ಆರ್.ಟಿ.ಇ. ಮತ್ತು ವೇತನಾನುದಾನ ಸಮಸ್ಯೆ ಬೇಡಿಕೆಗೆ ಸ್ಬಂದಿಸುವ ಭರವಸೆ

ಬೆಂಗಳೂರು : ಈಶ್ವರ ಖಂಡ್ರೆ, ದರ್ಶನಾಪುರ, ರಹೀಂಖಾನ್, ಭೋಸರಾಜ್ ಭೇಟಿ ಮಾಡಿದ ಕಲ್ಯಾಣ ಕರ್ನಾಟಕದ ನಿಯೋಗ, ಕಲ್ಯಾಣ ಕರ್ನಾಟಕ ಭಾಗದಲ್ಲಿ 1995ರ ನಂತರ ಪ್ರಾರಂಭವಾದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೆ ವೇತನಾನುದಾನ ಒದಗಿಸುವ ಕುರಿತಂತೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ. ಸಚಿವರುಗಳಾದ ಭೋಸರಾಜ್, ರಹೀಂ ಖಾನ್, ಶರಣ ಬಸಪ್ಪ ದರ್ಶನಾಪುರ  ಅವರೊಂದಿಗೆ ಬೆಂಗಳೂರಿನಲ್ಲಿಂದು ಕಲ್ಯಾಣ ಕರ್ನಾಟಕ ವಿಭಾಗೀಯ ಖಾಸಗಿ ಶಿಕ್ಷಣ ಮಂಡಳಿಗಳ ಒಕ್ಕೂಟ ಮತ್ತು ಆರ್.ಟಿ.ಇ. ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಸಂವಾದ ನಡೆಸಿದ ಈಶ್ವರ ಖಂಡ್ರೆ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕಿಸುವಲ್ಲಿ ವೇತನಾನುದಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. 

ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಣದ ಹಕ್ಕು ಕಾಯಿದೆಯ ನಿಯಮ 4ಕ್ಕೆ ತಿದ್ದುಪಡಿ ತಂದಿರುವ ಪರಿಣಾಮ ಇಂದು 9 ಲಕ್ಷಕ್ಕೂ ಅಧಿಕ ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವುದರಿಂದ ವಂಚಿತರಾಗಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಈ ಬಗ್ಗೆ ಅಂಕಿ-ಅಂಶ ತರಿಸಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಕೇಂದ್ರದಲ್ಲಿ ಯು.ಪಿ.ಎ. ಸರ್ಕಾರದ ಕಾರ್ಯಕಾಲದಲ್ಲಿ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರ್.ಟಿ.ಇ. ಕಾಯಿದೆ ಜಾರಿಗೆ ತರಲಾಗಿದೆ. ಇದರಿಂದ ಲಕ್ಷಾಂತರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕಂತೂ ಇದು ವರದಾನವಾಗಿತ್ತು. ಈ ಬಗ್ಗೆ ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ತಾವು ವೈಯಕ್ತಿಕವಾಗಿ ಭಾಗವಿಸುವುದಾಗಿ  ಹೇಳಿದರು.

ಆರ್.ಟಿ.ಇ. ನಿಯಮ ಬದಲಾವಣೆಯಿಂದ ಆಗಿರುವ ತೊಡಕು ನಿವಾರಿಸಿ ಕಾಂಗ್ರೆಸ್ ಸರ್ಕಾರ ಬಡವರ ಪರವಾದ ಸರ್ಕಾರ ಎಂಬುದನ್ನು ನಿರೂಪಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಆರ್.ಟಿ.ಇ. ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ, ಕಲ್ಯಾಮ ಕರ್ನಾಟಕ ವಿಭಾಗೀಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಸುನೀಲ್ ಹುಡುಗಿ ಸೇರಿದಂತೆ ನೂರಾರು ಮಂದಿ ನಿಯೋಗದಲ್ಲಿ ಹಾಜರಿದ್ದರು.

Facebook
Twitter
LinkedIn
Telegram
WhatsApp

Leave a Comment

Your email address will not be published. Required fields are marked *

Translate »
Scroll to Top