ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿಗಳಾದ ನಟ ದರ್ಶನ್ ಸೇರಿದಂತೆ ಇತರೆ ೭ ಮಂದಿಗೆ ಸುಪ್ರೀಂ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಇದರಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದು ನೆಮ್ಮದಿಯಾಗಿದ್ದ ನಟ ದರ್ಶನ್ ಗೆ ಮತ್ತೆ ಸಂಕಷ್ಟ ಆತಂಕ ಶುರುವಾಗಿದೆ.
ಹೈಕೋರ್ಟ್ ನೀಡಿರುವ ಜಾಮೀನು ತೀರ್ಪುನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಇಂದು ವಿಚಾರಣೆ ನಡೆದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ವಿಭಾಗೀಯ ಪೀಠವು ನಟ ದರ್ಶನ್ ಸೇರಿ ೭ ಮಂದಿಗೆ ನೋಟೀಸ್ ಜಾರಿ ಮಾಡಿದೆ.
ಪ್ರಾಸಿಕ್ಯೂಷನ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದಿ ಮಂಡಿಸಿದರು. ಹೈಕೋರ್ಟ್ ನೀಡಿರುವ ಜಾಮೀನು ತೀರ್ಪನ್ನು ಬೇರೆಯವರು ಬಳಕೆ ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ಗೆ ಕಾರಣ ಕೊಟ್ಟರು. ಆದರೆ, ಸುಪ್ರೀಂ ಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಲಾಗದು ಎಂದು ಹೇಳಿ ನೋಟಿಸ್ ಜಾರಿ ಮಾಡಿತು. ಬೇರೆ ಆರೋಪಿಗಳು ಜಾಮೀನು ಕೋರಿದರೆ ಹೈಕೋರ್ಟ್‌ನ ಆದೇಶವನ್ನು ಆಧರಿಸಬಾರದು ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳಿಗೆ ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಕೋರ್ಟ್‌ನ ತೀರ್ಮಾನಕ್ಕೆ ಬೆಂಗಳೂರು ಪೊಲೀಸರು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿ ಅಗತ್ಯ ಸಿದ್ಧತೆ ಮಾಡಿಕೊಂಡು ಸುಪ್ರೀಂ ಕೋರ್ಟ್‌ಗೆ ಜನವರಿ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಿದ್ದರು. ಸರ್ಕಾರವು ವಕೀಲರನ್ನು ನೇಮಕ ಮಾಡಿತ್ತು.
ಯಾರೆ ವಿರುದ್ಧ ಅರ್ಜಿ ಸಲ್ಲಿಕೆ:
ಪವಿತ್ರಾ ಗೌಡ (ಎ ೧)ದರ್ಶನ್ (ಎ ೨)ಜಗದೀಶ್ ಜಗ್ಗ ಅಲಿಯಾಸ್ ಜಗ್ಗ (ಎ ೬)ಅನುಕುಮಾರ್ ಅಲಿಯಾಸ್ ಅನು (ಎ ೭)ಆರ್ ನಾಗರಾಜು (ಎ ೧೧)ಎಂ ಲಕ್ಷ್ಮಣ್ (ಎ ೧೨)ಪ್ರದೋಶ್ ಎಸ್. ರಾವ್ (ಎ ೧೪)
ನಟ ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೆ ಕೂಡಲೇ ಬಂಧನವಾಗಿ ಮತ್ತೆ ಜೈಲು ಸೇರಬೇಕಾಗುತ್ತದೆ. ಹೀಗಾಗಿ, ನಟ ದರ್ಶನ್ ಹಾಗೂ ಅಭಿಮಾನಿಗಳು ಸುಪ್ರೀಂ ಕೋರ್ಟ್ ವಿಚಾರಣೆ ಮೇಲೆ ನಿಗಾ ಇಟ್ಟಿದ್ದಾರೆ.
ಏನಿದು ಕೇಸ್?
ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದರು ಎಂಬ ಕಾರಣಕ್ಕೆ ಕಳೆದ ಜೂನ್ ೮ ರಂದು ಚಿತ್ರದುರ್ಗದ ರೇಣುಕಾಸ್ವಾಮಿ ವ್ಯಕ್ತಿ ಕೊಲೆಯಾಗಿತ್ತು. ಜೂನ್ ೧೧ ರಂದು ನಟ ದರ್ಶನ್ ಸೇರಿದಂತೆ ೧೭ ಆರೋಪಿಗಳ ಬಂಧನ ಮಾಡಲಾಗಿತ್ತು. ಸತತ ೬ ತಿಂಗಳ ನ್ಯಾಯಾಂಗ ಬಂಧನ ಬಳಿಕ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕೋಲೆ ಕೇಸ್‌ಗೆ ಸಂಬಂಧಿಸಿದಂತೆ ಸೆಷನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ನೋಟೀಸ್
![ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ನೋಟೀಸ್ ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಸುಪ್ರೀಂ ಕೋರ್ಟ್ ನೋಟೀಸ್](https://kannadanadunews.in/wp-content/uploads/2025/01/2.jpg)