ಬಿಜೆಪಿ ಪ್ರಿಯಾಂಕ್ ಖರ್ಗೆ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ : ಕೆ.ಶಿವಕುಮಾರ್

Kannada Nadu
ಬಿಜೆಪಿ  ಪ್ರಿಯಾಂಕ್ ಖರ್ಗೆ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ : ಕೆ.ಶಿವಕುಮಾರ್

ಬೆಂಗಳೂರು: ವಿಧಾನಸಭೆ ಉಪಚುನಾವಣೆ ಫಲಿತಾಂಶದಿಂದ ಕಂಗೆಟ್ಟು ಹತಾಶರಾಗಿರುವ ಬಿಜೆಪಿ  ಜನಪರ ನಾಯಕ ಪ್ರಿಯಾಂಕ್ ಖರ್ಗೆ ಅವರ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ  ನೀಡಿರುವ ಅವರು, ರಾಜ್ಯದಲ್ಲಷ್ಟೇ ಅಲ್ಲ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ದುಃಸ್ವಪ್ನವಾಗಿ ಬಿಜೆಪಿಯನ್ನು ಕಾಡುತ್ತಿದ್ದಾರೆ. ಪಿಎಸ್‍ಐ ಹಗರಣ ಬಿಟ್‍ಕಾಯಿನ್ ಹಗರಣ, ೪೦% ಕಮೀಷನ್, ಕೋವಿಡ್ ಹಗರಣ ಸೇರಿದಂತೆ ವಿವಿಧ ಹಗರಣಗಳನ್ನು ಬಯಲಿಗೆಳೆದು ಅವುಗಳನ್ನು ತನಿಖೆಯಾಗುವಂತೆ ಮಾಡಿ ಬಿಜೆಪಿಯ ಬಂಡವಾಳವನ್ನು ಬಯಲು ಮಾಡಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿರುವ ಬಿಜೆಪಿ ನಾಯಕರು ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ವಿರುದ್ಧ ನೀಡಿದ ಹೇಳಿಕೆಯಿಂದ ದೇಶಾದ್ಯಂತ ದಲಿತರು ಆಕ್ರೋಶಗೊಂಡಿದ್ದಾರೆ. ರಾಜ್ಯದೆಲ್ಲೆಡೆ ದಲಿತರ ಪ್ರತಿಭಟನೆ ತೀವ್ರಗೊಂಡಿದೆ. ಕೋಲಾರ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ ವಿವಿಧೆಡೆ  ಬಂದ್ ಆಚರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಭಟನೆಯ ದಿಕ್ಕು ತಪ್ಪಿಸುವ ಹಿನ್ನಲೆಯಲ್ಲಿ ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಮುನ್ನಲೆಗೆ ತಂದು ಅನಗತ್ಯವಾಗಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ  ಮಾಡುತ್ತಿದ್ದಾರೆ.  ಈ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಚಿನ್ ಆತ್ಮಹತ್ಯೆ ಕಾರಣ ತಿಳಿಯಲು  ಸರ್ಕಾರವನ್ನು   ಸಿಐಡಿಗೆ ವಹಿಸಿದೆ. ಮುಖ್ಯಮಂತ್ರಿಗಳು ಈ  ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರ ಇಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೂ ಕೂಡ ಬಿಜೆಪಿಯವರು ಹಾದಿಬೀದಿಯಲ್ಲಿ ಬೊಬ್ಬೆಯೊಡೆಯುತ್ತಾ ಸುಳ್ಳನ್ನು ಸತ್ಯ ಮಾಡುವ ಪ್ರಯತ್ನ  ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ  ಅನಗತ್ಯ  ಆರೋಪಗಳನ್ನು ಮಾಡುತ್ತಾ ಬಂದಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೆ.ಎಸ್.ಈಶ್ವರಪ್ಪ ಪ್ರಕರಣದಲ್ಲಿ ಸ್ಪಷ್ಟ ದಾಖಲೆಗಳಿದ್ದವು. ಆದರೆ ಸಚಿನ್  ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಮೇಲೆ ಆರೋಪಿಸುವಂತಹ ಯಾವುದೇ ಸ್ಪಷ್ಟ ದಾಖಲೆಗಳಿಲ್ಲ. ಆದರೂ ಬಿಜೆಪಿಯವರು ನಿರಂತರ ಆರೋಪ, ಪ್ರತಿಭಟನೆ ಮಾಡುತ್ತಾ ಅವರ ವರ್ಚಸ್ಸು  ಮತ್ತು ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಮೂಲಕ ತಮ್ಮ  ಹುಳುಕುಗಳನ್ನು ಮುಚ್ಚಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ಅವರು ಹೇಳಿದಾರೆ. ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿವೆ. ಹತ್ತಾರು ಬಣಗಳಾಗಿವೆ. ಪ್ರತಿಪಕ್ಷದ ನಾಯಕರಾಗಿರುವ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಆಂತರಿಕ ಕಿತ್ತಾಟ ತೀವ್ರಗೊಂಡಿದ್ದು, ಅದನ್ನು ಮರೆಮಾಚಲು ಪ್ರಿಯಾಂಕ್ ಖರ್ಗೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದನ್ನು ಪಕ್ಷ ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸಚಿನ್ ಆತ್ಮಹತ್ಯೆ  ಪ್ರಕರಣದಲ್ಲಿ ಪ್ರಿಯಾಂಕ ರ‍್ಗೆ ಅವರ ಯಾವುದೇ ಪಾತ್ರ ಇಲ್ಲದಿದ್ದರೂ ಬಿಜೆಪಿಯ  ಸ್ವಾರ್ಥ ಸಾಧನೆಗೆ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದನ್ನು ಅವರು ಕೈ ಬಿಡಬೇಕೆಂದು  ಆಗ್ರಹಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";