ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಪೋಲಿಸರು ಬಂಧಿಸಿ, ರಾತ್ರಿ ಇಡೀ ಸುತ್ತಾಡಿಸಿ ಹಿಂಸೆ ನೀಡಿರುವ ಘಟನೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಮೂಲಕ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮತ್ತೆ ಶೀಥಲ ಸಮರ ಆರಂಭಗೊಂಡಂತಾಗಿದೆ.
ರವಿ ಅವರ ದೂರಿನ ಆಧಾರದ ಮೇಲೆ ರಾಜ್ಯಪಾಲರು ಡಿಸೆಂಬರ್ 31ರಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು, ನೀವೇ ಖುದ್ದಾಗಿ ಮಧ್ಯೆ ಪ್ರವೇಶಿಸಿ, ಪೋಲಿಸ್ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ್ದಾರೆ. ಬಂಧನದ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಬದಲು ಇಡೀ ರಾತ್ರಿ 400 ಕಿಲೋ ಮೀಟರ್ ಸುತ್ತಾಡಿಸುವ ಔಚಿತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಇವರನ್ನು ಸುತ್ತಾಡಿಸಿದ್ದಲ್ಲದೆ, ಕಬ್ಬಿನ ಗದ್ದೆ, ಬಯಲು ಪ್ರದೇಶ ಹಾಗೂ ಕ್ರಶರ್ ಪ್ರದೇಶಗಳಿಗೆ ಕೊಂಡೊಯ್ದಿದ್ದು ಏಕೆ. ಬಂಧನ ಸಮಯದಲ್ಲಿ ಅವರ ತಲೆಗೆ ಪೆಟ್ಟಾಗಿ ರಕ್ತ ಸುರಿದಿದೆ, ಇದಕ್ಕೆ ಕಾರಣರಾರು, ಬೆಳಗಾವಿ ಪೋಲಿಸ್ ಆಯುಕ್ತ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
ಘಟನೆ ನಡೆದು ಎರಡು-ಮೂರು ವಾರ ಕಳೆದರೂ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲ ಏಕೆ?. ನೀವೇ ಮಧ್ಯೆ ಪ್ರವೇಶಿಸಿ ರವಿ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು, ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಮೂಲಕ ಅವರಿಗೆ ಎಚ್ಚರಿಕೆ ಸಂದೇಶ ನೀಡಬೇಕು ಎಂದಿದ್ದಾರೆ. ಘಟನೆ ನಂತರ ರವಿ ಅವರು ನನ್ನನ್ನು ಭೇಟಿ ಮಾಡಿ, ಎಲ್ಲಾ ವಿವರವನ್ನು ತಿಳಿಸಿರುವುದಲ್ಲದೆ, ದೂರು ನೀಡಿದ್ದಾರೆ. ನಾನು ಅದನ್ನು ಪತ್ರದೊಂದಿಗೆ ಲಗತ್ತಿಸಿ ಸರ್ಕಾರಕ್ಕೆ ತಲುಪಿಸಿದ್ದೇನೆ, ನೀವೇ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.
ರೀ-ಡೂ ಪ್ರಕರಣ ಸೇರಿದಂತೆ ರಾಜ್ಯಪಾಲರು ಸರ್ಕಾರಕ್ಕೆ ಬರೆದ 26 ಪತ್ರಗಳಿಗೆ ಇದುವರೆಗೂ ಸರ್ಕಾರ ಉತ್ತರ ನೀಡಿಲ್ಲ. ರಾಜಭವನದಿಂದ ಪದೇ ಪದೇ ಪತ್ರ ಬರೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಜ್ಯ ಸಚಿವ ಸಂಪುಟ, ಇನ್ನು ಮುಂದೆ ಯಾವುದೇ ಪತ್ರ ಬಂದರೂ, ಅದಕ್ಕೆ ಅಧಿಕಾರಿಗಳು ಉತ್ತರ ನೀಡಬಾರದು ಎಂದು ನಿರ್ಣಯ ಕೈಗೊಂಡಿತ್ತು. ರಾಜ್ಯಪಾಲರ ಪತ್ರಗಳನ್ನು ಸಂಪುಟ ಸಭೆ ಮುಂದೆ ತಂದು ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟಾದೇಶ ಮಾಡಿತ್ತು.