ಡಿ.ಕೆ. ಶಿವಕುಮಾರ್ ಅವರೆ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಸಚಿವ ಕೆ.ಎನ್. ರಾಜಣ್ಣ

Kannada Nadu
ಡಿ.ಕೆ. ಶಿವಕುಮಾರ್ ಅವರೆ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಸಚಿವ ಕೆ.ಎನ್. ರಾಜಣ್ಣ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕಿಡಿಕಾರಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ನಾವ್ಯಾರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಮಾಡಿಕೊಂಡಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿ, ಡಿ.ಕೆ. ಶಿವಕುಮಾರ್ ಅವರೆ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿಗೆ ನೂತನ ಅಧ್ಯಕ್ಷರ ವಿಚಾರಗಳು ಚರ್ಚೆಯಾಗುತ್ತಲೆ ಇದ್ದು, ಆಂತರಿಕ ಸಂಘರ್ಷ ತಾರಕಕ್ಕೇರಿರುವಾಗಲೇ ಸಚಿವ ಕೆ.ಎನ್. ರಾಜಣ್ಣ ಅವರು ಇಂದು ನೇರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವುದು ಕಾಂಗ್ರೆಸ್‌ನಲ್ಲಿ ಬಣ ಸಂಘರ್ಷ ಮತ್ತಷ್ಟು ತೀವ್ರವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಎಚ್ಚರಿಕೆ ಗಿಚ್ಚರಿಕೆ ಎಲ್ಲ ಇಲ್ಲಿ ನಡೆಯಲ್ಲ. ಎಚ್ಚರಿಕೆಯನ್ನು ಯಾರು ಕೇಳುತ್ತಾರೆ ಎಂದು ಮುಖ್ಯಮಂತ್ರಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಗುಡುಗಿದ್ದಾರೆ.

ನಾವು ಯಾರ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ. ಒಂದು ವೇಳೆ ನಾವು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಕ್ರಮ ಕೈಗೊಳ್ಳಲಿ ಎಂದು ಸಚಿವ ರಾಜಣ್ಣ ಸವಾಲಿನ ದಾಟಿಯಲ್ಲಿ ಹೇಳಿದರು. ಸಿಎಂ ಸಿದ್ಧರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಶಿವಕುಮಾರ್ ಅವರೇ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ನಾವು ಅವರ ವಿರುದ್ಧ ಆರೋಪ ಮಾಡುತ್ತಿಲ್ಲ ಇದುವಾಸ್ತವ ಎಂದು ಹೇಳಿದರು.

ಪಕ್ಷದಲ್ಲಿ ನಾನು ಹಲವು ವರ್ಷ ದುಡಿದಿದ್ದೇನೆ. ಯಾರಿಂದಲೂ ಶಿಸ್ತಿನ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪಪರಿಣಾಮ ಬೀರುವ ರೀತಿ ಮಾತನಾಡಲ್ಲ ಎಂದರು. ನನಗೂ ಉಪಮುಖ್ಯಂಮತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ವೈಯುಕ್ತಿಕವಾಗಿ ಏನೂ ಇಲ್ಲ. ವಿಚಾರದಲ್ಲಿ ನಾವಿಬ್ಬರೂ ಭಿನ್ನ ಅಷ್ಟೇ ವಿಧಾನಸಭೆಗೆ ನಾನು ಒಂದು ದಾರಿಯಲ್ಲಿ ಹೋಗಣ ಎಂದರೆ ಅವರು ಇನ್ನೊಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಡಿಕೆಶಿ ಅವರು ಬಹಳ ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಮಾಡಿದ್ದೇವೆ. ಅವರನ್ನು ಒಂದು ದಿನ ಮನೆಗೆ ಊಟಕ್ಕೆ ಕರೆಯುತ್ತೇನೆ ಎಂದು ರಾಜಣ್ಣ ಮಾರ್ಮಿಕವಾಗಿ ಹೇಳಿದರು.

ಶಿಶುಪಾಲನ ವಧೆ ಆಗಲಿದೆ ಎಂಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರ ಹೇಳಿಕೆಗೂ ಕಿಡಿಕಾರಿದ ಸಚಿವ ರಾಜಣ್ಣ, ನಮಗೆ ಎಚ್ಚರಿಕೆ ನೀಡಿಲು ಚಂದ್ರಶೇಖರ್ ಯಾರು ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ ಅವರಿಗೇನು ಎರಡು ಕೊಂಬು ಇದೆಯೇ. ಶಿಶುಪಾಲ, ಕೃಷ್ಣ ಪುರಾಣ ಇದೆಲ್ಲಾ ನಾನು ನಂಬಲ್ಲ. ಪುರಾಣ ಎಲ್ಲ ಕಟ್ಟು ಕಥೆ ಅವರೇ ಶಿಶುಪಾಲರು. ಇಂತವರು ಪಕ್ಷಕ್ಕೆ ಹೊರೆ. ಇವರ ಹಿನ್ನಲೆ ಏನು ಎಂದು ವಾಗ್ದಾಳಿ ನಡೆಸಿದರು.

ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ನಾವ್ಯಾರೂ ಹಠಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ಈ ಹಿಂದೆ ಹೇಳಿದಂತೆ ಲೋಕಸಭಾ ಚುನಾವಣೆವರೆಗೆ ಮಾತ್ರ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿತ್ತು. ಅದನ್ನು ನಾವು ಈಗ ಹೈಕಮಾಂಡ್ ಮುಂದೆ ಪ್ರಶ್ನೆ ಮಾಡಿದ್ದೇವೆ ಅಷ್ಟೆ. ಡಿಸಿಎಂ ಸ್ಥಾನ ಎಂದರೆ ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಅವರು ಟಾಂಗ್ ನೀಡಿದರು.

ಪ್ರತಿಕ್ರಿಯೆಗೆ ಡಿ.ಕೆ. ಶಿವಕುಮಾರ್ ನಕಾರ

ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರನ್ನು ನಾವ್ಯಾರೂ ದುರ್ಬಳಕೆ ಮಾಡಿಕೊಂಡಿಲ್ಲ. ಎಚ್ಚರಿಕೆ ಗಿಚ್ಚರಿಕೆ ನಡೆಯಲ್ಲ. ಎಐಸಿಸಿ ಹೆಸರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಸಚಿವ ರಾಜಣ್ಣ ಅವರ ನೇರ ಆರೋಪಕ್ಕೆ ಪ್ರತಿಕ್ರಿಯಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರಾಕರಿಸಿದ್ದಾರೆ

ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ ಅವರ ಮಾತಿಗೆ ನಾನು ಈಗ ಪ್ರತಿಕ್ರಿಯಿಸಲ್ಲ. ಇಂದು ಕೇರಳಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಪಕ್ಷದ ಕಾರ್ಯಕ್ರಮ ಇದೆ. ನಾಡಿದ್ದು ರಾಜಸ್ಥಾನದಲ್ಲಿ ಸಚಿವರುಗಳ ಸಮಾವೇಶ ಇದೆ. ಆ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಿ ಬಂದ ಮೇಲೆ ಸಹಕಾರ ಸಚಿವ ರಾಜಣ್ಣ ಅವರ ಮಾತುಗಳಿಗೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿ, ಈ ಕುರಿತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ಬಯಸಲಿಲ್ಲ.

ಪ್ರತಿಕ್ರಿಯೆಗೆ ಖರ್ಗೆ ನಕಾರ
ರಾಜ್ಯ ಕಾಂಗ್ರೆsಸ್‌ನಲ್ಲಿ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಬಣರಾಜ್ಯಕೀಯ ತಾರಕಕ್ಕೇರಿ ಸಚಿವರುಗಳ ವಾಕ್ ಸಮರ ಹೇಳಿಕೆಗಳು ಮುಂದುವರೆದಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹುಷಾರಿಲ್ಲ ಆಸ್ಪತ್ರೆಗೆ ಹೋಗುತ್ತಿದ್ದೇನೆ ರಾಜ್ಯ ಕಾಂಗ್ರೆಸ್‌ನ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದಷ್ಟೇ ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";