ಬೆಂಗಳೂರು: ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ವಿಪಕ್ಷ ನಾಯಕ ಆರ್. ಅಶೋಕ್ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ತುಷ್ಠೀಕರಣ, ಅರಾಜಕತೆಯಿಂದ ನಿಸ್ತೇಜವಾಗಿರುವ ರಾಜ್ಯ ಸರ್ಕಾರ ಬಲಹೀನತೆಯನ್ನೆ ಬಂಡವಾಳವಾಗಿಸಿಕೊಂಡಿರುವ ಮತಾಂಧ ಶಕ್ತಿಗಳು ಗೋವುಗಳ ಮೇಲೆ ಪ್ರಹಾರ ಮಾಡುವ ಮೂಲಕ ಹಿಂದೂಗಳಿಗೆ ಸವಾಲು ಹಾಕುತ್ತಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಗೋವುಗಳ ಮೇಲೆ ಪದೇ ಪದೇ ನಡೆಯುತ್ತಿರುವ ಈ ದಾಳಿಗಳನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಜಾಲವೇ ಅಡಗಿದಂತಿದೆ. ಮತಾಂಧ ಶಕ್ತಿಗಳು, ಮೂಲಭೂತವಾದಿ ಶಕ್ತಿಗಳ ದೊಡ್ಡ ಜಿಹಾದಿ ಷಡ್ಯಂತ್ರವೇ ಇದ್ದಂತಿದೆ ಎಂದು ಹೇಳಿದ್ದಾರೆ.
ಚಾಮರಾಜಪೇಟೆಯಲ್ಲಿ ಗೋಮಾತೆಯ ಕೆಚ್ಚಲು ಕೊಯ್ದ ಅಮಾನುಷ ಘಟನೆ ಮಾಸುವ ಮುನ್ನವೇ ಹೊನ್ನಾವರ ತಾಲ್ಲೂಕಿನ ಸಾಲ್ಕೊಡ ಗ್ರಾಮದಲ್ಲಿ ಗಬ್ಬದ ಆಕಳು ಕಡಿದು ಗರ್ಭದಿಂದ ಕರು ತೆಗೆದು ಬಿಸಾಡಿ ಮಾಂಸ ಹೊತ್ತೊಯ್ಯುವ ಮೂಲಕ ಕಿಡಿಗೇಡಿಗಳು ಮತ್ತೊಮ್ಮೆ ಕ್ರೌರ್ಯ ಮೆರೆದಿದ್ದಾರೆ. ಇದನ್ನು ಸಹಿಸಲ್ಲ. ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ನಿಗಮಗಳಿಗೆ ಅನುದಾನ ನೀಡದ ಸರ್ಕಾರ
ರಾಜ್ಯ ಸರ್ಕಾರ ಪರಿಶಿಷ್ಟರು, ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕೆ ಸ್ಥಾಪಿಸಲಾಗಿರುವ ಹಲವು ನಿಗಮಗಳಿಗೆ ಬಿಡಿಗಾಸು ಅನುದಾನವನ್ನು ಬಿಡುಗಡೆ ಮಾಡಿಲ್ಲ. ಅಹಿಂದ ಹೆಸರಿನಲ್ಲಿ ಜನರಿಗೆ ವಿಶ್ವಾಸ ದ್ರೋಹ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಜನ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ನಿಗಮಗಳಿಗೆ ಅನುದಾನ ಬಿಡುಗಡೆ ಮಾಡದೆ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೂ ಕಿಡಿಕಾರಿರುವ ಅವರು, ಮುಖ್ಯಮಂತ್ರಿಗಳೇ ಇದೇನಾ ನಿಮ್ಮ ಸಾಮಾಜಿಕ ನ್ಯಾಯ. ಬಡವರು, ಪರಿಶಿಷ್ಟರು, ಹಿಂದುಳಿದವರ ಬಗ್ಗೆ ಇದೇನಾ ತಮಗಿರುವ ಕಾಳಜಿ, ಇದೇನಾ ಗಾಂಧಿ ಭಾರತ ನಿರ್ಮಿಸುವ ಪರಿ ಎಂದು ಪ್ರಶ್ನಿಸಿದ್ದಾರೆ.