ಮಂಗಳೂರು: 12 ವರ್ಷದ ಬಾಲಕನ ಎದೆಯಲ್ಲಿ ಹೊಕ್ಕಿದ್ದ ತೆಂಗಿನ ಗರಿ ಹಾಗೂ ಸರವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಾ. ಸುರೇಶ್ ಪೈ ನೇತೃತ್ವದ ತಂಡ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡಿ ಬಾಲಕನ ಜೀವ ಉಳಿಸಿದೆ. ಬಾಲಕನ ಜೀವ ಉಳಿಸಿರುವ ವೈದ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಮಡಕೇರಿ ಮೂಲದ ಕಮಲ್ ಹಸನ್ ಎಂಬ ಬಾಲಕ ತೋಟದಲ್ಲಿ ಆಟವಾಡುತ್ತಿದ್ದಾಗ ತೆಂಗಿನ ಗರಿಯ ಭಾಗವೊಂದು ಆತನ ಮೇಲೆ ಬಿದ್ದಿದೆ. ಬಾಲಕನ ಕುತ್ತಿಗೆಯಲ್ಲಿದ್ದ ಸರದ ಜೊತೆಗೆ ತೆಂಗಿನ ಗರಿಯೂ ಎದೆಯ ಭಾಗದಲ್ಲಿ ಸಿಲುಕಿಕೊಂಡಿತ್ತು. ಕೂಡಲೇ ಪೋಷಕರು ಬಾಲಕನನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಬಾಲಕನನ್ನು ಮಡಿಕೇರಿಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ರವಾನೆ ಮಾಡಲಾಯಿತು.
ಕೂಡಲೇ ಆಸ್ಪತ್ರೆ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ವಿಭಾಗದ ತಂಡವು ಡಾ. ಸುರೇಶ್ ಪೈ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ತೆಂಗಿನ ಗರಿ ಮತ್ತು ಸರವನ್ನು ಯಶಸ್ವಿಯಾಗಿ ಹೊರತೆಗೆದಿದೆ.ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದು, ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ.