ಬಳ್ಳಾರಿ : ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವ ನೀಡಿದ ಭರವಸೆಯಂತೆ, ಅಧಿಕಾರಕ್ಕೆ ಬಂದ ಕೂಡಲೇ ಮೊಟ್ಟಮೊದಲ ಸಚಿವ ಸಂಪುಟ ಸಭೆಯಲ್ಲಿಯೇ 5 ಗ್ಯಾರೆಂಟಿಗಳ ಈಡೇರಿಕೆಗೆ ಒಪ್ಪಿಗೆ ನೀಡಿ, ಅದರಂತೆಯೇ ಅವುಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದ್ದು, ನುಡಿದಂತೆಯೇ ನಡೆದು ತೋರಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿಯ ದುರಾಡಳಿತಕ್ಕೆ ರೋಸಿ ಹೋಗಿದ್ದರು. ಕಾಂಗ್ರೆಸ್ ಪಕ್ಷದ ಮೇಲೆ ಅತೀವ ಭರವಸೆಯೊಂದಿಗೆ, ಅಪಾರ ಬೆಂಬಲ ನೀಡಿ 135 ಸ್ಥಾನಗಳಲ್ಲಿ ಗೆಲ್ಲಿಸಿದ್ದಾರೆ. ಜನತೆಯು ನಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸದೇ, ಐದೂ ಗ್ಯಾರೆಂಟಿಗಳನ್ನೂ ಜಾರಿಗೆ ತರಲಾಗುತ್ತಿದೆ. ಮುಹೂರ್ತವೂ ರೆಡಿಯಾಗಿದೆ. ರಾಜ್ಯದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರಲ್ಲದೇ, ಬಳ್ಳಾರಿ ಜಿಲ್ಲೆಯ ಎಲ್ಲಾ 5 ಕ್ಷೇತ್ರಗಳಲ್ಲಿ ಮತ್ತು ವಿಜಯನಗರ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದಕ್ಕಾಗಿ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಹಿಂದಿನ ಬಿಜೆಪಿ ಸರ್ಕಾರವು ಎಸ್.ಸಿ. ಮತ್ತು ಎಸ್.ಟಿ. ಮೀಸಲಾತಿ ಪ್ರಮಾಣ ಹೆಚ್ಚಿಸಿ, ಚುನಾವಣಾ ಲಾಭ ಪಡೆಯಲು ನೋಡಿತು. ವಿದಾನಸಭೆ ಚುನಾವಣೆಯಲ್ಲಿ ಎಸ್.ಟಿ. ಮೀಸಲಾತಿಯ ಎಲ್ಲಾ 15 ಕ್ಷೇತ್ರಗಳಲ್ಲಿ ಬಿಜೆಪಿ ಸೋಲುಂಡಿದೆ ಹಾಗೂ ಎಸ್.ಸಿ ಮೀಸಲಾತಿಯ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ರಾಜ್ಯ ಬಿಜೆಪಿ ಮುಖಂಡರಿಗೆ ಬದ್ಧತೆ ಇದ್ದರೆ, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒತ್ತಡ ಹಾಕಿ, ಮೀಸಲಾತಿ ಹೆಚ್ಚಳವನ್ನು 9ನೇ ಷೆಡ್ಯೂಲ್‌ಗೆ ಸೇರಿಸಲಿ ಎಂದು ಉಗ್ರಪ್ಪ ಆಗ್ರಹಪಡಿಸಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್‌ಗಾಂಧಿಯವರು ಬಳ್ಳಾರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಾಣ ಮಾಡಿ, ಬಳ್ಳಾರಿಯನ್ನು ಇಡೀ ದೇಶದಲ್ಲಿಯೇ ‘ಜೀನ್ಸ್ ಕ್ಯಾಪಿಟೆಲ್ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ. ನಾನು ಈ ಬಗ್ಗೆ ಅವರ ಗಮನ ಸೆಳೆಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಉಗ್ರಪ್ಪ ನುಡಿದರು.
ಅಂತೆಯೇ ಕುಡತಿನಿಯಲ್ಲಿ ಭೂಸಂತ್ರಸ್ಥ ರೈತರು ನಡೆಸಿರುವ ಹೋರಾಟವನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಬೆಂಬಲಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮೂರು ಪ್ರಮುಖ ಕಂಪನಿಗಳು ಸ್ಟೀಲ್ ಕಾರ್ಖಾನೆ ನಿರ್ಮಿಸಲು ರೈತರಿಂದ ಸಹಸ್ರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಂಡು 12 ವರ್ಷಗಳು ಕಳೆದಿವೆ. ಆದರೆ, ಈವರೆಗೂ ಕಾರ್ಖಾನೆ ಸ್ಥಾಪಿಸಿಲ್ಲವಾದ ಕಾರಣ, ರೈತರಿಗೆ ಭೂಮಿ ವಾಪಸ್ ನೀಡಲು ಕ್ರಮ ಕೈಗೊಳ್ಳುವಂತೆ ನಾನು ಕೋರುತ್ತೇನೆ ಎಂದು ತಿಳಿಸಿದರು.
ಇಬ್ಬಾಗವಾಗಿರುವ ಅಖಂಡ ಬಳ್ಳಾರಿ ಜಿಲ್ಲೆಯನ್ನು ಮತ್ತೆ ಒಗ್ಗೂಡಿಸುವುದು ಸುಲಭದ ಮಾತಲ್ಲ. ನೂತನ ವಿಜಯನಗರ ಜಿಲ್ಲೆ ರಚನೆಯಾಗಿ ಅನೇಕ ಕಛೇರಿಗಳೂ ಮೈದಳಿದಿವೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಮತ್ತೆ ಒಂದಾಗಿ ಮಾಡುವುದು, ಒಗ್ಗೂಡಿಸುವುದು ಅಷ್ಟು ಸುಲಭವಿಲ್ಲ. ನಮ್ಮ ಸರ್ಕಾರ ಈ ಎರಡೂ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಸಚಿವ ಬಿ.ನಾಗೇಂದ್ರ ಅವರ ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ನಿರ್ಣಯವೇ ಮುಖ್ಯ ಎಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ ಸ್ಪಷ್ಟವಾಗಿ ನುಡಿದರು.
ಗೂಡ್ಸ್‌ಶೆಡ್‌ಗೆ ಒಂದು ಇಂಜಿನ್: ರಾಜ್ಯದಲ್ಲಿನ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಲ್ಲಿ ಒಂದು ಇಂಜಿನ್ ಅನ್ನು ರಾಜ್ಯದ ಜನತೆ ‘ಗೂಡ್ಸ್‌ಶೆಡ್ಗೆ ಕಳಿಸಿದ್ದಾರೆ. ಬಿಜೆಪಿ ಸರ್ಕಾರದ ವೈಫಲ್ಯ, ಸುಳ್ಳುಗಳು, ಹಗರಣಗಳು, ಅನಗತ್ಯ ವಿವಾದ ಸೃಷ್ಟಿಸುವುದು, ಕೋಮ ಸೌಹಾರ್ದತೆ ಕದಡುವ ಪ್ರಯತ್ನಗಳಿಗೆ ರಾಜ್ಯದ ಪ್ರಬುದ್ಧ ಮತದಾರರು ತಕ್ಕ ಉತ್ತರ ನೀಡಿ, ಬಿಜೆಪಿಯನ್ನು ಮನೆಗೆ ಕಳಿಸಿದ್ದಾರೆ ಎಂದು ಉಗ್ರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜೆ.ಎಸ್.ಮಹಮ್ಮದ್ ರಫೀಕ್, ಮುಖಂಡರಾದ ಕಲ್ಲುಕಂಬಪಂಪಾಪತಿ, ಕೆ.ತಾಯಪ್ಪ, ಕಾಂತಿನೋಹ ವಿಲ್ಸನ್, ಮಹಮ್ಮದ್ ಗೌಸ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.