ಬೆಂಗಳೂರು : ಪರಿಶಿಷ್ಟ ಜಾತಿ ಪಟ್ಟಿಯಿಂದ ಬೋವಿ, ಲಂಬಾಣಿ, ಕೊರಮ, ಕೊರಚ ಸಮುದಾಯವನ್ನು ಎಸ್.ಸಿ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಗೊಂದಲ ನಿರ್ಮಿಸಿ ಸಮುದಾಯದ ಅಮಾಯಕ ಜನರಿಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಅನಂತ ನಾಯ್ಕ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಮೀಸಲಾತಿ ಒಕ್ಕೂಟದಿಂದ ಆಯೋಜಿಸಿದ್ದ ಸಂವಿಧಾನದ ಸಾಧನೆ ಮತ್ತು ಸವಾಲುಗಳ ಪರಾಮರ್ಶೆಗಾಗಿ “ಮೀಸಲಾತಿ ಸಂರಕ್ಷಣಾ ರಾಜ್ಯ ಸಮಾವೇಶದಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಅಲೆಮಾರಿಗಳು ಒಳಗೊಂಡಂತೆ 101 ಜಾತಿಗಳನ್ನು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಂತೆ ಎಸ್.ಸಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ನಮ್ಮ ಸಹೋದರ ಸಮುದಾಯದ ಕೆಲ ಪಟ್ಟಭದ್ರರು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ. ನನ್ನ ಖಾತೆಗೆ ಪೋನ್ ಪೇ ಮಾಡಿ ಎಂದು ರಾಜಾರೋಷವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದರು.
ಕೆಲವರು ಸುದ್ದಿಗೋಷ್ಠಿಗಳನ್ನು ಕರೆದು ತಪ್ಪು ಮಾಹಿತಿ ಬಿತ್ತರಿಸುವ ಜೊತೆಗೆ ಕಲೆಕ್ಷನ್ ಕೇಂದ್ರಗಳನ್ನು ಮಾಡಿಕೊಂಡು ವಸೂಲಿಕೋರರಾಗಿ ಪರಿವರ್ತನೆಯಾಗಿದ್ದಾರೆ. ಸಮುದಾಯದ ದಾರಿ ತಪ್ಪಿಸುವ ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೊರಚ, ಕೊರಮ ಮತ್ತಿತರ ಜನಾಂಗಗಳು 1950 ರ ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ. ನಂತರ ಈ ವರ್ಗಕ್ಕೆ ಸೇರಿದ ಎಲ್ಲಾ ಸಮುದಾಯ ಮತ್ತು ಸಮನಾರ್ಥಕ ಹೆಸರಿಂದ ಕರೆಯಲ್ಪಡುವ ಜಾತಿಗಳನ್ನು ಸಹ ಪರಿಶಿಷ್ಟರ ಪಟ್ಟಿಗೆ ಸೇರಿದ್ದು, ನಾವು ಸಾಕಷ್ಟು ಪ್ರಾಯಾಸಪಟ್ಟು ಏಣಿ ಹತ್ತಿದ್ದೇವೆ. ನಮ್ಮನ್ನು ಕೆಳಗಿಳಿಸುವ ಪ್ರಯತ್ನ ನಡೆದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ, ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸ್ಸಿನ ಅನ್ವಯ ಒಳಮೀಸಲಾತಿ ಜಾರಿಗೆ ತಂದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ನಾವು ಬೋವಿ ಜನಾಂಗ. ಕಲ್ಲು ಹೊಡೆಯುವ ಸಮಾಜ, ಸದಾ ಎಚ್ಚರವಾಗಿರುತ್ತೇವೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.
ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರ ಒಂದು ಹೆಜ್ಜೆ ಮುಂದೆ ಇಡುತ್ತಿದೆ. ನಮ್ಮ ಸಮಾಜದ ಒಳಿತಿಗೆ ಪೆಟ್ಟು ಬೀಳುವ ಸಂದರ್ಭದಲ್ಲಿ ಹೋರಾಟ ಮಾಡಿಯೇ ತೀರುತ್ತೇವೆ. ಸದಾಶಿವ ಆಯೋಗದ ಬಗ್ಗೆ ಯೋಚನೆ ಮಾಡಿದರೆ ಹಿಂದಿನ ಸರ್ಕಾರಕ್ಕೆ ಕಲಿಸಿದ ಪಾಠ ಮತ್ತೆ ಮರುಕಳಿಸಲಿದೆ ಎಂದರು.
ಬೋವಿ, ಲಂಬಾಣಿ, ಕೊರಚ, ಕೊರಮ, ಅಲೆಮಾರಿ ಸಮುದಾಯದ 51 ಜಾತಿಗಳಿಗೆ ನೀಡಿರುವ ಮೀಸಲಾತಿಯನ್ನು ಹಿಂಪಡೆಯುವ ಹುನ್ನಾರ ನಡೆಯುತ್ತಿದ್ದು, ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೀಸಲಾತಿಯನ್ನು ತೆಗೆದುಹಾಕಲು ಬಿಡುವುದಿಲ್ಲ. ಕೇಂದ್ರ ಎಸ್.ಸಿ/ಎಸ್.ಟಿ ಆಯೋಗಕ್ಕೂ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಕೃಷ್ಣ ರಾಜ ಒಡೆಯರ್ ನೀಡಿದ ಮೀಸಲಾತಿಯನ್ನು ಹಿಂಪಡೆಯಲು ಅವಕಾಶ ನೀಡುವುದಿಲ್ಲ. ಇಷ್ಟಕ್ಕೂ 2011ರ ಜನಗಣತಿ ಅವೈಜ್ಞಾನಿಕವಾಗಿದೆ. ಅಲೆಮಾರಿಗಳು ಒಂದು ಊರಿನಿಂದ ಮತ್ತೊಂದು ಊರಿಗೆ ಸದಾ ಸಂಚರಿಸುತ್ತಿರುತ್ತಾರೆ. ಇಂತಹ ಸಮುದಾಯದ ಜನಗಣತಿ ಸಾಧ್ಯವಿಲ್ಲ. ಇಂತಹ ಅವೈಜ್ಞಾನಿಕ ವರದಿ ಆಧರಿಸಿ ನಿರ್ಧಾರ ಕೈಗೊಳ್ಳುವುದು ಸಂವಿಧಾನ ಬಾಹಿರ ನಡೆ ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಒಳಮೀಸಲಾತಿ ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್ ಪೀಠ ಇದಕ್ಕೆ ಅವಕಾಶ ನೀಡಿಲ್ಲ. ಈ ಪ್ರಕರಣದ ಬಗ್ಗೆ ಉನ್ನತ ಪೀಠ ರಚನೆಯಾಗಿ ವಿಚಾರಣೆ ನಡೆಸಬೇಕಾಗಿದೆ. ಅಗತ್ಯ ಬಿದ್ದರೆ ಕೇಂದ್ರಕ್ಕೆ ನಿಯೋಗ ತೆರಳಲು ಸಿದ್ಧ. ಮುಖ್ಯಮಂತ್ರಿಗಳನ್ನು ಸಹ ಭೇಟಿ ಮಾಡಿ ಒಳ ಮೀಸಲಾತಿ ಶಿಫಾರಸ್ಸು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು. ಒಳಮೀಸಲಾತಿಯನ್ನು ಯಾರು ವಿರೋಧ ಮಾಡಿದ್ದರೋ ಅವರೇ ರಾಜ್ಯಸಭೆಯಲ್ಲಿ ಹೇಳಿಕೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅರವಿಂದ ಲಿಂಬಾವಳಿ ಅವರು ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರ ಹೆಸರನ್ನು ಉಲ್ಲೇಖಿಸದೇ ಹೇಳಿದರು.
ಎಸ್.ಸಿ.ಪಿ-ಟಿ.ಎಸ್.ಪಿ ಸಮುದಾಯಕ್ಕೆ ಮೀಸಲಾಗಿದ್ದ 11 ಸಾವಿರ ಕೋಟಿ ರೂಪಾಯಿ ಹಣವನ್ನು ಹಿಂಪಡೆಯಬಾರದು. ಈ ಹಣವನ್ನು ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಬಳಸಬೇಕು. ತಾಂಡ ಅಭಿವೃದ್ದಿ ನಿಗಮ, ಬೋವಿ, ಬಂಜಾರ ಅಭಿವೃದ್ಧಿ ನಿಗಮಗಳಿಗೆ ಈ ಹಣ ಹಂಚಿಕೆ ಮಾಡುವಂತೆ ಅರವಿಂದ ಲಿಂಬಾವಳಿ ಒತ್ತಾಯಿಸಿದರು.
ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ರವಿ ಮಾಕಳಿ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ಸಮುದಾಯಕ್ಕೆ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯೆ ನೀಡಿಲ್ಲ. ಮುಂಬರುವ ನಿಗಮ ಮಂಡಳಿ ಮತ್ತಿತರೆ ಸರ್ಕಾರಿ ನೇಮಕಾತಿಗಳಲ್ಲಿ ಅನ್ಯಾಯ ಸರಿಪಡಿಸಬೇಕು. ನಾವು ಸಂಘಟಿತರಾದಲ್ಲಿ ಮಾತ್ರ ಸರ್ಕಾರದಿಂದ ಸಮಪಾಲು ಪಡೆಯಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ನೂತನ ಶಾಸಕರಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಂಜುಳಾ ಲಿಂಬಾವಳಿ, ಹೂವಿನ ಹಡಗಲಿ ಕ್ಷೇತ್ರದ ಕೃಷ್ಣಾ ನಾಯಕ್, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಅವರನ್ನು ಸನ್ಮಾನಿಸಲಾಯಿತು. 101 ಜಾತಿಗಳ ಒಕ್ಕೂಟಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.