ಬಳ್ಳಾರಿ: ಬಳ್ಳಾರಿಯ `ಬಿಮ್ಸ್’ನಲ್ಲಿ ಒಂದಿಲ್ಲೊಂದು ಎಡವಟ್ಟುಗಳು ನಡೆದು, ಸುದ್ದಿಯಾಗುತ್ತಿರುವುದು, ಜಿಲ್ಲೆಯ, ರಾಜ್ಯದ ಗಮನ ಸೆಳೆಯುತ್ತಿರುವುದೇನೂ ಹೊಸತಲ್ಲ!. ಇದೀಗ `ಬಿಮ್ಸ್’ ಆಧೀನಕ್ಕೊಳಪಟ್ಟಿರುವ `ಟ್ರಾಮಾ’ ಕೇರ್ ಸೆಂಟರ್ನಲ್ಲಿ `ಟಾರ್ಚ್’ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿರುವುದು ಭರ್ಜರಿಯಾಗಿ `ಸುದ್ದಿ’ ಯಾಗಿದ್ದು, ರಾಜ್ಯ ಸರ್ಕಾರದ ಗಮನವನ್ನೂ ಸೆಳೆದಿದೆ.
`ಟ್ರಾಮಾಕೇರ್ ಸೆಂಟರ್’ನಲ್ಲಿ ಮೊಬೈಲ್ ಟಾರ್ಚ್‍ನ ಬೆಳಕಿನಲ್ಲಿ, ತುರ್ತು ಚಿಕಿತ್ಸಾ ಘಟಕದಲ್ಲಿ (ಎಮರ್ಜೆನ್ಸಿ ವಾರ್ಡ್) ಗಾಯಾಳು ರೋಗಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಅಪಘಾತದಲ್ಲಿ ಗಾಯಗೊಂಡ ರೋಗಿಯೊಬ್ಬರನ್ನು ಇತ್ತೀಚೆಗೆ ಈ ಆಸ್ಪತ್ರೆಗೆ ರಾತ್ರಿಯ ವೇಳೆ ಚಿಕಿತ್ಸೆಗೆಂದು ಕರೆದುಕೊಂಡು ಬರಲಾಗಿತ್ತು. ರಕ್ತಸ್ರಾವದಿಂದ ನರಳುತ್ತಿದ್ದ ರೋಗಿಗೆ ಆಸ್ಪತ್ರೆಯ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಅಲ್ಲದೇ ಇದೇ ವೇಳೆ `ಕರೆಂಟ್’ ಹೋಗಿತ್ತು. ವಿದ್ಯುತ್ ಕಡಿತದಿಂದಾಗಿ ಪರದಾಟ ನಡೆಸುವಂತಾಗಿತ್ತು. ಸಕಾಲಕ್ಕೆ ಜನರೇಟರ್ ಕೂಡಾ ಕೆಲಸ ಮಾಡಲಿಲ್ಲ ಎಂದು ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ರಾಜ್ಯದ ಸಿಎಂ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವರು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿತ್ತು.
ಬಳ್ಳಾರಿಯ `ಬಿಮ್ಸ್’ನ ಆಧೀನದಲ್ಲಿ ನಡೆಯುತ್ತಿರುವ, ಟ್ರಾಮಾ ಕೇರ್ ಸೆಂಟರ್‍ನಲ್ಲಿ, ಸಕಲ ಸವಲತ್ತು, ಸೌಲಭ್ಯಗಳಿದ್ದರೂ, ಜನರೇಟರ್ ವ್ಯವಸ್ಥೇ ಕಲ್ಪಿಸಲಾಗಿದ್ದರೂ `ವಿದ್ಯುತ್’ ಕಡಿತವಾಗಿ , ಕತ್ತಲಿನಲ್ಲಿ ಮೊಬೈಲ್ `ಟಾರ್ಚ್’ ಬೆಳಗಿ ಚಿಕಿತ್ಸೆ ನೀಡುವುದೆಂದರೇನು? ರೋಗಿಗಳಿಗೆ ಏನಾದರೂ ತೊಂದರೆಯಾದರೆ ಹೇಗೆ?? ಎಂದು ಸಾರ್ವಜನಿಕರು ಬೇಸರ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳ ಕಛೇರಿಯ ಅಧಿಕಾರಿಯೊಬ್ಬರು, ಬಳ್ಳಾರಿಯ `ಬಿಮ್ಸ್’ ನಿರ್ದೇಶಕರಿಗೆ ಈ ಘಟನೆ ಬಗ್ಗೆ ಮಾಹಿತಿ, ವರದಿ ನೀಡಿ ಸ್ಪಷ್ಟನೆ ಕೇಳಿದ್ದಾರೆಂತಲೂ ತಿಳಿದುಬಂದಿದೆ.
`ಬಿಮ್ಸ್’ ನಿರ್ದೇಶಕ ಡಾ||ಗಂಗಾಧರಗೌಡರು ಸಹ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ಇಡೀ ಘಟನೆಯ ಬಗ್ಗೆ ಸವಿವರ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಟ್ರಾಮಾ ಕೇರ್ ಸೆಂಟರ್‍ನಲ್ಲಿ ಅತ್ಯಾಧುನಿಕ ಸೌಲಭ್ಯಗಳು `ರೋಗಿ’ಗಳ ಸೇವೆಗೆ ಲಭ್ಯವಿವೆ. ದಿನದ 24 ತಾಸುಗಳ ಕಾಲವೂ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆಕಸ್ಮಿಕವಾಗಿ ವಿದ್ಯುತ್ ಕೈಕೊಟ್ಟಾಗಲೂ, ಸ್ವಯಂಪ್ರೇರಿತವಾಗಿ (ಆಟೋಮೇಟಿಕ್ ಆಗಿ) ಜನರೇಟರ್ ಚಾಲೂ ಆಗುವ ಸೌಕರ್ಯವಿದೆ. ಇದರಲ್ಲಿ ಏನೋ ತಾಂತ್ರಿಕ ತೊಂದರೆಯಿಂದಾಗಿ ಅಂದು ಅದು ಕೂಡಲೇ ಕೆಲಸ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಕೆಲವೇ ಹೊತ್ತಿನಲ್ಲಿ ಜನರೇಟರ್ ಚಾಲೂ ಮಾಡಿ ಚಿಕಿತ್ಸೆ ನೀಡಲಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಸವಿವರ ಮಾಹಿತಿ ನೀಡುವಂತೆಯೂ ಸರ್ಕಾರ ಹಾಗೂ ಉನ್ನತಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ನೀಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದು, ಸರ್ಕಾರವು ಈ ಬಗ್ಗೆ ವರದಿ ಕೇಳಿರುವುದು ಗಮನಾರ್ಹ.