ಬೆಂಗಳೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಜನ ಸಾಮಾನ್ಯರಿಗೆ ಅಧಿಕ ಬಡ್ಡಿ ವಿಧಿಸಿ ನೀಡುತ್ತಿರುವ ತೊಂದರೆ ತಪ್ಪಿಸಲು ಕರ್ನಾಟಕ ಅಧಿಕ ಬಡ್ಡಿ ನಿಷೇಧ ಅಧಿನಿಯಮ, 2004ಕ್ಕೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕರ್ನಾಟಕ ಅಧಿಕ ಬಡ್ಡಿ ನಿಷೇಧ ಅಧಿನಿಯಮ ಪ್ರಸ್ತಾಪಿತ ತಿದ್ದುಪಡಿ ವಿಧೇಯಕ 2025ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದ್ದು, ಅಧಿಕ ಬಡ್ಡಿ ವಿಧಿಸಿದರೆ 10 ವರ್ಷ ಶಿಕ್ಷೆ ಜೊತೆಗೆ 5 ಲಕ್ಷ ರೂ ದಂಡ ವಿಧಿಸಲಾಗುವುದು ಎಂದರು.
ಕರ್ನಾಟಕ ಅಧಿಕ ಬಡ್ಡಿ ನಿಷೇಧ ಕಾಯನ್ವಯ ತಪ್ಪಿತಸ್ಥರಿಗೆ 10 ವರ್ಷ ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸುವ ಮೂಲಕ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಕರ್ನಾಟಕ ಗಿರಿವಿದಾರರ ಅಧಿನಿಯಮ, 1961ಕ್ಕೆ ತಿದ್ದುಪಡಿ ತಲಾಗುತ್ತಿದ್ದು, ಬಡವರು ಮತ್ತು ದುರ್ಬಲರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಇದು ಸಹಕಾರಿಯಾಗಲಿದೆ ಎಂದರು. ‘
ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ ಕೇಂದ್ರ ಸರ್ಕಾರದ ನೆರವಿನಿಂದ 61.99 ಕೋಟಿಗಳ ವೆಚ್ಚದಲ್ಲಿ ಮೈಸೂರಿನ ಸುಪ್ರಸಿದ್ಧ ಚಾಮುಂಡೇಶ್ವರಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುವುದು. ಇದರಲ್ಲಿ ಕೇಂದ್ರದ ಪಾಲು 45.71 ಕೋಟಿ ರೂ ಹಾಗೂ ರಾಜ್ಯದ ಪಾಲು 16.28 ಕೋಟಿ ರೂ ಎಂದರು. ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣವನ್ನು 20 ಕೋಟಿ ರೂ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಕಾಮಗಾರಿಗಳಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಮೂಲಕ ವಸ್ತು ಪ್ರದರ್ಶನ ಪ್ರಾಧಿಕಾರಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದರು.
ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಗೆ ಅನ್ವಯವಾಗುವಂತೆ ರಾಜ್ಯ ಸರ್ಕಾರದ 20 ಕೋಟಿ ರೂ ಸೇರಿ ಒಟ್ಟು 75 ಕೋಟಿ ರೂ ಮೊತ್ತದಲ್ಲಿ ಬಿಯಾಂಡ್ ಬೆಂಗಳೂರು ಕ್ಲಸ್ಟರ್ಸ್ ಸೀಡ್ ಫಂಡ್ ಸ್ಥಾಪನೆ ಮಾಡಲಾಗುವುದು. ಬೆಂಗಳೂರು ನಗರದಿಂದ ಹೊರ ಭಾಗದ ಪ್ರಮುಖ ನಗರಗಳಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ನಡೆಸಲು ಇದರಿಂದ ಸಹಕಾರಿಯಾಗಲಿದೆ ಎಂದರು.
ಕೇಂದ್ರ ಸರ್ಕಾರ ಪ್ರತಿ ಕೆ.ಜಿ ಅಕ್ಕಿಗೆ 22.50 ರೂ ದರದಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿತಿಂಗಳು ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮುಖಾಂತರ ಹಣವನ್ನು ವರ್ಗಾಯಿಸುವ ಬದಲಾಗಿ ಫೆಬ್ರವರಿಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುವುದು ಎಂದರು.
ಬೀದರನ ಪಾಪನಾಶ ದೇವಸ್ಥಾನಕ್ಕೆ 22.41 ಕೋಟಿ ರೂ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಮೂಲಸೌಕರ್ಯ ಕಲ್ಪಿಸಲಾಗುವುದು. ಜೊತೆಗೆ ಸಿವಿಲ್ ಕಾಮಗಾರಿಗಳಲ್ಲಿ ಪರಿಷ್ಕರಣೆ ಮಾಡುವ ಕುರಿತು ಗುರುಪ್ರಸಾದ್ ನೇತೃತ್ವದಲ್ಲಿ ಕಾಮಗಾರಿ ಅಂದಾಜುಗಳ ಸಮಿತಿ ರಚಿಸಿದ್ದು, ಸಮಿತಿಯಿಂದ ವರದಿ ಪಡೆದ ನಂತರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕೈಗಾರಿಕಾ ನೀತಿಗೆ ಘಟನೋತ್ತರ ಅನುಮೋದನೆ ನೀಡಿದ್ದು, ಹೊಸ ಕೈಗಾರಿಕಾ ನೀತಿಯ ಅವಧಿಯಲ್ಲಿ 7.50 ಲಕ್ಷ ಹೂಡಿಕೆಯನ್ನು ಆಕರ್ಷಿಸಲಾಗುವುದು. ಅನುಷ್ಠಾನಗೊಂಡ ಯೋಜನೆಗಳಿಗೆ ಮಾತ್ರ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ವಿಸ್ತರಿಸಲಾಗುವುದು. ಈ ನೀತಿ 2025-30ರವೆರಗೆ ಇರಲಿದೆ ಎಂದರು.
ಕ್ಲೀನ್ ಮೊಬಿಲಿಟಿ ನೀತಿ ಅನುಮೋದನೆಗೆ ಘಟನ್ನೋತ್ತರ ಅನುಮೋದನೆ ಜೊತೆಗೆ ಐಐಐಟಿ-ಬೆಂಗಳೂರು ಸಂಸ್ಥೆಯ ಮೂಲಸೌಕರ್ಯ ವಿಸ್ತರಣಾ ಯೋಜನೆಯನ್ನು 817 ಕೋಟಿ ರೂ ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ. ‘ಸೆಮಿಕಂಡಕ್ಟರ್ ಫ್ಯೂಚರ್ ಆಕ್ಸಿಲರೇಟರ್ ಲ್ಯಾಬ್ ಸ್ಥಾಪನೆ ಜೊತೆಗೆ ವಿಜಯಪುರದಲ್ಲಿ 1288.79 ಲಕ್ಷ ಅಂದಾಜು ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ವಿಜಯಪುರ ಕಿರು ತಾರಾಲಯ ಸ್ಥಾಪಿಸಲಾಗುವುದು ಎಂದು ಹೇಳಿದರು.
ರಾಜ್ಯದ 10 ಸಾವಿರ ವಸತಿ ರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ “ಮತ್ಸ್ಯಾಶ್ರಯ ಯೋಜನೆ”ಯಡಿ ಮನೆಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುವುದು. ವಿಧಾನಮಂಡಲ ಅಧಿವೇಶನವನ್ನು ಕರೆಯುವ ತೀರ್ಮಾನಕ್ಕೆ ಅನುಮತಿ ನೀಡಲಾಗಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2025”ಕ್ಕೆ ಅನುಮೋದನೆ ನೀಡಿದ್ದು, ಇದನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಅದರ ತತ್ಸಮಾನ ವಿದ್ಯಾರ್ಥಿಗಳ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸಿಸಿರುವ ಮತ್ತು ಸದರಿ ವಿದ್ಯಾಬ್ಯಾಸವನ್ನು ಕನ್ನಡ ಮಾಧ್ಯಮದಲ್ಲಿ ಮಾಡಿರುವ ಮತ್ತು ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇತರ ಆಯ್ಕೆ ಪ್ರಾಧಿಕಾರಗಳು ನಡೆಸಿರುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯಥಿಗಳಿಗೆ ಸದರಿ ಪರೀಕ್ಷೆಯಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
2023-24ನೇ ಸಾಲಿನ 38ನೇ ಸಂಚಿತ ವಾರ್ಷಿಕ ಲೋಕಾಯುಕ್ತ ವರದಿಯನ್ನು ಸದನದಲ್ಲಿ ಮಂಡಿಸಲು ಹಾಗೂ ಮುಧೋಳ, ಅಥಣಿ ಮತ್ತು ಹುನಗುಂದದಲ್ಲಿ 37.98 ಕೋಟಿ ರೂ ವೆಚ್ಚದಲ್ಲಿ 50 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುವುದು. ಕೋಮು-ಸೌಹಾರ್ದದ ಪ್ರತೀಕವಾದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮುರಗಮಲ್ಲ ದರ್ಗಾವನ್ನು 31.99 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಚಿಂಚೋಳಿಯಲ್ಲಿ 10.91 ಕೋಟಿಗಳ ಪರಿಷ್ಕತ ಅಂದಾಜು ಮೊತ್ತದಲ್ಲಿ ಪ್ರಜಾಸೌಧ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದೇ ರೀತಿ ಗದಗ ತಾಲ್ಲೂಕಿನಲ್ಲಿ 16 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು, ಹಾವೇರಿ ಜಿಲ್ಲೆ, ಶಿಗ್ಗಾಂವ್ ತಾಲ್ಲೂಕು ಗುಡ್ಡದಚನ್ನಾಪುರ ಗ್ರಾಮದ ಹೊರಬೀರಲಿಂಗೇಶ್ವರ ಸೇವಾ ಸಮಿತಿಗೆ ಎರಡು ಎಕರೆ ಜಮೀನು ನೀಡಲು ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಭೂದಾಖಲೆಗಳ ಆಧುನೀಕರಣ ಕಾರ್ಯಕ್ರಮದಡಿಯಲ್ಲಿ ಭೂ-ದಾಖಲೆಗಳ ಆಧುನೀಕರಣಕ್ಕೆ ಜಿ.ಎನ್.ಎಸ್.ಎಸ್ ತಂತ್ರಜ್ಞಾನ ಒದಗಿಸಲು ತೀರ್ಮಾನಿಸಿದ್ದು, ಇದಕ್ಕೆ 175 ಕೋಟಿ ರೂ ನೀಡಲಾಗುವುದು. ಕಲಬುರಗಿಯಲ್ಲಿ 16 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಕೆ.ಜಿ.ಟಿ.ಟಿ.ಐ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.
ಚಾಮರಾಜಪೇಟೆಯಲ್ಲಿ 25 ಕೋಟಿ ರೂ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಇತ್ಯಾದಿ 61 ವಸತಿ ಶಾಲೆಗಳಿಗೆ 1292.50 ಕೋಟಿ ರೂ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.
ಶಹಾಪೂರ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ 198.35 ಚ.ಮೀ. ಸ್ಥಳದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಲು ಉಚಿತವಾಗಿ ಸ್ಥಳ ಒದಗಿಸಲಾಗುವುದು. ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಒಡೆತನದ 2988.29 ಚ.ಮೀ ಜಾಗವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.