ಗ್ರಾಮೀಣ ಭಾರತ ಕಾರ್ಯಕ್ರಮದಡಿ ಸಂಚಾರಿ ವೈದ್ಯಕೀಯ ವಾಹನಕ್ಕೆ ಚಿಕ್ಕಬಳ್ಳಾಪುರದಲ್ಲಿ ಕ್ಲಿನಿಕ್ ಆನ್ ವೀಲ್ ಚಾಲನೆ
ಚಿಕ್ಕಬಳ್ಳಾಪುರ: ಬಡವರ ಮನೆ ಬಾಗಿಲಿನಲ್ಲಿ ಉಚಿತ ವೈದ್ಯಕೀಯ ಸೇವೆ ಒದಗಿಸುವ ಸದುದ್ದೇಶದಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸಲು ಸಂಚಾರಿ ವೈದ್ಯಕೀಯ ವಾಹನ [ಕ್ಲಿನಿಕ್ ಆನ್ ವೀಲ್]ವನ್ನು ಅನಾವರಣಗೊಳಿಸಲಾಯಿತು.
ಚಿಕ್ಕಬಳ್ಳಾಪುರದ ಎಂ.ಜಿ. ರಸ್ತೆಯ ಮುಹಮದ್ದೀಯ ಶಾಲೆ ಆವರಣದಲ್ಲಿ ಸಂಚಾರಿ ವಾಹನಕ್ಕೆ ಸಪ್ತಗಿರಿ ಆಸ್ಪತ್ರೆಯ ವ್ಯವಸ್ಥಾಪಕರಾದ ಜಿ.ಡಿ. ಮನೋಜ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಪ್ರತಿಯೊಂದು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 2೦ ವೈದ್ಯರ ತಂಡವಿರುವ ಈ ವಾಹನ ಸಂಚರಿಸಿ ಆರೋಗ್ಯ ತಪಾಸಣೆ ಮಾಡಲಿದೆ. ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆ ಮಾಡಿ ಸಾಧ್ಯವಾದರೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಅಗತ್ಯವಿದ್ದರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಎಲ್ಲಾ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿದ್ದು, ಸಂಚಾರಿ ವೈದ್ಯಕೀಯ ವಾಹನದಲ್ಲಿ ಇಬ್ಬರು ವೈದ್ಯರು, ಒಬ್ಬರು ನರ್ಸ್ ಇರುತ್ತಾರೆ. ಗ್ರಾಮೀಣ ಭಾರತ ಕಾರ್ಯಕ್ರಮದಡಿ ಆರೋಗ್ಯ ಸೇವೆಯನ್ನು ಗ್ರಾಮಗಳಿಗೆ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಐಎಂಎಸ್ ಪ್ರತಿಷ್ಠಾನ ಮತ್ತು ಹೋಪ್ ಫೌಂಡೇಶನ್ ಸಹಯೋಗದಲ್ಲಿ 1000 ಜನರಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಸುಮಾರು ಹಮ್ಮಿಕೊಳ್ಳಲಾಗಿತ್ತು. ತಜ್ಞ ವೈದ್ಯರ ತಂಡ ಹೃದ್ರೋಗ, ಸ್ತ್ರೀರೋಗ, ಮೂಳೆ, ಹರ್ನಿಯಾ, ನೇತ್ರ ತಪಾಸಣೆ, ನರರೋಗ, ಮೂತ್ರಪಿಂಡ, ನರರೋಗ, ಕಿವಿ, ಮೂಗು, ಗಂಟಲು ಮತ್ತಿತರೆ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡಿದರು.