ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣ ದರ ಹೆಚ್ಚಳ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಗಂಡಸರ ಜೇಬಿಗೆ ಕತ್ತರಿ ಬಿಳಲಿದೆ. ನಾಲ್ಕು ವರ್ಷಗಳ ನಂತರ ದರ ಹೆಚ್ಚಳ ಮಾಡಲು ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೇ ಸಾರಿಗೆ ಸಂಸ್ಥೆ ನಿಗಮಗಳು ಶೇಕಡ 15ರಷ್ಟು ಪ್ರಯಾಣ ದರ ಹೆಚ್ಚಿಸಿ ಜಾರಿ ಮಾಡಿವೆ.
ಹೆಚ್ಚಳದಿಂದ ವಾರ್ಷಿಕ 1,800 ಕೋಟಿ ರೂ. ಸಂಗ್ರಹ ಗುರಿ ಇಟ್ಟುಕೊಂಡಿದ್ದು, ಮಹಿಳೆಯರಿಗೆ ಸಾಮಾನ್ಯ ಬಸ್ಗಳಲ್ಲಿ ಎಂದಿನಂತೆ ಉಚಿತ ಪ್ರಯಾಣ ಸೇವೆ ಮುಂದುವರೆಯಲಿದೆ. ಮಹಿಳೆಯರಿಗೆ ಉಚಿತ ಕೊಟ್ಟು ಅದರ ಹೊರೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆಂದು ಪುರುಷರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸರ್ಕಾರ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ದೂರದ ಊರುಗಳಿಗೆ ಸಂಚರಿಸುವ ಐμÁರಾಮಿ ಮತ್ತು ವೇಗದೂತ ಬಸ್ಗಳ ದರ ಹೆಚ್ಚಳ ಶೇಕಡ 15ಕ್ಕಿಂತ ಹೆಚ್ಚಾಗಿದೆ.
ಈ ದರಗಳು ಖಾಸಗಿ ಬಸ್ ದರಗಳಿಗೆ ಹೋಲಿಸಿದರೆ, 300 ರೂ.ನಿಂದ 500 ರೂ.ಗಳವರೆಗೆ ಹೆಚ್ಚಿದೆ. ಮುಂದಿನ ಆರು ತಿಂಗಳಲ್ಲಿ 2,000 ಹೊಸ ಬಸ್ಗಳು ನಿಗಮಗಳಿಗೆ ಸೇರ್ಪಡೆಗೊಳ್ಳುತ್ತಿದ್ದು, ಅವುಗಳಲ್ಲಿ ಹೆಚ್ಚಿನವು ಐμÁರಾಮಿ ಮತ್ತು ಸ್ಲೀಪರ್ ಬಸ್ಗಳಾಗಿವೆ. ಐμÁರಾಮಿ ಮತ್ತು ವೇಗದೂತ ಬಸ್ಗಳಿಂದ ನಿಗಮಕ್ಕೆ ಹೆಚ್ಚು ಆದಾಯ ಬರುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಸೇವೆ ಮತ್ತಷ್ಟು ಹೆಚ್ಚಿಸಲು ಹೊಸ ಬಸ್ಗಳನ್ನು ಖರೀದಿಸಲಾಗುತ್ತಿದೆ.
ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿನ ಸಾರಿಗೆ ದರ ಪ್ರತಿ ಕಿಲೋ ಮೀಟರ್ಗೆ ಹೋಲಿಸಿದರೆ ಕರ್ನಾಟಕದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ತೀರಾ ಕಡಿಮೆಯಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇಕಡ 33ರಷ್ಟು ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡ 42ರಷ್ಟು ಪರಿಷ್ಕರಿಸುವಂತೆ ಸರ್ಕಾರವನ್ನು ಕೋರಲಾಗಿತ್ತಾದರೂ, ಕೂಲಂಕಷ ಚರ್ಚೆ ನಂತರ ಸರ್ಕಾರ ಒಟ್ಟಾರೆಯಾಗಿ ಎಲ್ಲಾ ನಿಗಮಗಳು ಶೇಕಡ 15ರಷ್ಟು ದರ ಏರಿಕೆ ಮಾಡಲು ಅನುಮೋದನೆ ನೀಡಲಾಯಿತು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಮುಖ್ಯಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ ವರದಿಯ ಶಿಫಾರಸಿನ ಆಧಾರದ ಮೇಲೆ ದರ ಹೆಚ್ಚಳ ಜೊತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೂ ಕೆಲವು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಕಳೆದ ಗುರುವಾರ ಸೇರಿದ್ದ ಸಚಿವ ಸಂಪುಟ ಅನುಮೋದನೆ ನೀಡಿದೆ. ನಿಗಮಗಳನ್ನು ಉಳಿಸುವ ಮತ್ತು ಕಾರ್ಮಿಕರ ವೇತನ ಮತ್ತು ಇತರೆ ಭತ್ಯೆ ಭರಿಸಲು ಹಣಕಾಸು ಸಂಸ್ಥೆಗಳಿಂದ 2,000 ಕೋಟಿ ರೂ. ಸಾಲ ಪಡೆಯಲೂ ಅನುಮತಿ ನೀಡಲಾಗಿದೆ.
ಸಾರಿಗೆ ನೌಕರರು ತಮ್ಮ ವೇತನ ಹೆಚ್ಚಳ ಮತ್ತು ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಪ್ರಯಾಣ ದರ ಏರಿಕೆ ನಿರ್ಧಾರ ಕೈಗೊಂಡಿದೆ.
ಬಸ್ ಪ್ರಯಾಣ ದರ ಹೆಚ್ಚಳದಿಂದ ಬೆಂಗಳೂರಿನಿಂದ ರಾಜ್ಯದ ಪ್ರಮುಖ ಊರುಗಳಿಗೆ ಸಂಚರಿಸುವ ಬಸ್ಗಳ ಟಿಕೆಟ್ ಎμÁ್ಟಗಲಿದೆ ಎಂಬ ವಿವರ ಇಲ್ಲಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಸದ್ಯ 501 ರೂ. ಇದ್ದು, ಹೆಚ್ಚಳದ ನಂತರ 576 ರೂ. ಆಗಲಿದೆ, ಬೆಂಗಳೂರಿನಿಂದ ಬೆಳಗಾವಿಗೆ ಸದ್ಯ 631 ರೂ. ಇದ್ದು, ಏರಿಕೆ ಬಳಿಕ 725 ರೂ. ಆಗಲಿದೆ, ಹಾಗೆಯೇ, ಕಲಬುರಗಿಗೆ 706 ರೂ.ನಿಂದ 811 ರೂ., ಮೈಸೂರಿಗೆ 185 ರೂ.ನಿಂದ 213 ರೂ. ಮಡಿಕೇರಿಗೆ 358 ರೂ.ನಿಂದ 411 ರೂ., ಚಿಕ್ಕಮಗಳೂರಿಗೆ 285 ರೂ.ನಿಂದ 328 ರೂ.ಬೆಂಗಳೂರಿನಿಂದ ಹಾಸನಕ್ಕೆ ಸದ್ಯದ ಪ್ರಯಾಣ ದರ 246 ರೂ. ಇದ್ದು, ಏರಿಕೆ ನಂತರ 282 ರೂ. ಆಗಲಿದೆ, ಹಾಗೆಯೇ, ಮಂಗಳೂರಿಗೆ 424 ರೂ.ನಿಂದ 477 ರೂ., ರಾಯಚೂರಿಗೆ 556 ರೂ.ನಿಂದ 639 ರೂ., ಬಳ್ಳಾರಿಗೆ 326 ರೂ.ನಿಂದ 432 ರೂ. ಆಗಲಿದೆ.
ಬಿಎಂಟಿಸಿ ಬಸ್ ದರ
ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಸಹಾ ತನ್ನ ಬಸ್ಗಳ ಪುರುಷ ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ ಮುಟ್ಟಿಸಿದ್ದು, ರಾಜಧಾನಿಯ ಪ್ರಮುಖ ಬಸ್ ನಿಲ್ದಾಣವಾದ ಕೆಂಪೇಗೌಡ ಬಸ್ ನಿಲ್ದಾಣದಿಂದ ಜಯನಗರಕ್ಕೆ ಸದ್ಯದ ದರ 20 ರೂ. ಇದ್ದು, ಏರಿಕೆ ನಂತರ 23 ರೂ. ಆಗಲಿದೆ.
ಅಂತೆಯೇ, ಕೆಂಪೇಗೌಡ ಬಸ್ ನಿಲ್ದಾಣದಿಂದ ಸರ್ಜಾಪುರಕ್ಕೆ 25 ರೂ.ನಿಂದ 28 ರೂ., ಅತ್ತಿಬೆಲೆಗೆ 25 ರೂ.ನಿಂದ 28 ರೂ., ಹಾರೋಹಳ್ಳಿಗೆ 25 ರೂ.ನಿಂದ 28.75 ರೂ., ಬನಶಂಕರಿಗೆ 20 ರೂ.ನಿಂದ 23 ರೂ., ವಿಮಾನ ನಿಲ್ದಾಣಕ್ಕೆ 235 ರೂ.ನಿಂದ 270 ರೂ. ಆಗಲಿದೆ.