ಪ್ರಯಾಗ್ ರಾಜ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಮಿಂದೆದ್ದಿದ್ದಾರೆ. ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದಾರೆ.
144 ವರ್ಷಕ್ಕೋಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಇದುವರೆಗೆ 20 ಕೋಟಿಗೂ ಹೆಚ್ಚು ಶ್ರದ್ಧಾಳುಗಳು ಪವಿತ್ರ ಸ್ನಾನ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಕಿರಣ್ ರಿಜಿಜು, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಪವಿತ್ರ ಸ್ನಾನ ಮಾಡಿದ್ದಾರೆ. ಇದಲ್ಲದೆ ಅನೇಕ ದೇಶಗಳ ಪ್ರತಿನಿಧಿಗಳು ಕೂಡ ಆಗಮಿಸಿದ್ದರು.
ಮೂರು ದಿನಗಳ ಹಿಂದೆ, ಫೆಬ್ರವರಿ 1 ರಂದು, 77 ದೇಶಗಳ 118 ಸದಸ್ಯರ ನಿಯೋಗವು ಮಹಾ ಕುಂಭದಲ್ಲಿ ಪವಿತ್ರ ಸ್ನಾನ ಮಾಡಿತು. ಇದರಲ್ಲಿ ಹಲವು ದೇಶಗಳ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಸೇರಿದ್ದಾರೆ. ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ 77 ದೇಶಗಳಲ್ಲಿ ರಷ್ಯಾ, ಮಲೇಷ್ಯಾ, ಬೊಲಿವಿಯಾ, ಜಿಂಬಾಬ್ವೆ, ಲಾಟ್ವಿಯಾ, ಉರುಗ್ವೆ, ನೆದರ್ಲ್ಯಾಂಡ್ಸ್, ಮಂಗೋಲಿಯಾ, ಇಟಲಿ, ಜಪಾನ್, ಜರ್ಮನಿ, ಜಮೈಕಾ, ಅಮೆರಿಕ, ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ಪೋಲೆಂಡ್, ಕ್ಯಾಮರೂನ್, ಉಕ್ರೇನ್, ಸ್ಲೊವೇನಿಯಾ ಮತ್ತು ಅರ್ಜೆಂಟೀನಾ ಕೂಡ ಸೇರಿದೆ.