ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧದ ಸರ್ಕಾರಿ ಜಾಗ ಒತ್ತುವರಿ ಆರೋಪ ಕುರಿತು ಹೈಕೋರ್ಟ್ ಸೂಚನೆ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಸೂಚನೆಯನ್ನು ಸರ್ಕಾರ ಗೌರವಿಸಬೇಕಾಗುತ್ತದೆ, ಅದರಂತೆ ನ್ಯಾಯಾಲಯದ ಆದೇಶ ಪಾಲನೆಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.ಕುಮಾರಸ್ವಾಮಿ ವಿರುದ್ಧದ ಜಮೀನು ಒತ್ತುವರಿ ಪ್ರಕರಣ ತನಿಖೆಯನ್ನು ಎಸ್‍ಐಟಿ ನಡೆಸಿ, ನ್ಯಾಯಾಲಯ ನೀಡಿರುವ ಗಡುವಿನೊಳಗೆ ವರದಿ ನೀಡಲಿದೆ ಎಂದರು.ಲೋಕಸಭೆಯಲ್ಲಿಂದು ಮಂಡಿಸಿದ 2025-26ನೇ ಸಾಲಿನ ಮುಂಗಡಪತ್ರ ಕುರಿತು ಪ್ರತಿಕ್ರಿಯಿಸಿದ ಅವರು, ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ, ಕರ್ನಾಟಕದ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದರು.ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ, ಕರ್ನಾಟಕ ಪಾವತಿಸುವ ತೆರಿಗೆ ಬೇರೆ ರಾಜ್ಯಗಳ ಪಾಲಾಗುತ್ತಿದೆ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆಗಳನ್ನು ಕೊಟ್ಟಿದ್ದಾರೆ, ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡುತ್ತಿದೆ ಎಂದು ಹೇಳಿದರು.
ಹಣಕಾಸು ಆಯೋಗ ಕರ್ನಾಟಕಕ್ಕೆ 11,495 ಕೋಟಿ ರೂ. ನೀಡುವಂತೆ ತಿಳಿಸಿತ್ತು, ರಾಜ್ಯಕ್ಕೆ ಬರಲೇಬೇಕಾದ ಅನುದಾನದ ಬಗ್ಗೆ ಇದುವರೆಗೆ ಚಕಾರ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೂ ಈ ಬಾರಿಯ ಬಜೆಟ್‍ನಲ್ಲಿ ಒಂದು ನಯಾಪೈಸಾ ಕೂಡ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕಕ್ಕೂ ಆಯವ್ಯಯದಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಸಚಿವೆ ಋಣ ತೀರಿಸಿಲ್ಲ ಎಂದರು.
ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ದೇಶದ ವಿವಿಧ ಭಾಗಗಳ ಯುವಜನರಿಗೆ ಉದ್ಯೋಗ ನೀಡುತ್ತಿದೆ, ಅಲ್ಲದೆ, ರಫ್ತು ಮೂಲಕವೂ ಹೆಚ್ಚಿನ ಆದಾಯ ತರುತ್ತಿದೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ರಾಜ್ಯದ ಋಣ ತೀರಿಸಿಲ್ಲ ಎಂದರು.
ಕೇಂದ್ರ ಸರ್ಕಾರಕ್ಕೆ ಕೇವಲ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ಮಾತ್ರ ಕಾಣಿಸುತ್ತಿವೆ, ಕರ್ನಾಟಕ ಕಾಣಿಸುತ್ತಿಲ್ಲ, ತೆರಿಗೆ ಕಟ್ಟುವ ಕನ್ನಡಿಗರೂ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ದೇಶಕ್ಕಾಗಿ ಕೇವಲ ದುಡಿಯವ ಆಳಿನಂತೆ ಕೇಂದ್ರಕ್ಕೆ ಗೋಚರವಾಗುತ್ತಿದೆ, ರಾಜ್ಯ ಸರ್ಕಾರದ ಪರವಾಗಿ ಕೇಂದ್ರ ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇನೆ ಎಂದಿದ್ದಾರೆ.