ಬೆಂಗಳೂರು: ಪಕ್ಷದ ವಿಚಾರಗಳ ಬಗ್ಗೆ ಯಾರು ಬಹಿರಂಗವಾಗಿ ಮಾತನಾಡಬಾರದು. ಎಲ್ಲರೂ ಬಾಯಿಮುಚ್ಚಿಕೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಫರ್ಮಾನು ಹೊರಡಿಸಿದ್ದರೂ ರಾಜ್ಯ ಕಾಂಗ್ರೆಸ್ನಲ್ಲಿ ಮಳೆ ನಿಂತರೂ ಹನಿ ನಿಲ್ಲಲಿಲ್ಲ ಎಂಬಂತೆ ಒಳಗೊಳಗೆ ಬಣ ರಾಜಕೀಯದ ಚಟುವಟಿಕೆಗಳು ನಡೆದಿದ್ದು, ಕೆಲ ಶಾಸಕರುಗಳು ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿರುವುದು ಹೊಸ ಬೆಳವಣಿಗೆಗಳಿಗೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಚಿವ ಸತೀಶ್ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರ ಬದಲಾಗಬೇಕು ಎಂದು ಹೇಳಿಕೆ ನೀಡಿ ನಂತರ ತಾವು ಆ ರೀತಿ ಹೇಳಲಿಲ್ಲ ಎಂದು ಉಲ್ಟಾ ಹೊಡೆದಿದ್ದರು. ಈಗ ಸತೀಶ್ಜಾರಕಿಹೋಲಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುಮಾರು ೧೫ ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮುಂಬರುವ ವಿಧಾನ ಮಂಡಲದ ಬಜೆಟ್ ಅಧಿವೇಶನಕ್ಕೂ ಮುನ್ನವೇ ಸಚಿವ ಸತೀಶ್ಜಾರಕಿಹೊಳಿ ಆಪ್ತ ವಲಯದ ಮುಸಾರು ೧೫ ಶಾಸಕರು ದುಬೈ ಹಾಗೂ ಸಿಂಗಾಪುರ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಈ ಶಾಸಕರ ಜತೆ ಸತೀಶ್ ಜಾರಕಿಹೊಳಿ ತೆರಳುತ್ತಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಸಹ ಸತೀಶ್ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರ ಗುಂಪು ವಿದೇಶ ಪ್ರವಾಸಕ್ಕೆ ಮುಂದಾಗಿತ್ತು. ಆಗ ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿತ್ತು. ಈಗ ಕೆಪಿಸಿಸಿ ಅಧ್ಯಕ್ಷರು, ಸಿಎಂ ಬದಲಾವಣೆ, ಡಿನ್ನರ್ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿರುವಾಗಲೇ ಕೆಲ ಶಾಸಕರ ವಿದೇಶ ಪ್ರವಾಸ ಕುತೂಹಲ ಮೂಡಿಸಿದೆ. ಬೆಳಗಾವಿಯ ಶಾಸಕರಾದ ಆಸೀಫ್ಸೇಠ್, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಇವರುಗಳು ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವುದರ ಬಗ್ಗೆ ಪ್ರಸ್ತಾಪಿಸಿದ್ದು, ಸತೀಶ್ ಜಾರಕಿಹೊಳಿ ಪ್ರವಾಸಕ್ಕೆ ಬರುತ್ತಿಲ್ಲ. ಶಾಸಕರುಗಳಷ್ಟೇ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ಈ ವಿದೇಶ ಪ್ರವಾಸ ಕಾಂಗ್ರೆಸ್ನಲ್ಲಿ ಮತ್ತೊಂದು ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.
ಪ್ರತಿಕ್ರಿಯೆಗೆ ಡಿಕೆಶಿ ನಕಾರ: ಕಾಂಗ್ರೆಸ್ನ ಕೆಲ ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿರಾಕರಿಸಿದ್ದು, ಶಾಸಕರ ವಿದೇಶ ಪ್ರವಾಸ ನನಗೆ ಗೊತ್ತಿಲ್ಲ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಏನಿದ್ದರೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಅವರನ್ನು ಕೇಳಿ,ನನ್ನದೇನಿದ್ದರೂ ಪಕ್ಷ ಸಂಘಟನೆ ಎಂದು ಹೇಳಿದರು.