ಹರಿಶ್ಚಂದ್ರ ಬಳಿಕ ಕುಮಾರಸ್ವಾಮಿಯವರೇ ಸತ್ಯಹರಿಶ್ಚಂದ್ರ: ಸಚಿವ ಎನ್ ಚಲುವರಾಯಸ್ವಾಮಿ ತಿರುಗೇಟು

Kannada Nadu
ಹರಿಶ್ಚಂದ್ರ ಬಳಿಕ ಕುಮಾರಸ್ವಾಮಿಯವರೇ ಸತ್ಯಹರಿಶ್ಚಂದ್ರ: ಸಚಿವ ಎನ್ ಚಲುವರಾಯಸ್ವಾಮಿ ತಿರುಗೇಟು

ಬೆಂಗಳೂರು: ಹರಿಶ್ಚಂದ್ರ ಹೋದ ಬಳಿಕ ಕುಮಾರಸ್ವಾಮಿಯವರೇ ಸತ್ಯಹರಿಶ್ಚಂದ್ರ. ಲಂಚ ಮುಟ್ಟದೆ, ಭ್ರಷ್ಟಾಚಾರ ಮಾಡದೆ ಇರುವವರು ಇವರೊಬ್ಬರೆ ಅನ್ಸುತ್ತೆ ಎಂದು ಕುಮಾರಸ್ವಾಮಿ ಅವರ 60% ಲಂಚ ಆರೋಪಕ್ಕೆ ಸಚಿವ ಎನ್ ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.

ಕೆರಗೋಡು ಪೊಲೀಸ್ ಠಾಣಾ ಆವರಣದಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯನ್ನು ಸಚಿವ ಎನ್. ಚಲುವರಾಯಸ್ವಾಮಿ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಸಚಿವರಿಗೆ ಶಾಸಕ ಗಣಿಗ ರವಿಕುಮಾರ್, ಐಜಿಪಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸಾಥ್ ನೀಡಿದರು. ಇದೇ ವೇಳೆ ಗಿಡ ನೆಟ್ಟು ನೀರೆರೆದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಚಪಲಕ್ಕೆ, ಚಟಕ್ಕೆ ಮಾತನಾಡ್ತಾರೆ. ಕೇಂದ್ರ ಸಚಿವರು ಮಾತನಾಡಿದ್ರೆ ಉತ್ತರ ನೀಡಲು ನಾವು ತಡಕಾಡಬೇಕು. ಆತರ ಅವರು ಮಾತನಾಡಿದಾಗ ನಮಗೂ ಖುಷಿಯಾಗುತ್ತದೆ. ಆದರೆ ಇವರು ಬಾಯಿ ಚಪಲಕ್ಕೆ ಮಾತನಾಡ್ತಾರೆ‌. ಅವರಿಗೆ ಉತ್ತರ ಕೊಡಬೇಕು ಎನಿಸಲ್ಲ ಎಂದು ಟೀಕಿಸಿದರು.

ಜನರ ತೀರ್ಮಾನ ಅಂತಿಮ ಅನ್ನುವುದನ್ನ ಹೆಚ್ಡಿಕೆ ನಂಬ್ತಾರಾ? ಕಳೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲಾ ಸರ್ವೆಗಳನ್ನು ಮೀರಿ ಜನರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಈ ಫಲಿತಾಂಶ ಸರ್ಕಾರದ ಮೇಲಿನ ಜನರಿಗಿರುವ ವಿಶ್ವಾಸ ತೋರಿಸುತ್ತದೆ ಎಂದು ಹೇಳಿದರು.

ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು. ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ ಎಂದು ಮಾತನಾಡ್ತಾರೆ. ಕುಮಾರಸ್ವಾಮಿಯಿಂದ ಈ ರೀತಿಯ ಮಾತು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಸಂಸದನಾಗಿದ್ದಾಗ ಅಂಬರೀಶ್ ಬಳಸುತ್ತಿದ್ದ ಕಾರು ಕೊಟ್ಟಿದ್ರು‌. ಹೊಸ ಕಾರು ಬರಲು ವರ್ಷ ಬೇಕಾಯ್ತು. ಸಚಿವನಾದ ಮೇಲೂ ಹಳೆಯ ಕಾರನ್ನೇ ಬಳಸುತ್ತಿದ್ದೆ. ಕಾರು ಕೊಡಲು ಸರ್ಕಾರ ಕೆಲವು ನಿಯಮಗಳನ್ನು ಅನುಸರಿಸಬೇಕು. ಕುಮಾರಸ್ವಾಮಿಯ ಇಂತಹ ಮಾತುಗಳಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಬಸ್ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, 15 ವರ್ಷ ಆಗಿದೆ ಬಸ್ ದರ ಪರಿಷ್ಕರಣೆ ಆಗಿ. ಪೆಟ್ರೋಲ್, ಡಿಸೇಲ್ ದರ ಹೆಚ್ಚಾಗಿದೆ. ಬಸ್ ದರ ಜಾಸ್ತಿ ಮಾಡದಿದ್ರೆ ನಿಗಮ ನಡೆಸುವುದು ಹೇಗೆ?. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಬಸ್ ದರ ಕಡಿಮೆ ಇದೆ.‌ ಗ್ಯಾರಂಟಿಗೂ ಬಸ್ ದರ ಹೆಚ್ಚಳಕ್ಕೂ ಸಂಬಂಧ ಇಲ್ಲ. ಗ್ಯಾರಂಟಿ ನಿಲ್ಲಿಸಿ, ನಡೆಸಿ ಎನ್ನಲು ಇವರು ಯಾರು? ವಿರೋಧಪಕ್ಷದವರನ್ನ ಕೇಳಿ ಗ್ಯಾರಂಟಿ ನಿಲ್ಲಿಸಲು ಆಗಲ್ಲ. ಜನಸಾಮಾನ್ಯರು ಗ್ಯಾರಂಟಿ ಬೇಡ, ಅಭಿವೃದ್ಧಿ ಬೇಕು ಎಂದಾಗ ಸರ್ಕಾರ ಯೋಚಿಸಲಿದೆ ಎಂದು ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";