ಬೆಂಗಳೂರು: ಬಸ್ ಪ್ರಯಾಣ ದರವನ್ನು ಶೇ.15 ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ಜನ ಸಾಮಾನ್ಯರಿಗೆ ಹೊಸ ವರ್ಷದ ಮೊದಲ ಶಾಕ್ ನೀಡಿದೆ. ಜನವರಿ 5 ರಿಂದ ಜಾರಿಗೆ ಬರುವಂತೆ ಬಸ್ ಪ್ರಯಾಣಿಕ ದರಗಳು ಏರಿಕೆಯಾಗಲಿವೆ.ಶಕ್ತಿ ಯೋಜನೆಯಿಂದ ನಿಶ್ಯಕ್ತಿಗೊಂಡಿರುವ ಸಾರಿಗೆ ಇಲಾಖೆಯ ಶಕ್ತಿ ಹೆಚ್ಚಿಸಲು ಈ ಕ್ರಮ ಅನಿವಾರ್ಯವಾಗಿದ್ದು, ಪುರುಷರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ.
ಶಕ್ತಿ ಯೋಜನೆ ಒಂದು ಹಂತದವರೆಗೆ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಸೀಮಿತಗೊಳಿಸಬೇಕು ಎಂಬ ಚರ್ಚೆ ನಡೆದಿತ್ತು. ಕೇಂದ್ರ, ರಾಜ್ಯ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳು ಈ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ಯೋಜನೆ ಸೌಲಭ್ಯ ನೀಡುವುದು ಸೂಕ್ತವಲ್ಲ ಎಂಬ ಚರ್ಚೆಯೂ ನಡೆದಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಕ್ತಿ ಯೋಜನೆ ಪರಿಷ್ಕರಣೆ ವಿಷಯ ಪ್ರಸ್ತಾಪಿಸಿದಾಗ ಬಿಜೆಪಿ ನಾಯಕರು ಅವರ ವಿರುದ್ಧ ಮುಗಿಬಿದ್ದರು.
ಸಂಪುಟ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಸ್ ದರಗಳನ್ನು ಕಳೆದ 5-10 ವರ್ಷಗಳಲ್ಲಿ ಪರಿಷ್ಕರಣೆ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಲಾಗಿತ್ತು. ಈ ಸಾಲವನ್ನು ಸಹ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಕ್ತಿ ಯೋಜನೆ ಮತ್ತು ಬಸ್ ದರ ಏರಿಕೆಗೆ ಸಂಪುಟದಲ್ಲಿ ಯಾವುದೇ ವಿರೋಧವಿಲ್ಲ ಎಂದರು.
ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣ ದರವನ್ನು ಶೇ.15 ರಷ್ಟು ಪರಿಷ್ಕರಿಸಲಾಗುತ್ತಿದೆ. 2015 ರ ಜನವರಿ 10 ರಂದು ಪ್ರಯಾಣ ದರ ಏರಿಕೆ ಮಾಡಿದಾಗ ಪ್ರತಿ ಲೀಟರ್ ಡಿಸೇಲ್ 60.98 ರೂ ಇತ್ತು 4 ಸಾರಿಗೆ ನಿಗಮಗಳಿಗೆ ಪ್ರತಿದಿನ ಡಿಸೇಲ್ ವೆಚ್ಚ 9.16 ಕೋಟಿ ರೂ. ಪ್ರಸ್ತುತ 13.21 ಕೋಟಿಗೆ ಹೆಚ್ಚಳವಾಗಿದೆ. ಪ್ರತಿದಿನ ಸಿಬ್ಬಂದಿ ವೆಚ್ಚ 12.85 ಕೋಟಿ ರೂ ಇತ್ತು. ಈ ಮೊತ್ತ 18.36 ಕೋಟಿ ರೂ ಗೆ ಏರಿಕೆಯಾಗಿದೆ. ಹೀಗಾಗಿ ಪ್ರತಿದಿನ 9.56 ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ ಎಂದು ಹೇಳಿದರು.
ಶಕ್ತಿ ಯೋಜನೆ ಮುಂದುವರೆಯಲಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಸಾರಿಗೆ ಸಂಸ್ಥೆಗೆ ಆರ್ಥಿಕ ಹೊರೆ ಹೆಚ್ಚಾದರೆ ಅದನ್ನು ಭರಿಸಲು ಸಿದ್ಧರಿದ್ದೇವೆ. ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳಿಗಿಂತ ಕಡಿಮೆ ಇದೆ. ಸಾರಿಗೆ ನಿಗಮಗಳು ನವೆಂಬರ್ ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಶಾಸನಬದ್ಧ ಪಾವತಿಯಾದ ಭವಿಷ್ಯ ನಿಧಿ ಹಾಗೂ ಇಂಧನದ ಬಾಕಿ ಮೊತ್ತವಾಗಿ 2000.00 ಕೋಟಿ ರೂ ಮೊತ್ತದ ಸಾಲವನ್ನು ಮರು ಪಾವತಿಸಲಾಗುವುದು ಎಂದರು.