ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯಪಥದಲ್ಲಿ ಭಾನುವಾರ ನಡೆದ ಗಣರಾಜೋತ್ಸವ ಪರೇಡ್ನಲ್ಲಿ ಐತಿಹಾಸಿಕ ನಗರವಾದ ಲಕ್ಕುಂಡಿಯ ವೈಶಿಷ್ಟ್ಯಪೂರ್ಣ ಹಾಗೂ ಕಲಾತ್ಮಕ ದೇವಾಲಯಗಳ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಾಯಿತು.
ಲಕ್ಕುಂಡಿಯು ಅಹಿಂಸಾವಾದಿಯ ನೆಲೆಬೀಡು. ಶಿಲ್ಪಕಲೆಯ ತೊಟ್ಟಿಲಾದ ಲಕ್ಕುಂಡಿಯಲ್ಲಿ ಶೈವ, ಜೈನ ಮತ್ತು ವೈಷ್ಣವ ದೇವಾಲಯಗಳಿವೆ. ಕಲಾತ್ಮಕತೆಯಿಂದ ಕಂಗೊಳಿಸುವ ಇಲ್ಲಿನ ದೇವಾಲಯಗಳು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಮೂಡಿಬಂದಿದೆ.
ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾದ ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಶ್ರೀ ಮಹಾವೀರನಿಗೆ ಅರ್ಪಿತವಾಗಿರುವ ಪುರಾತನ ದೇವಾಲಯವಾದ ಬ್ರಹ್ಮ ಜಿನ ದೇವಾಲಯದ ಬ್ರಹ್ಮ ಪ್ರತಿಮೆಯನ್ನು ಪ್ರದರ್ಶಿಸಲಾಯಿತು. ಇದರ ನಂತರ, ಬ್ರಹ್ಮ ಜಿನ ದೇವಾಲಯದ ಬಯಲು ಕಂಬಗಳ ಮಂಟಪದ ಸ್ತಬ್ಧ ಚಿತ್ರ ಸಾಗಿತು.
ಸ್ತಬ್ಧ ಚಿತ್ರದ ಮುಖ್ಯ ಭಾಗದಲ್ಲಿ ಅದ್ದೂರಿ ಹಾಗೂ ಕಲಾತ್ಮಕ ಕಾಶಿ ವಿಶ್ವನಾಥ ದೇವಾಲಯ ಹಾಗೂ ಶಿವನಿಗೆ ಮುಡಿಪಾಗಿರುವ ನನ್ನೇಶ್ವರ ದೇವಾಲಯವನ್ನು ಪ್ರದರ್ಶಿಸಲಾಯಿತು.
ಲಕ್ಕುಂಡಿಯ ದೇವಾಲಯಗಳು ಕರ್ನಾಟಕದ ಸಂಪದ್ಭರಿತ ಪರಂಪರೆ ಹಾಗೂ ಎಲ್ಲ ಧಾರ್ಮಿಕ ನಂಬಿಕೆಗಳನ್ನು ಪ್ರತಿಫಲಿಸುತ್ತವೆ. ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕ ಎಂದಿಗೂ ಸರ್ವಜನಾಂಗದ ಶಾಂತಿಯ ತೋಟವಾಗಿಯೇ ಬೆಳೆದು ಬಂದಿದೆ. ಲಕ್ಕುಂಡಿ ಚಾಲುಕ್ಯರು ನಿರ್ಮಿಸಿದ ಸುಂದರ ದೇವಾಲಯಗಳು ಹಾಗೂ ಕಲ್ಯಾಣಿಗಳ ತವರಾಗಿದೆ. ತನ್ನ ಸಾಂಸ್ಕೃತಿಕ ಹಿರಿಮೆಯಲ್ಲದೆ, 10ರಿಂದ 12ನೇ ಶತಮಾನದ ನಡುವೆ ಲಕ್ಕುಂಡಿಯು ಬೃಹತ್ ನಗರ ಹಾಗೂ ವಾಣಿಜ್ಯ ತಾಣವೂ ಆಗಿತ್ತು.
ಲಕ್ಕುಂಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ; 101 ಮೆಟ್ಟಿಲು ಬಾವಿಗಳು (ಕಲ್ಯಾಣಿ / ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಈ ಬಾರಿಯ ಸ್ತಬ್ಧಚಿತ್ರದಲ್ಲಿ ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸಿದೆ.