ಬೆಂಗಳೂರು:ಕರ್ನಾಟಕ ಸರ್ಕಾರ ಅಧೀನದ ಸಂಸ್ಥೆ ಆಗಿರುವ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ರಾಜ್ಯದ ವಿದ್ಯುತ್ ಸರಬರಾಜು ಪ್ರಕ್ರಿಯೆಯಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ತನ್ನ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ರಾಜ್ಯಕ್ಕೆ ವಿದ್ಯುತ್ ಸರಬರಾಜು ಮಾಡುತ್ತದೆ. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಉಪ ಉತ್ಪನ್ನವಾಗಿ ಹಾರುಬೂದಿ ಕೂಡ ತಯರಾಗುತ್ತಿದ್ದು, ಅದು ಮೌಲ್ಯಯುತ ಸಂಪನ್ಮೂಲವಾಗಿದೆ. ಫ್ಲೈ ಆಶ್ ಅನ್ನು ಮಾರಾಟ ಮಾಡಿ ಆದಾಯ ಗಳಿಸಲಾಗುತ್ತದೆ. ಈ ಆದಾಯವು ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಧನ ಸಚಿವಾಲಯವು ಫ್ಲೈ ಆಶ್ ಮಾರಾಟದಿಂದ ಗರಿಷ್ಠ ಆದಾಯವನ್ನು ಗಳಿಸಲು ಪಾರದರ್ಶಕ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಬೇಕಾದ ಅಗತ್ಯವನ್ನು ಮೊದಲಿನಿಂದಲೂ ಹೇಳುತ್ತಲೇ ಬಂದಿದೆ.
ಕೆಪಿಸಿಎಲ್ ನ ರಾಯಚೂರು ಉಷ್ಣ ವಿದ್ಯುತ್ ಸ್ಥಾವರಗಳು ಕರ್ನಾಟಕದ ಸಿಮೆಂಟ್ ತಯಾರಿಕಾ ಕೇಂದ್ರದ ಸಮೀಪದಲ್ಲಿರುವ ಕಾರಣ ಬಹಳ ಮಹತ್ವ ಹೊಂದಿದೆ. ಇಲ್ಲಿನ ಫ್ಲೈ ಆಶ್ ಸಿಮೆಂಟ್ ಕಂಪನಿಗಳಿಗೆ ಪ್ರಮುಖ ಕಚ್ಛಾ ವಸ್ತುವಾಗಿರುವುದು ಅದಕ್ಕೆ ಕಾರಣ. ಇತ್ತೀಚೆಗೆ ಕೆಪಿಸಿಎಲ್ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಫ್ಲೈ ಆಶ್ ಹಂಚಿಕೆಗಾಗಿ ಟೆಂಡರ್ ಆಹ್ವಾನಿಸಿತ್ತು. ಆದರೆ, ಈ ಬಾರಿಯ ಪ್ರಕ್ರಿಯೆಯಲ್ಲಿ ಸಾಮಾನ್ಯ ಪದ್ಧತಿಗಿಂತ ವಿಭಿನ್ನ ಮಾರ್ಗ ಆರಿಸಿಕೊಂಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಹಂಚಿಕೆಯಾಗುವ ಫ್ಲೈ ಆಶ್ ನ ಶೇ.50ರಷ್ಟು ಭಾಗವನ್ನು ಎಸಿಸಿ, ರಾಜಶ್ರೀ ಮತ್ತು ವಾಸವದತ್ತ ಸಿಮೆಂಟ್ ಸಂಸ್ಥೆಗಳ ಒಕ್ಕೂಟವಾಗಿರುವ ಎಆರ್‌ವಿ ಸೊಸೈಟಿಗೆ ಮೀಸಲಿಟ್ಟಿರುವುದು ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದೆ
ಫ್ಲೈ ಆಶ್ ಹಂಚಿಕೆಯಲ್ಲಿನ ಈ ಅಸಮಾನತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ:
• ಸರ್ಕಾರಿ ಟೆಂಡರ್‌ನಲ್ಲಿ ಒಕ್ಕೂಟಕ್ಕೆ ಮೀಸಲಾತಿ ನೀಡಿರುವುದು ಯಾಕೆ?
• ಸಾರ್ವಜನಿಕ ಸಂಸ್ಥೆಗಳಲ್ಲಿ ಇಂತಹ ಮೀಸಲಾತಿಗೆ ಅವಕಾಶ ಇದೆಯೇ?
• ದೊಡ್ಡ ಸಂಸ್ಥೆಗಳಿಗೆ ಲಾಭ ಮಾಡಿಕೊಡುವುದರ ಮೂಲಕ ಸಣ್ಣ ಸಂಸ್ಥೆಗಳಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ?
ಸಾಮಾನ್ಯವಾಗಿ ವಿದ್ಯುತ್ ಸ್ಥಾವರಗಳು ಬಹಿರಂಗ ಹರಾಜು ಪ್ರಕ್ರಿಯೆ ನಡೆಸುತ್ತವೆ. ಇದರಲ್ಲಿ ಸಿಮೆಂಟ್ ಕಂಪನಿಗಳು ಮತ್ತು ವ್ಯಾಪಾರಿಗಳು ಪ್ರತ್ಯೇಕವಾಗಿ ಬಿಡ್ ಮಾಡುತ್ತಾರೆ. ಅತೀ ಹೆಚ್ಚು ಬೆಲೆ ಕೊಡುವವರಿಗೆ ಮೊದಲು ಫ್ಲೈ ಆಶ್ ನೀಡಲಾಗುತ್ತದೆ. ನಂತರ ಬಿಡ್ ಮೂಡಿದ ಉಳಿದವರಿಗೆ ಅವರ ಬೆಲೆ ಮತ್ತು ಅಗತ್ಯ ಪ್ರಮಾಣದ ಆಧಾರದಲ್ಲಿ ಫ್ಲೈ ಆಶ್ ಹಂಚಲಾಗುತ್ತದೆ. ಈ ವ್ಯವಸ್ಥೆ ಕೆಪಿಸಿಎಲ್‌ಗೆ ನೇರವಾಗಿ ಗರಿಷ್ಠ ಆದಾಯ ಗಳಿಸಲು ಸಹಾಯ ಮಾಡುತ್ತದೆ. ಆದರೆ ಒಕ್ಕೂಟಕ್ಕೆ ಹಂಚಿಕೆ ಮಾಡಿ ಅವರು ಮಧ್ಯವರ್ತಿಗಳಾಗಿ ಸಿಮೆಂಟ್ ತಯಾರಕರಿಗೆ ಮರುಮಾರಾಟ ಮಾಡುವುದಿಂದ ಕೆಪಿಸಿಎಲ್ ಗೆ ಆದಾಯ ಕಡಿಮೆಯಾಗಬಹುದಾಗಿದೆ.
15 ವರ್ಷಗಳ ಹಿಂದೆ ಎಆರ್‌ವಿ ಸೊಸೈಟಿ ವಿದ್ಯುತ್ ಸ್ಥಾವರದಲ್ಲಿ ಬಂಡವಾಳ ಹೂಡಿಕೆ ಮಾಡಿತ್ತು ಎಂಬುದೇನೋ ನಿಜ. ಆದರೆ ಆ ವೆಚ್ಚಗಳು ಈಗಾಗಲೇ ಮರುಪಾವತಿಯಾಗಿವೆ ಎಂದು ತಿಳಿದುಬಂದಿದೆ. ಆದರೂ ಮೀಸಲಾತಿ ನೀಡುವುದು ಮುಂದುವರಿದಿದೆ. ಕೆಪಿಸಿಎಲ್ ಬಹಿರಂಗ ಮತ್ತು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯನ್ನು ನಡೆಸಿದರೆ ಆದಾಯ ಹೆಚ್ಚಳವಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ಸರಬರಾಜು ಮಾಡಬಹುದಾಗಿದೆ.
ಎನ್‌ಟಿಪಿಸಿ (ನವರತ್ನ ಪಿಎಸ್‌ಯು) ಸೇರಿದಂತೆ ಇತರ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ಬಹಿರಂಗ ಹರಾಜು ಮಾದರಿಯನ್ನು ಅನುಸರಿಸುತಿದ್ದು, ಈ ಪ್ರಕ್ರಿಯೆಯು ಭಾಗವಹಿಸುವ ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ. ಆದರೆ ಕೆಪಿಸಿಎಲ್ ಯಾಕೆ ಒಕ್ಕೂಟದ ಮೀಸಲಾತಿಯನ್ನು ರದ್ದುಗೊಳಿಸಿ ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಗೆ ಮುಂದಾತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ರಾಜ್ಯದ ಅಧೀನದ ಸಂಸ್ಥೆಯಾಗಿರುವ ಕೆಪಿಸಿಎಲ್ ಸಾರ್ವಜನಿಕರಿಗೆ ಉತ್ತರದಾಯಿಯಾಗಿದೆ. ಇದರ ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳು ಪಾರದರ್ಶಕವಾಗಿ, ನ್ಯಾಯಯುತವಾಗಿ ನಡೆಯಬೇಕಾಗಿದೆ ಮತ್ತು ಗರಿಷ್ಠ ಆದಾಯ ತರುವುದಕ್ಕೆ ಆದ್ಯತೆ ನೀಡಬೇಕಾಗಿದೆ