ಬೆಂಗಳೂರು: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಕೆಐಎಡಿಬಿಯಿಂದ ‘ಜೀನ್ಸ್ ಪಾರ್ಕ್’ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಅಲ್ಲಿನ ಜೀನ್ಸ್ ಉಡುಪು ತಯಾರಿಕೆ ಉದ್ಯಮ ನೆಲ ಕಚ್ಚಿದ್ದು, ಹೂಡಿಕೆದಾರರು ಮತ್ತು ರಫ್ತುದಾರರ ಗಮನ ಸೆಳೆಯಲು ರಾಜ್ಯದಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಗೆ ಮುಂದಾಗಿದ್ದೇವೆ. ಕೇಂದ್ರ ಜವಳಿ ಇಲಾಖೆಯಲ್ಲಿ ಜೀನ್ಸ್ ತಯಾರಿಕಾ ಘಟಕಗಳಿ ಗೆ ರಿಯಾಯಿತಿ ವ್ಯವಸ್ಥೆ ಇದ್ದರೆ ಆ ಸೌಲಭ್ಯವನ್ನೂ ಕೊಡಿಸಲಾಗುವುದು, ಈ ಸಂಬಂಧ ಜವಳಿ ಸಚಿವರ ಜತೆ ಸಭೆ ನಡೆಸಲಾಗುವುದು ಎಂದಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಾಂಗ್ಲಾದಲ್ಲಿನ ವಿದೇಶಿ ಹೂಡಿಕೆದಾರರ ಗಮನ ಬಳ್ಳಾರಿಯ ಜೀನ್ಸ್ ತಯಾರಿಕೆ ಉದ್ಯಮದ ಮೇಲೆ ಹರಿದಿದೆ, ಈ ಸದವಕಾಶ ಪರಿವರ್ತಿಸಿಕೊಂಡು ಹೂಡಿಕೆ ಆಕರ್ಷಿಸಲಿದ್ದೇವೆ. ಜೀನ್ಸ್ ಪಾರ್ಕ್ ಸ್ಥಾಪನೆಗೆ ಬಳ್ಳಾರಿಯ ಸಂಜೀವರಾಯನ ಕೋಟೆಯಲ್ಲಿ 154 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ, ಇಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜೀನ್ಸ್ ಉಡುಪು ತಯಾರಿಕಾ ಕಂಪನಿಗಳು ಆರಂಭವಾಗುವಂತೆ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಪ್ರಸ್ತುತ 500ಕ್ಕೂ ಹೆಚ್ಚು ಜೀನ್ಸ್ ಉಡುಪು ತಯಾರಿಕಾ ಘಟಕಗಳಿವೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿಸಿವೆ, ಇದಕ್ಕೆ ವ್ಯವಸ್ಥಿತ ರೂಪ ನೀಡಿ, ರಫ್ತು ಕೇಂದ್ರಿತವಾಗಿಯೂ ಬೆಳೆಸುವುದು ಕೈಗಾರಿಕಾ ಇಲಾಖೆ ಚಿಂತನೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‍ನಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪಿಸುವ ಘೋಷಣೆ ಮಾಡಿದ್ದು, ಅಸಂಘಟಿತ ಜೀನ್ಸ್ ಉದ್ಯಮಕ್ಕೆ ಸಂಘಟಿತ ರೂಪ ನೀಡಿ, ಅಂತಾರಾಷ್ಟ್ರೀಯ ದರ್ಜೆಗೆ ಏರಿಸುವುದು ಇದರ ಉದ್ದೇಶ. ಬಳ್ಳಾರಿ ಜೀನ್ಸ್ ಪಾರ್ಕ್ ಸ್ಥಾಪನೆಯಿಂದ ಪ್ರಾದೇಶಿಕ ಆರ್ಥಿಕತೆಗೆ ಚೈತನ್ಯ ಬರಲಿದೆ, ಅಲ್ಲದೆ, ನಾವೀನ್ಯತೆ, ಉಡುಪು ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಆದ್ಯತೆ ಸಿಗಲಿದೆ.
ಜೀನ್ಸ್ ಉಡುಪು ಯುವಜನಾಂಗಕ್ಕೆ ಅಚ್ಚುಮೆಚ್ಚಿನದಾಗಿದ್ದು, ರಾಜ್ಯದ ಉದ್ಯಮಸ್ನೇಹಿ ಕೈಗಾರಿಕಾ ನೀತಿಯಡಿ ಬಳ್ಳಾರಿ ಸುತ್ತಮುತ್ತಲಿನ ಜೀನ್ಸ್ ಉಡುಪು ತಯಾರಿಕಾ ಘಟಕಗಳಿಗೆ ಹೆಚ್ಚಿನ ನೆರವು ನೀಡುವ ಮೂಲಕ ಜೀನ್ಸ್ ಮಾರುಕಟ್ಟೆ ಗುರಿಯಾಗಿಟ್ಟುಕೊಂಡು ಮುಂದುವರೆಯಲಾಗುವುದು ಎಂದಿದ್ದಾರೆ.