ವಾಕ್ ಶ್ರವಣ ಕ್ಷೇತ್ರದ ಬಹು ಆಯಾಮಗಳಲ್ಲಿ ಕೆಲಸ ಮಾಡಿದ ಸಾಧಕರಿವರು.

ವೃತ್ತಿ ಬದುಕಿನ ಜೊತೆಗೆ ಪ್ರಾಣೇಶ್ ರಾವ್ ವಾಕ್‌ ‍ಶ್ರವಣ ದೋಷವಿರುವವರಿಗೆ ಆರು ಸಾವಿರ ಮದುವೆ ಮಾಡಿಸಿದ್ದಾರೆ. ಶ್ರವಣದೋಷವುಳ್ಳವರಿಗೆ ಗಂಡು – ಹೆಣ್ಣು ಹುಡುಕುವುದು ಕಷ್ಟ. ಹೀಗಾಗಿ ಬೆಂಗಳೂರಿನ ಇಂದಿರಾನಗರದಲ್ಲಿ ರಾಘವೇಂದ್ರ ಮಠ, ದಾನಿಗಳ ನೆರವಿನಿಂದ ಸ್ವಯಂವರಗಳನ್ನು ಏರ್ಪಡಿಸಿ ಸಮಸ್ಯೆ ಉಳ್ಳವರ ಬದುಕಿನಲ್ಲಿ ಸಂತಸದ ಹೊನಲು ಹರಿಯುವಂತೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಅಗತ್ಯವಿರುವ ಕಡೆಗಳಲ್ಲಿ ಹೊಮಿಗಾ ರಿಹ್ಯಾಬ್ಲಿಟೇಷನ್ ಸೆಂಟರ್ ಮೂಲಕ ಬಡವರಿಗೆ ಶ್ರವಣ ಸಾಧನಗಳನ್ನು ಸಹ ನೀಡುತ್ತಿದ್ದಾರೆ.

‘ಆವಿಷ್ಕಾರ’ ಎಂಬುದು ನಿಜಕ್ಕೂ ಸಾಮಾನ್ಯ ವಿಚಾರವಲ್ಲ. ಅದು ತಪಸ್ವಿಗಳಿಗೆ ಮಾತ್ರ ಸಿದ್ಧಿಸುವಂತಹದ್ದು. ತಪಸ್ವಿಗಳೆಂದರೆ ಹಿಡಿದ ಛಲ ಸಾಧಿಸುವವರು. ತಮ್ಮ ಸೃಜನ ಶೀಲತೆ ಮುಖೇನ ಸಂಶೋಧಿಸಿದ ಅನೇಕ ವಸ್ತುಗಳು ಇಂದು ಅಗತ್ಯ ಮತ್ತು ಅನಿವಾರ್ಯವಾಗಿವೆ. ತಲೆ ಸುತ್ತಿನ ಸಮಸ್ಯೆಗೆ ನೂತನ ವರ್ಟಿಗೋ ಚೇರ್ ಅವಿಷ್ಕಾರ ಮಾಡಿದ್ದಾರೆ ಡಾ|| ಪ್ರಾಣೇಶ್ ರಾವ್.

ಅನೇಕರಿಗೆ ತಲೆಸುತ್ತುವುದು ಸಾಮಾನ್ಯ. ಸ್ವಲ್ಪ ತಲೆ ಸುತ್ತಿದರೂ ಇಡೀ ಭೂಮಿಯೇ ಮೇಲೆ ಕೆಳಗೆ ಸಾಗಿದಂತೆ ಅನುಭವವಾಗುತ್ತದೆ. ದೇಹದ ಮೇಲೆ ಸ್ವಲ್ಪವೂ ನಿಯಂತ್ರಣ ಇಲ್ಲದೇ ಬೀಳುವವರು ಇದ್ದಾರೆ. ಇದಕ್ಕೆಲ್ಲ ನಮ್ಮ ಶ್ರವಣದಲ್ಲಿ ಅಂಗಾಂಗಗಳು ಕಾರಣ. ಎತ್ತರಕ್ಕೆ ಏರುತ್ತಿದ್ದಂತೆ, ಮೇಲಿನಿಂದ ಕೆಳಗೆ ನೋಡಿದರೆ ಬೀಳುತ್ತಿದ್ದೇವೆ ಎಂದು ಭಾಸವಾಗುತ್ತದೆ. ಇದಕ್ಕೆಲ್ಲ ಪರಿಹಾರವಾಗಿ ಡಾ. ಪ್ರಾಣೇಶ್‍ರಾವ್ ಕಂಡು ಹಿಡಿದಿರುವ ನೂತನ ಆವಿಷ್ಕಾರವೇ ಈ ವರ್ಟಿಗೋ ಚೇರ್….

ವರ್ಟಿಗೋ ಚೇರ್‍ ಮಾಮೂಲಿ ಚೇರ್‌ ನಂತೆ ಕಂಡರೂ ಅದರ ಕಾರ್ಯವೈಖರಿ ಭಿನ್ನ. ಇದರಲ್ಲಿ 20 ದಿನ ಅಭ್ಯಾಸ ಮಾಡಿದರೆ ಸಂಪೂರ್ಣವಾಗಿ ತಲೆಸುತ್ತಿವಿಕೆ, ದೇಹದ ಅಸಮತೋಲನದ ಸಮಸ್ಯೆಗಳಿಂದ ಗುಣ ಮುಖರಾಗಬಹುದು. ಸಮಸ್ಯೆ ಹೊಂದಿರುವವರನ್ನು ಈ ಚೇರ್‌ ನಲ್ಲಿ ಕೂರಿಸಿ ಹಲವು ರೀತಿಯ ಭಂಗಿಗಳಿಂದ ಭಯ, ಇಂಬ್ಯಾಲೆನ್ಸ್ ಅನ್ನು ಹೋಗಲಾಡಿಸಬಹುದು ಎನ್ನುತ್ತಾರೆ. ಇದರ ಜೊತೆಗೆ ಡಾ|| ಪ್ರಾಣೇಶ್‍ರಾವ್ ತಲೆ ಸುತ್ತುವಿಕೆ ಸಮಸ್ಯೆಯುಳ್ಳವರಿಗಾಗಿ ಸರಳ ವ್ಯಾಯಾಮಗಳನ್ನು ಕಂಡು ಹಿಡಿದಿದ್ದು, ತಮ್ಮಲ್ಲಿ ಚಿಕಿತ್ಸೆಗೆ ಬರುವವರಿಗೆ ಹೇಳಿಕೊಡುತ್ತಾರೆ.

ಆದರೆ ತಲೆಸುತ್ತುವಿಕೆ ಮತ್ತು ಶ್ರವಣದೋಷಗಳಿಗೆ ಮಾತ್ರ ಹಿಂದೆ ಇದ್ದ ಸಲಕರಣೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ಖಾಯಿಲೆ ಗುಣವಾಗುವುದಿಲ್ಲ. ತಮ್ಮ ಅನುಭವದಿಂದ ಅದಕ್ಕೊಂದು ವೈಜ್ಞಾನಿಕ ಉಪಕರಣವಾಗಿ ವರ್ಟಿಗೋ ಚೇರ್ ಆವಿಷ್ಕರಿಸಿದ್ದಾರೆ. ಎತ್ತರಕ್ಕೆ ಹಾರುವ ಕೆಲಸಗಳನ್ನು ಮಾಡುವವರು, ಹೃದಯ ತೊಂದರೆ ಇರುವವರಿಗೆ ತಲೆಸುತ್ತಿನ ಸಮಸ್ಯೆ ಕಾಡಬಹುದು. ಅವೆಲ್ಲವನ್ನು ವರ್ಟಿಗೋ ಚೇರ್ ಮುಖೇನ ಅತಿ ಕಡಿಮೆ ದರದಲ್ಲಿ ರೋಗ ಗುಣಪಡಿಸಿಕೊಳ್ಳಬಹುದು. ವರ್ಟಿಗೋ ಚೇರ್ ಹಲವು ಆಸ್ಪತ್ರೆಗಳಲ್ಲಿ ಬಳಸುತ್ತಿದ್ದು, ರೋಗಿಗಳು ಇದರಿಂದ ಗುಣಮುಖರಾಗುತ್ತಿದ್ದಾರೆ. ಫಿಸಿಯೋ ಥೆರಪಿ ಮಾದರಿಯಲ್ಲಿ ರೀತಿ ವರ್ಟಿಗೋ ಥೆರಪಿ ಅಭಿವೃದ್ಧಿಪಡಿಸಿದ್ದು, ಇದು ಭವಿಷ್ಯದಲ್ಲಿ ಸಾಕಷ್ಟು ಜನರಿಗೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ.

ವರ್ಟೊಗೋ ಥೆರಪಿಯ ವರ್ಟಿಗೋ ಚೇರ್ ಮುಖಾಂತರ ಐಟಿ ದಿಗ್ಗಜ ಅಜೀಂ ಪ್ರೇಮ್ ಜಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಮ್ಮೆ ಕ್ಲಿನಿಕ್ ಗೆ ಆಗಮಿಸಿದ್ದ ಅಜೀಂ ಪ್ರೇಮ್ ಜಿ, ಎರಡು ಬಾರಿ ಡಾ. ಪ್ರಾಣೇಶ್ ರಾವ್ ಅವರನ್ನು ಮನೆಗೆ ಕರೆಸಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಸಹ ಕ್ಲಿನಿಕ್ ಗೆ ಭೇಟಿ ಕೊಟ್ಟಿರುವುದು ವಿಶೇಷ

ಡಾ|| ಪ್ರಾಣೇಶ್‌ ರಾವ್‍ ಬೆಂಗಳೂರಿನ ವಾಯುಪಡೆಯ ಮೆಡಿಸಿನ್ ಸಂಸ್ಥೆಯಲ್ಲಿ ಪ್ರೊಫೆಸರ್ ಹಾಗೂ ಹಿರಿಯ ವಾಕ್ ಶ್ರವಣ ವಿಜ್ಞಾನಿಯಾಗಿ ಮೂವತ್ತು ವರ್ಷ ಸೇವೆ ಸಲ್ಲಿಸಿದರು. ಶಬ್ಧಮಾಲಿನ್ಯದ ನಾನಾ ವರದಿಗಳು, ಪರಿಹಾರೋಪಾಯಗಳನ್ನು ನೀಡಲು ಈ ಸಂಸ್ಥೆ ಅವರಿಗೆ ನೆರವಾಯಿತು. ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳುವ ಸೈನಿಕರಿಗೆ ಶ್ರವಣದೋಷ ಪರಿಷ್ಕರಣೆ ಮತ್ತು ಪರಿಹಾರದ ತರಬೇತಿ ನೀಡುವ ಕೆಲಸ ಮಾಡಿದರು. ಹೆಲಿಕಾಪ್ಟರ್ ಗಳು, ಯುದ್ಧ ವಿಮಾನಗಳನ್ನು ಚಲಾಯಿಸುವ ಪೈಲೆಟ್ ಗಳಿಗೆ ಕಿವಿಗಡಚಿಕ್ಕುವ ಶಬ್ದವನ್ನು ತಾಳಿಕೊಳ್ಳುವ ಮತ್ತು ಅದಕ್ಕೆ ಬೇಕಾದ ಪರಿಹಾರೋಪಾಯಗಳನ್ನು ಪ್ರಾಣೇಶ್‍ರಾವ್‍ ಸೂಚಿಸಿದ್ದಾರೆ. ಯುದ್ಧದಲ್ಲಿ ಬಂದೂಕಿನ ಸದ್ದು, ಗುಂಡಿನ ದಾಳಿಯಲ್ಲಿ ಉಂಟಾಗುವ ಶ್ರವಣ ದೋಷ ಅಳೆಯುವ ಮತ್ತು ಅವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸಿದ್ದು ಇವರ ಹೆಗ್ಗಳಿಕೆ.

ಕಾಕ್ ಪಿಟ್ ನಲ್ಲಿ ವಿಮಾನದ ಸದ್ದಿಗೆ ರಕ್ಷಣಾ ವ್ಯವಸ್ಥೆ ಕಲ್ಪಿಸಿದ್ದಾರೆ. ಬಾಹ್ಯಾಕಾಶದಲ್ಲೂ ಸಹ ಗಗನ ಯಾತ್ರಿಗಳ ಸಮಸ್ಯೆ ನಿವಾರಣೆಗೆ ಮಾಡಿದ ಶಿಫಾರಸ್ಸುಗಳು ಅನುಷ್ಠಾನಗೊಂಡಿವೆ. ಭಾರತದ ಹೆಮ್ಮೆಯ ಗಗನ ಯಾತ್ರಿ ರಾಕೇಶ್ ಶರ್ಮಾ ಅವರನ್ನು ಮೌಲ್ಯ ಮಾಪನ ಮಾಡಿದ ಸಮಿತಿ ಸದಸ್ಯರಲ್ಲಿ ಇವರು ಸಹ ಒಬ್ಬರು. ತಲೆತಿರುಗುವಿಕೆ ಮತ್ತದರ ಚಿಕಿತ್ಸೆಗೆ ಅನೇಕ ಉಪಕರಣಗಳನ್ನು ಕಂಡು ಹಿಡಿದ ಕಾರಣ ಇವರ ಹೆಸರನ್ನು ‘ನಾಸಾ’ ಅಮೆರಿಕಾ ಗ್ರಂಥಾಲಯಗಳಲ್ಲಿ ಸೇರಿಸಿರುವುದು ಇವರ ಶ್ರೇಷ್ಠತೆಗೆ ಸಾಕ್ಷಿ.

ವಾಕ್ ಶ್ರವಣ ಚಿಕಿತ್ಸಾ ವಲಯದಲ್ಲಿ ಭಾರತಕ್ಕೆ ಪ್ರಥಮ ಪದವೀಧರರಾದ ಇವರು ಮಹಾವೀರ್ ಜೈನ್ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮುಂಬೈ, ಅಹಮದಬಾದ್, ದೆಹಲಿ ಏಮ್ಸ್, ವೆಲ್ಲೂರು, ಮುಂತಾದ ಕಡೆಗಳಲ್ಲಿ ವಾಕ್ ಶ್ರವಣ ಚಿಕಿತ್ಸೆ ಮೂಲಕ ಬುದ್ಧಿಮಾಂದ್ಯ ಶ್ರವಣ ದೋಷ, ಸ್ಟಾಸ್ಟಿಕ್ ಚಿಕಿತ್ಸೆಯ ಮೂಲಕ ಮಕ್ಕಳಿಗೆ ಮಾತನಾಡಲು ಕಲಿಸಬಹುದೆಂಬ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಸ್ಪೀಚ್ ಅಂಡ್ ಹಿಯರಿಂಗ್ ವಲಯದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ನೆರವಾಗಿದ್ದಾರೆ. ಕೈಗಾರಿಕೆಗಳಲ್ಲಿ ಧ್ವನಿ ಮಾಲೀನ್ಯ ತಡೆಗಟ್ಟಲು ಸೂಕ್ತ ಮಾರ್ಗೋಪಾಯಗಳನ್ನು ಸೂಚಿಸಿದ್ದಾರೆ.

1978 ಮತ್ತು 1996 ರಲ್ಲಿ ಎರಡು ಬಾರಿ ಇಂಡಿಯನ್ ಅಸೋಸಿಯೇಷನ್ ಆಫ್ ಆಕ್ಯುಪೇಷನಲ್ ಹೆಲ್ತ್ (ಐ.ಎ.ಒ.ಹೆಚ್) ನಿಂದ ಪ್ರಶಸ್ತಿ ಪಡೆದಿದ್ದಾರೆ. ಆಡಿಯೋಲಾಜಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಗಲಿಗರೆಂಬ ಖ್ಯಾತಿ ಇವರದು.

 

 

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";