ಬಿಜೆಪಿಯಲ್ಲಿ ಬಣದಾಟ ಜೋರು: ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದ ಶಾಸಕ ವಿ.ಸುನೀಲ್ ಕುಮಾರ್

Kannada Nadu
ಬಿಜೆಪಿಯಲ್ಲಿ ಬಣದಾಟ ಜೋರು: ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದ ಶಾಸಕ ವಿ.ಸುನೀಲ್ ಕುಮಾರ್

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಾಸಕ ವಿ.ಸುನೀಲ್ ಕುಮಾರ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ.ಸದ್ಯ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವಾದರೂ ಯಾವುದೇ ಸಂದರ್ಭ ದಲ್ಲೂ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಬಹುದೆಂದು ಹೇಳಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕೆಂದು ಖಾಯಂ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರು ಒತ್ತಾಯ ಮಾಡುತ್ತಿರುವ ಬೆನ್ನಲ್ಲೇ ಸುನೀಲ್ ಕುಮಾರ್ ನಡೆ ಅಚ್ಚರಿಗೆ ಕಾರಣವಾಗಿದೆ.ಮೂಲತಃ ಸಂಘ ಪರಿವಾರದ ಜೊತೆ ಗುರುತಿಸಿಕೊಂಡಿರುವ ಅವರು ಯಾವುದೇ ಭಿನ್ನಮತೀಯ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದೇ  ಸಮತೋಲನದ ಅಂತರ ಕಾಪಾಡಿಕೊಂಡೇ ಬಂದಿದ್ದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುನೀಲ್ ಕುಮಾರ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಮೂಲಕ ಮಹತ್ವದ ಹುದ್ದೆಯನ್ನೇ ನೀಡಲಾಗಿತ್ತು.

ಆರ್.ಎಸ್.ಎಸ್ ಕಟ್ಟಾಳು ಎಂದೇ ಗುರುತಿಸಿಕೊಂಡಿರುವ ಅವರು ಒಂದು ಕಡೆ ವಿಜಯೇಂದ್ರಗೂ ಜೈ ಅಂದವರೇ ಮತ್ತೊಂದು ಕಡೆ ಯತ್ನಾಳ್ ಬಣಕ್ಕೂ ತೆರೆಮರೆಯಲ್ಲೇ ಸೈ ಎಂದವರು. ಈಗ ಅತ್ಯಂತ ಪ್ರಮುಖ ಹುದ್ದೆ ಎನಿಸಿದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಈ ಬಗ್ಗೆ ಸ್ವತಃ ಸುನೀಲ್ ಅವರೇ ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್  ಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ. ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಬೆನ್ನಲ್ಲೇ ಸುನಿಲ್ ಅವರ ಈ ನಡೆ ಅಚ್ಚರಿ ಮೂಡಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುನಿಲ್ ಕುಮಾರ್, ವಿಜಯೇಂದ್ರ ತಂಡದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಸುನಿಲ್ ಕುಮಾರ್ ಅವರಿಗೆ ಯಾವುದೇ ವಿರಸ ಇಲ್ಲ. ಸಮರಸವು ಇಲ್ಲ. ಆದರೆ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪಕ್ಷದ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸಲು ಮನವಿ ಮಾಡಿಕೊಂಡಿದ್ದು, ಇದಕ್ಕೂ ಮುಂಚೆ ಮೌಖಿಕವಾಗಿ ಕೋರಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ಮಾತ್ರ ನಿಯೋಜನೆ ಮಾಡಲಾಗುತ್ತದೆ. ಸದ್ಯ ಸುನೀಲ್ ಕುಮಾರ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಹಾಗೂ ಪಿ.ರಾಜೀವ್ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸುನೀಲ್ ಕುಮಾರ್ ಹಾಗೂ ವಿಜಯೇಂದ್ರ ನಡುವೆ ಯಾವುದೇ ರೀತಿಯ ಭಿನ್ನಭಿಪ್ರಾಯವಿಲ್ಲದ ತಟಸ್ಥ ಸಂಬಂಧವಿದೆ.ಕಳೆದ ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿಯಾಗಿದ್ದ ಸುನೀಲದ ಕುಮಾರ್, ವಿಜಯೇಂದ್ರ ಜೊತೆ ಯಾವುದೇ ವಿವಾದ ಇಲ್ಲದೇ ಕಾರ್ಯ ನಿರ್ವಹಿಸಿದ್ದರು. ಇನ್ನೂ ಬಣ ಬಡಿದಾಟದ ವಿಷಯದಲ್ಲಿ ಸುನೀಲ್ಕುಮಾರ್ ಯಾರ ಬಣಕ್ಕೂ ಸೇರಿಕೊಂಡಿಲ್ಲ. ಆದರೆ ಇದೀಗ ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

ಸದ್ಯ ಈ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದು, ಈ ಸಂಬಂಧ ಪಕ್ಷ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಂಡಿಲ್ಲ. ಸುನಿಲ್ ಕುಮಾರ್ ಸ್ಥಾನಕ್ಕೆ ಯಾರು?: ಒಂದು ವೇಳೆ ಹೈಕಮಾಂಡ್ ಸುನಿಲ್ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿದರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾರು ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಈ ಹುದ್ದೆಗೆ ಇಬ್ಬರು ಪ್ರಬಲ ನಾಯಕರಿದ್ದಾರೆ.ಈ ಹಿಂದೆಯೇ ಪ್ರಧಾನ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದ ಎನ್.ರವಿಕುಮಾರ್ ಹಾಗೂ ಡಿ.ಎಸ್. ಅರುಣ್ ರೇಸ್ ನಲ್ಲಿದ್ದು, ಬಹುತೇಕ ರವಿಕುಮಾರ್ ಅವರಿಗೆ ಮತ್ತೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುವ ಎಲ್ಲಾ ಸಾಧ್ಯತೆಗಳಿವೆ. ರವಿಕುಮಾರ್  ಸಂಘಟನಾಕಾರ. ಈ ಹಿಂದೆ ಅವರು ಇದೇ ಪ್ರಧಾನ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ ಅನುಭವ ಇದೆ. ಹಾಗೇ ಅವರು ತಮ್ಮ ಸಂಘಟನೆಯಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲುವಂತಾಗಿತ್ತು.

ಬಿಜೆಪಿಯಲ್ಲಿ ಬಣದಾಟ ಜೋರು: ಬಿಜೆಪಿಯ ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡೆದ್ದಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ನಾಯಕರು ನೇರ ಟಕ್ಕರ್ ನೀಡಲು ಸಜ್ಜಾಗುತ್ತಿದ್ದು, ಮುಂಬರುವ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆಗೆ ಯತ್ನಾಳರನ್ನೇ ಅಭ್ಯರ್ಥಿಯಾಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಯತ್ನಾಳ ಬಣದಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದು, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರ ಮುಂದಿನ ಹಾದಿ ಸುಗಮವಾಗಿರಬಾರದು ಎಂಬ ನಿಲುವಿಗೆ ಬಣದ ನಾಯಕರು ಬಂದಿದ್ದಾರೆ.ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣೆ ಎಂದರೆ ಇತರ ಸಾಮಾನ್ಯ ಚುನಾವಣೆಗಳಂತೆ ಅಲ್ಲದಿದ್ದರೂ ಒಂದು ಹಂತದ ಭರಾಟೆ ಇದ್ದೇ ಇರುತ್ತದೆ. ಪರೋಕ್ಷವಾಗಿ ಮತದಾನದಂತೆ ಪ್ರಕ್ರಿಯೆ ನಡೆಯುತ್ತದೆ.ಒಬ್ಬರಿಗಿಂತ ಹೆಚ್ಚು ಮಂದಿ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿದಲ್ಲಿ ಅಥವಾ ಪ್ರತಿಸ್ಪರ್ಧಿಗಳಿದ್ದಲ್ಲಿ ಆಗ ರಾಜ್ಯ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಬೇಕಾಗುತ್ತದೆ. ಈ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳು ಆಗಲಿವೆ ಎಂಬುದನ್ನು ಕಾದುನೋಡಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";