ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮುಸ್ಲಿಂರಿಗಾಗಿ ಸಾಲ ಹೆಚ್ಚಳ ಮಾಡಿದೆ. ಪ್ರಸ್ತುತ ಬಜೆಟ್ ಇದನ್ನು ನಿರೂಪಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜಿಡಿಪಿ ಶೇ.೨೩ ಮೀರಿದೆ. ಇಂದು ರಾಜ್ಯದ ಪ್ರತಿ ವ್ಯಕ್ತಿ ಮೇಲೆ ೧ ಲಕ್ಷ ಸಾಲ ಹೊರಿಸಿದೆ ಎಂದು ಟೀಕಿಸಿದರು.
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ಅಂಥದ್ದೇನೂ ಕೊಡುಗೆ ಕೊಟ್ಟಿಲ್ಲ. ಇದು ಬಜೆಟ್ ಅಲ್ಲಿ ಮಾಡಿದ ಘನ ಘೋರ ಅನ್ಯಾಯ ಎಂದು ಖಂಡಿಸಿದರು.
ರಾಜ್ಯ ಸರ್ಕಾರದ್ದು ಕೇವಲ ವೋಟ್ ಬ್ಯಾಂಕ್ ಗಾಗಿ ಮುಸ್ಲಿಂ ಓಲೈಕೆಯ ಬಜೆಟ್ ಆಗಿದೆ. ಬಜೆಟ್ ಪೂರ್ತಿ ಮುಸ್ಲಿಂಮಯವಾಗಿದೆ. ದಲಿತರು ಸೇರಿದಂತೆ ಬೇರೆಲ್ಲಾ ವರ್ಗದವರನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎನ್ನುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ “ಮುಸ್ಲಿಂ ವಿಕಾಸ್” ಮಾಡುತ್ತಿದೆ ಎಂದು ಆರೋಪಿಸಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅವರ ಅವರನ್ನು ಉಲ್ಲೇಖಿಸಿ ಸರ್ವ ಸಮಾನತೆ ಬಜೆಟ್ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತೀರಿ ಆದರೆ, ಕೃತಿಯಲ್ಲಿ ನೋಡಿದರೆ ಮುಸ್ಲಿಂ ಒಂದೇ ವರ್ಗವನ್ನು ಓಲೈಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ. ಒಡೆದಾಳೋ ನೀತಿ ಅನುಸರಿಸುತ್ತಿದ್ದೀರಿ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಬೇರೆ ಗುತ್ತಿಗೆದಾರರಿಗೆ ಏಕಿಲ್ಲ ಮೀಸಲಾತಿ? ಸರ್ಕಾರಿ ಯೋಜನೆಯ ₹ ೨ ಕೋಟಿ ವರೆಗಿನ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದೀರಿ. ಅದೇ ಉಳಿದವರಿಗೆ ಏಕಿಲ್ಲ? ಬೇರೆ ಬೇರೆ ವರ್ಗದ ಸಣ್ಣ ಪುಟ್ಟ ಗುತ್ತಿಗೆದಾರರಿಂದ ಕಿತ್ತು ಮುಸ್ಲಿಮರಿಗೆ ಮೀಸಲಾತಿ ಕೊಡುವ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಕೆಐಡಿಬಿ, ಕೆಐಎಬಿಡಿಯಲ್ಲಿ ಶೇ.೨೦ ಮೀಸಲು: ಕೆಐಡಿಬಿ, ಕೆಐಎಬಿಡಿಯಲ್ಲಿ ಮುಸ್ಲಿಮರಿಗೆ ಶೇ. ೨೦ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಕೆಐಎಬಿಡಿ ಜಾಗವೇ ಸಿಗುತ್ತಿಲ್ಲ. ಅಂಥದ್ದರಲ್ಲಿ ಇವರಿಗೇ ಶೇ.೨೦ರಷ್ಟು ಕೊಟ್ಟರೆ ಉಳಿದವರು ಎಲ್ಲಿ ಹೋಗಬೇಕು? ಎಂದು ಸಚಿವರು ಪ್ರಶ್ನಿಸಿದರು.
ಮುಸಲ್ಮಾನರ ಮದುವೆಗೆ ೫೦೦೦೦ ನೆರವು ಘೋಷಿಸಿದ್ದಾರೆ. ಉಳಿದ ಜಾತಿ, ಜನಾಂಗದವರಿಗೆ ಏಕಿಲ್ಲ? ಅವರಿಗಷ್ಟೇ ಕೊಡಲು ಕರ್ನಾಟಕವೇನು ಪಾಕಿಸ್ತಾನವೇ? ಎಂದು ಪ್ರಶ್ನಿಸಿದರು.