ಬೆಂಗಳೂರು: ಡ್ರಾಮ ಮಾಸ್ಟರ್ ಅಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿರುವ ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶಿವಕುಮಾರ್ ಅವರೇ ಡ್ರಾಮಾ ಕಿಂಗ್ ಎಂದು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಡಿ.ಕೆ. ಶಿವಕುಮಾರ್ ಅವರ ಇನ್ಸಿಷಿಯಲ್ ಉಲ್ಲೇಖಿಸಿ ಡಿ ಎಂದರೆ ಡ್ರಾಮಾ, ಕೆ ಎಂದರೆ ಕಿಂಗ್ ಶಿವಕುಮಾರ್ ಎಂದು ವ್ಯಂಗ್ಯವಾಡಿ, ತಮ್ಮನ್ನು ಡ್ರಾಮಾ ಮಾಸ್ಟರ್ ಎಂದು ಕರೆದ ಡಿ.ಕೆ. ಶಿವಕುಮಾರ್ ರವರನ್ನು ಡ್ರಾಮಾ ಕಿಂಗ್ ಎಂದು ಕುಟುಕಿದ್ದಾರೆ.
ಡ್ರಾಮಾ ಕಿಂಗ್ ಶಿವಕುಮಾರ್ ಉಪಮುಖ್ಯಮಂತ್ರಿಗಳು ಎಂಬುದನ್ನು ನೀವು ಮರೆತುಬಿಟ್ಟಿದ್ದೀರಿ. ನ್ಯಾಯಾಧೀಶರ ಸ್ಥಾನದಲ್ಲಿದ್ದು, ಸತ್ಯಾಸತ್ಯತೆಯನ್ನು ವಿಚಾರ ಮಾಡಬೇಕಾದವರು ದುರಾದೃಷ್ಟವಶಾತ್ ಯಾರದೋ ವಕೀಲರಾಗಿ ಬಿಟ್ಟಿದ್ದೀರಿ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.ಯಾರು ಮೋಹ, ಮದ, ಮಾತ್ಸರ್ಯಗಳಿಂದ ಹೊರಗಿದ್ದು ನೋಡುತ್ತಾರೋ ಅವರಿಗೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮೋಹ ಪರವಶರಾದವರಿಗೆ ಅಧಿಕಾರದ ಮದದಿಂದ ಕೂಡಿದವರಿಗೆ ಮಾತ್ಸರ್ಯದ ರಾಜಕಾರಣ ಮಾಡುವವರಿಗೆ ಸತ್ಯ ಅರ್ಥ ಆಗಲಿಕ್ಕೆ ಸಾಧ್ಯವಿಲ್ಲ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಪರಿಷತ್‌ನ ಸಭಾಪತಿಗಳು ರೂಲಿಂಗ್ ನೀಡಿದ ನಂತರ ನೀವುಗಳು ನಿಮ್ಮ ಪಕ್ಷದ ಶಾಸಕರು ನಡೆದುಕೊಂಡ ರೀತಿ ಸರಿ ಇದೆಯೇ. ಗುಂಡಾಗಳನ್ನು ಜತೆಗಾರರನ್ನು ಎತ್ತಿಕಟ್ಟಿ ಶಾಸಕಾಂಗದ ದೇಗುಲವಾದ ಸುವರ್ಣಸೌಧದಲ್ಲಿ ನನ್ನ ಮೇಲೆ ನಡೆದ ಹಲ್ಲೆಯನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ. ಇದನ್ನು ಗಾಂಧಿಗಿರಿ ಎನ್ನಬೇಕೇ ಅಥವಾ ಗುಂಡಾಗಿರಿ ಎನ್ನಬೇಕೇ ಎಂದು ಪ್ರಶ್ನಿಸಿದ್ದಾರೆ.ನಿಮ್ಮ ಸರ್ಕಾರ ಪೊಲೀಸರು ಮಾಡಿದ ಅಸಂವಿಧಾನಿಕ ಅನೈತಿಕ ಬಂಧನವನ್ನು ಏನೆಂದು ಭಾವಿಸುತ್ತೀರಿ. ಪೊಲೀಸರು ರಾತ್ರಿ ಇಡಿ ನಡೆಸಿದ ದೌರ್ಜನ್ಯದ ಹಿಂದೆ ಯಾರ ಕುಮ್ಮಕ್ಕಿದೆ. ಯಾರ ಕಾಣದ ಕೈಗಳ ಪಾತ್ರವಿದೆ. ಇದನ್ನು ಮೋಹ, ಮದ, ಮಾತ್ಸರ್ಯಗಳಿಂದ ಹೊರಗಿದ್ದು ನೋಡಿ ಸತ್ಯದ ಅರಿವು ನಿಮಗಾಗುತ್ತದೆ. ಕಪಟ ನಾಟಕ ಯಾರು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಸಿ.ಟಿ. ರವಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಎದ್ಭಾವಂ ತದ್ಬವತಿ ಎಂಬ ಮಾತಿನಂತೆ ಯಾರು ಹೇಗಿದ್ದಾರೋ ಹಾಗೆ ಇತರರೂ ಎಂದು ಭಾವಿಸುತ್ತಾರೆ. ಉಪಮುಖ್ಯಮಂತ್ರಿ ಅವರೇ ಕಾಂಗ್ರೆಸ್‌ನ ಕೆಲ ನಾಯಕರು ನಮ್ಮ ಡ್ರಾಮಾ ಕಿಂಗ್ ಶಿವಕುಮಾರ್ ಇಷ್ಟೆಲ್ಲಾ ಡ್ರಾಮ ಮಾಡುತ್ತಿರುವುದು ಮುಖ್ಯಮಂತ್ರಿ ಗಾದಿಯನ್ನು ಏರುವ ಹಪಹಪಿಗಾಗಿ ಎಂದು ರಾಜಕೀಯದ ಮೊಗಸಾಲೆಯಲ್ಲಿ ಹೇಳಿಕೊಂಡು ಸುತ್ತುತ್ತಿರುವುದು ನಿಜವೇ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಜನ ನನ್ನನ್ನು ಹೋರಾಟಗಾರ, ಕೆಲಸಗಾರ ಎಂದು ಗುರುತಿಸಿದ್ದಾರೆ. ನನ್ನನ್ನು ಪಕ್ಷ ನಿಷ್ಠಾಂತ, ಸಿದ್ಧಾಂತ ಬದ್ಧ ಎಂದು ಗುರುತಿಸುತ್ತಾರೆ ಎಂದು ಸಿಟಿ ರವಿ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.