ಸುಳ್ಳು ಪ್ರಚಾರದಲ್ಲಿ ಬಿಜೆಪಿಗರು ನಿಸ್ಸೀಮರು: ಸಚಿವ ಬಿ.ನಾಗೇಂದ್ರ

ಬೆಂಗಳೂರು : ಸುಳ್ಳು ಪ್ರಚಾರ ಮಾಡುವುದರಲ್ಲಿ, ಸಣ್ಣದನ್ನು ದೊಡ್ಡದಾಗಿ ಬಿಂಬಿಸುವುದರಲ್ಲಿ ಬಿಜೆಪಿಗರು ನಿಸ್ಸೀಮರು ಎಂದು ಯುವಜನ ಸೇವೆ ಕ್ರೀಡೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ‌.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಐದು ಗ್ಯಾರೇಂಟಿಗಳ ಬಗ್ಗೆ ‌ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಬಿಜೆಪಿಯವರಿಗೆ ಆರೋಪ ಮಾಡುವುದಕ್ಕೆ ಏನು ಇಲ್ಲ.  ಆದರೂ ನ್ಯೂನತೆಗಳನ್ನು ಹುಡುಕುತ್ತಿದ್ದು, ಇದು ವಿಪಕ್ಷದವರ ಚಾಳಿ ಎಂದರು.

 

 

ಕೇಂದ್ರ‌ ಸರ್ಕಾರದ ತೆರಿಗೆ ನೀತಿಯಿಂದ ಜನ ತತ್ತರಿಸಿದ್ದು, ದಿನ ಬಳಕೆಯ ಪಾದಾರ್ಥಗಳ ಬೆಲೆ ಗಗನಕ್ಕೆ ಏರಿದೆ. ಇಂತಹ ಸಂದರ್ಭದಲ್ಲಿ ಗೃಹ ಲಕ್ಷ್ಮೀ‌ ಯೋಜನೆಯಿಂದ ಉಪಯೋಗವಾಗಲಿದೆ. ಕಟ್ಟಕಡೆಯ ಮಹಿಳೆಗೂ ಸರ್ಕಾರದ ಯೋಜನೆ ತಲುಪಬೇಕು ಎಂಬ ನಿಟ್ಟಿನಲ್ಲಿ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ. ಐದು ವರ್ಷ ನಮ್ಮ ಸರ್ಕಾರ ಜನಪರ ಆಡಳಿತ ನೀಡಲಿದೆ ಎಂದು ಹೇಳಿದರು. 

ಆರೋಪಕ್ಕೆ ಕಿಮ್ಮತ್ತಿಲ್ಲ:

 ನಮ್ಮ ಸರ್ಕಾರದ ಯೋಜನೆಗಳ ಬಗ್ಗೆ ಎಲ್ಲ ರಾಜ್ಯಗಳು ನೋಡುತ್ತಿವೆ. ವಿಪಕ್ಷಗಳ‌ ಆರೋಪಕ್ಕೆ ಯಾವುದೇ ಕಿಮ್ಮತ್ತಿಲ್ಲ.

ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ಹಾಗೂ ನಮ್ಮ ಪ್ರಣಾಳಿಕೆಗೆ ಮೆಚ್ಚಿ ಜನ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ. ಜನ ತಕ್ಕ ಪಾಠ ಕಲಿಸಿದರೂ ಆ ಪಕ್ಷದ ನಾಯಕರು ಎಚ್ಚೆತ್ತಿಲ್ಲ. ಜನಪರ ಯೋಜನೆಗಳನ್ನು ವಿರೋಧಿಸಿದರೆ ಜನ ಮುಂದೆಯೂ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ನಾಗೇಂದ್ರ ಅವರು ತಿರುಗೇಟು ನೀಡಿದರು.

ಕ್ರೀಡಾ ಕಿಟ್‌ ವಿತರಣೆ

 

ಇದಕ್ಕೂ ಮುನ್ನ ನಡೆದ  ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ‘ಜನ ಜಾತಿ ಖೇಲ್ ‘ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ರಾಜ್ಯದ 100ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಸಚಿವ ಬಿ.ನಾಗೇಂದ್ರ ಅವರು ವಿವಿಧ ಕ್ರೀಡೆಗಳ ಕಿಟ್ ವಿತರಿಸಿ,‌ ಕ್ರೀಡಾಕೂಟದಲ್ಲಿ ಹೆಚ್ಚಿನ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

Facebook
Twitter
LinkedIn
WhatsApp
Print

Leave a Comment

Your email address will not be published. Required fields are marked *

Translate »
Scroll to Top