ಬೆಂಗಳೂರು: ಮಹಾಭಾರತದ ಆಖ್ಯಾನದ ಎಳೆಯನ್ನು ಆಧರಿಸಿದ್ದರೂ ಪೌರಾಣಿಕ ಕಥಾ ಹಂದರವನ್ನೊಳಗೊಂಡಿರುವ ಹಾಗೂ ಪುರುಷೋತ್ತಮ ದಾಸ್ ಹೆಗ್ಗಡೆ ಬರೆದಿರುವ “ಯಯಾತಿ” ಕಾದಂಬರಿ ಮಾರ್ಚ್ 16 ರಂದು ಲೋಕಾರ್ಪಣೆಯಾಗಲಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 9.30 ಗಂಟೆಗೆ ಸಾಹಿತಿಗಳು, ಗಣ್ಯರ ಸಮ್ಮುಖದಲ್ಲಿ ಕೃತಿ ಲೋಕಾರ್ಪಣೆಯಾಗಲಿದೆ. ಯಯಾತಿ ಕಾದಂಬರಿಯು ಮಹಾಭಾರತದ ಆಖ್ಯಾನದ ಎಳೆಯನ್ನು ಆಧರಿಸಿದ್ದರೂ ಪೌರಾಣಿಕ ಕಥೆಯ ಅಂತರಾರ್ಥವನ್ನು ವೈಜ್ಞಾನಿಕವಾಗಿ, ಮನೋವೈಜ್ಞಾನಿಕ ಆಧಾರದಲ್ಲಿ ಲೇಖಕರು ವಿವರಿಸಲು ಪ್ರಯತ್ನಿಸಿದ್ದಾರೆ.
ಯಯಾತಿಗೆ ಮುಪ್ಪು ಬರಲಿ ಎಂಬ ಗುರು ಶುಕ್ರಾಚಾರ್ಯರ ಶಾಪವನ್ನು ವೈಜ್ಞಾನಿಕ-ವೈಚಾರಿಕ ನೆಲೆಗಟ್ಟಿನಲ್ಲಿ ನೋಡಲಾಗಿದೆ. ಗುರು ಶುಕ್ರಾಚಾರ್ಯರಿಗೆ ‘ಚಿರ ಯೌವ್ವನ’ ರಸ ವಿದ್ಯೆಯು ತಿಳಿದಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಗಾಲವ-ಮಾಧವಿಯರ ಪ್ರಸಂಗವು ಯಯಾತಿಯ ಜೀವನದ ಅವಿಭಾಜ್ಯ ಅಂಗವಾಗಿರುವುದರಿಂದ ಯಯಾತಿಯ ಮಗಳಾದ ಮಾಧವಿಯ ಕಥನವನ್ನೂ ಈ ಕಾದಂಬರಿಯಲ್ಲಿ ನೋಡಬಹುದಾಗಿದೆ.
ಮಹಾಭಾರತದಲ್ಲಿ ನಹುಷ ಮಹಾರಾಜನು ಶಾಪದಿಂದಾಗಿ ಸರ್ಪವಾಗಿರುತ್ತಾನೆ. ಈ ಕಾದಂಬರಿಯಲ್ಲಿ ನಹುಷನಿಗೆ ಸರ್ಪಸುತ್ತು ಕಾಯಿಲೆಯು ಬಂದು ನರಳುತ್ತಿರುತ್ತಾನೆ. ತಂದೆಯ ಮುಪ್ಪು-ಕಾಯಿಲೆ-ಸಾವು ಯಯಾತಿಯನ್ನು ತೀವ್ರವಾಗಿ ಬಾಧಿಸುತ್ತಿರುತ್ತವೆ. ವೃದ್ಧಾಪ್ಯದ ಸಮಸ್ಯೆಗಳನ್ನು ಎದುರಿಸಲು ಅವನು ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಬದಲಿಗೆ, ವೃದ್ಧಾಪ್ಯವನ್ನು ಸಾಧ್ಯವಾದಷ್ಟೂ ಮುಂದೂಡಲು ಯೋಚಿಸಿರುತ್ತಾನೆ. ಜೊತೆಗೆ, ತೀರದ ಕಾಮದ ದಾಹದಿಂದ ಬಳಲುತ್ತಿರುತ್ತಾನೆ.
ಯಯಾತಿಯ ಕಥನದ ಪಾತ್ರಗಳಾದ ಯತಿ, ಯಯಾತಿ, ಕಚ, ದೇವಯಾನಿ, ಶರ್ಮಿಷ್ಠೆ, ಪುರು, ಮುಂತಾದವರ ವ್ಯಕ್ತಿತ್ವಗಳು ಮಾನವನ ವರ್ತನಾ ವ್ಯಕ್ತಿತ್ವ ಹಾಗೂ ಮೂಲಭೂತ ಸ್ವಭಾವಗಳನ್ನು ಪರಿಚಯಿಸಲಿದ್ದು, ಸಾರ್ವಕಾಲಿಕವಾಗಿರುತ್ತವೆ. ಈ ಕಾದಂಬರಿಯನ್ನು ಮಾನವ ಅಸ್ತಿತ್ವ ಸಿದ್ಧಾಂತದ ತಳಹದಿಯ ಮೇಲೆ ರಚಿಸಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ಜೀವನದ ವಿವಿಧ ಘಟ್ಟಗಳಲ್ಲಿ ಮುಟ್ಟಬೇಕಾದ ಸಾಮಾಜಿಕ ಮೈಲಿಗಲ್ಲುಗಳು ಹಾಗೂ ನಿಭಾಯಿಸಬೇಕಾದ ಸಾಮಾಜಿಕ ಜವಾಬ್ದಾರಿಗಳ ಆಧಾರವನ್ನು ಪಡೆಯಲಾಗಿದೆ.
ಪ್ರತಿಯೊಬ್ಬ ವ್ಯಕ್ತಿಯು ಸಾಮಾಜಿಕ ಜವಾಬ್ದಾರಿಗಳನ್ನು ನಿಭಾಯಿಸಿ ಮೈಲಿಗಲ್ಲುಗಳನ್ನು ಮುಟ್ಟಲು ಜೀವನಪೂರ್ತಿ ಹೆಣಗಾಡುತ್ತಾನೆ. ಜೀವನ ಜಂಜಾಟದಿಂದ ವ್ಯಸ್ತಗೊಂಡ ಮನಸ್ಸು ಸುಖ-ಭೋಗಗಳ ಕಡೆಗೆ ಹೊರಳುತ್ತದೆ. ಸೃಷ್ಟಿಕ್ರಿಯೆಗೆ ಕಾಮವು ಅತ್ಯವಶ್ಯವಾದರೂ ಅತಿಕಾಮವು ಮನಸ್ಸಿನ ಅಸ್ವಸ್ಥತೆಗೂ ಕಾರಣವಾಗುವುದನ್ನು ಮರೆಯಬಾರದು. ಲೌಕಿಕ ಸುಖಗಳು ಆತ್ಮಸುಖವನ್ನು ತರಲಾರದು ಎಂಬ ಸತ್ಯವು ಗೋಚರಿಸುವ ವೇಳೆಗೆ ಸಮಯವು ಮೀರಿರುತ್ತದೆ.
ಪ್ರಸಿದ್ಧ ತತ್ವಶಾಸ್ತ್ರಜ್ಞರು-ಮನಃಶಾಸ್ತ್ರಜ್ಞರು-ನರವಿಜ್ಞಾನಿ-ಜೀವವಿಜ್ಞಾನಿಗಳು ಪ್ರತಿಪಾದಿಸಿರುವ ಮಾನವನ ವರ್ತನಾ ವ್ಯಕ್ತಿತ್ವಗಳು-ಮೂಲಭೂತ ಸ್ವಭಾವಗಳು ಮುಂತಾದ ಮನೋವೈಜ್ಞಾನಿಕ ಕಾರಣಗಳ ಹಿನ್ನಲೆಯಲ್ಲಿ ಕಾದಂಬರಿಯಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವವನ್ನು ಪರಿಚಯಿಸಲಾಗಿದೆ.
ಅವಕಾಶವಾದಿಯೂ ಕುಟಿಲ ನೀತಿಯವನೂ ಆದ ಕಚ, ಸ್ವಾರ್ಥಿಯೂ ಅಹಂಕಾರಿಯೂ ಆದ ದೇವಯಾನಿ, ಆಶಾವಾದಿಯೂ ಭಾವನಾತ್ಮಕಜೀವಿಯೂ ಆದ ಶರ್ಮಿಷ್ಠೆ, ಅತಿಕಾಮಿಯೂ ಮನೋವಿಕಾರಿಯೂ ಆದ ಯಯಾತಿ, ಯೋಗಿ ಯತಿ, ಯೋಗಿಣಿ ಮಾಧವಿ, ಅನೈತಿಕ ವ್ಯಕ್ತಿಗಳಾದ ಗಾಲವ-ಸುಪರ್ಣರು, ಅನುರೂಪವಾದಿಯಾದ ಪುರು, ಮುಂತಾದ ಪಾತ್ರಗಳ ವ್ಯಕ್ತಿತ್ವವನ್ನು ಕಾಣಬಹುದಾಗಿದೆ.
ಯಯಾತಿ ಕಾದಂಬರಿಯ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಲೇಖಕರಾದ ಬಂಜಗೆರೆ ಜಯಪ್ರಕಾಶರವರು ವಹಿಸಲಿದ್ದು ಕೃತಿಯ ಪರಿಚಯವನ್ನು ಖ್ಯಾತ ವಿಮರ್ಶಕರಾದ ಹೆಚ್ ದಂಡಪ್ಪನವರು ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ನಿಮ್ಹಾನ್ಸ್ ನ ಪ್ರಾಧ್ಯಾಪಕರಾದ ಡಾ. ಎಂ ಮಂಜುಳ ಅವರು ಕೃತಿಯಲ್ಲಿನ ಮನೋವೈಜ್ಞಾನಿಕ ಅಂಶಗಳತ್ತ ಬೆಳಕು ಚೆಲ್ಲಲಿದ್ದಾರೆ.
ಯಯಾತಿ ಬಿಡುಗಡೆ ಕಾರ್ಯಕ್ರಮದಲ್ಲಿ ಗಾಯಕರಾದ ಪಂಚಮ್ ಹಳಬಂಡಿ ಹಾಗೂ ಜೋಗಿ ಸುನೀತಾರವರು ಗಾಯನದ ಮೂಲಕ ರಂಜಿಸಲಿದ್ದಾರೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಂಶಿ ಪ್ರಕಾಶನದ ಪ್ರಕಾಶ್ ಮನವಿ ಮಾಡಿದ್ದಾರೆ