ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಈ ಬಗ್ಗೆ ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಹೈಕಮಾಂಡ್ ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ ಎಂದರು.ಮೊಯ್ಲಿ ಅಥವಾ ಮತ್ಯಾರೋ ಹೇಳೋದ್ರಿಂದ ಯಾರೂ ಮುಖ್ಯಮಂತ್ರಿ ಅಗಲ್ಲ, ಅದು ಹೈಕಮಾಂಡ್ ವಿವೇಚನೆಗೆ ಬಿಟ್ಟಿರುವ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ಗುತ್ತಿದಾರರ ಬಾಕಿ ಬಿಲ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದರು.ಬಾಕಿಯಿರುವ ಮೊತ್ತಗಳ ಪಾವತಿಗೆ ಗುತ್ತಿಗೆದಾರರ ಸಂಘ ಮನವಿ ಮಾಡಿದ್ದು, ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು, ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ಲುಗಳು ಹೆಚ್ಚಿವೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮಟ್ಟದಲ್ಲಿ ಕಮೀಷನ್ ದಂಧೆ ನಡೆದಿರುವುದಾಗಿ ಗುತ್ತಿಗೆ ಸಂಘದವರು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಸಹ ಅಪರಾಧ. ಈ ರೀತಿಯ ಕೃತ್ಯದಲ್ಲಿ ಯಾರು ತೊಡಗಬಾರದು. ನಾನು ಇದುವರೆವಿಗೂ ಹಣಬಿಡುಗಡೆ ಮಾಡಲು ಯಾರಿಂದಲೂ ದುಡ್ಡು ಪಡೆದಿಲ್ಲ ಎಂದು ಹೇಳಿದರು.