ಬೆಂಗಳೂರು:ಬಿಜೆಪಿಯವರು ತಮ ವಿರುದ್ಧ ಹಾರಾಡಿ, ಚೀರಾಡಿ, ಬಟ್ಟೆ ಹರಿದುಕೊಂಡರೂ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಯಾರಿಗೇ ದೂರು ನೀಡಿದರೂ ಹೆದರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ತಾವು ಸೈದ್ಧಾಂತಿಕವಾಗಿ ಅವರನ್ನು ವಿರೋಧಿಸುತ್ತೇವೆ. ಮನಸತಿ, ಆರ್ಎಸ್ಎಸ್ ಚಿಂತನೆಗಳಿಗೆ ಎದುರಾಗಿದ್ದೇವೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹುದಕ್ಕೆಲ್ಲಾ ನಾವು ಜಗ್ಗುವುದಿಲ್ಲ. ಎಷ್ಟೇ ಬೆದರಿಕೆ ಹಾಕಿದರೂ ತಮ ನಿಲುವುಗಳು ಬದಲಾಗುವುದಿಲ್ಲ ಎಂದರು.
ಮೂರು ಬಾರಿ ಸಚಿವನಾಗಿದ್ದೇನೆ. ಇಷ್ಟು ವರ್ಷ ರಾಜಕೀಯ ಜೀವನದಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ. ನನ್ನ ವಿರುದ್ಧ ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯ ಸೇರಿದಂತೆ ಯಾವುದೇ ಸಂಸ್ಥೆಗೆ ದೂರು ನೀಡಲಿ. ಅಮಿತ್ ಶಾ, ಪ್ರಧಾನಿ ಮೋದಿಯವರಿಗೂ ಹೇಳಲಿ. ನಾವು ಯಾವುದಕ್ಕೂ ಹೆದರುವುದಿಲ್ಲ. ತಮ ತಂದೆ ಮಲ್ಲಿಕಾರ್ಜುನ ಖರ್ಗೆ ಎಷ್ಟು ದೃಢವಾಗಿದ್ದರೋ, ನಾನೂ ಕೂಡ ಹಾಗೆಯೇ ಇರುತ್ತೇನೆ ಎಂದು ಹೇಳಿದರು.
ನನ್ನ ಆಪ್ತ ಎಂದು ಹೇಳಿರುವ ವ್ಯಕ್ತಿಯಿಂದ ಕಿರುಕುಳವಾಗಿದೆ ಎಂದು ವ್ಯಕ್ತಿಯೊಬ್ಬ ಆತಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಮುಂದಿಟ್ಟುಕೊಂಡು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆ ರೀತಿಯ ಘಟನೆ ಆಗಿರಬಹುದು. ನಾನು ಇಲ್ಲ ಎಂದು ಹೇಳುತ್ತಿಲ್ಲ. ಇದರ ತನಿಖೆಗೂ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ತನಿಖೆಯಾಗಲಿ ಎಂದೇ ನಾನು ಹೇಳುತ್ತಿದ್ದೇನೆ. ಆದರೂ ನನ್ನ ವಿರುದ್ಧ ಅನಗತ್ಯವಾಗಿ ಟೀಕೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಾರ್ಕಿಕತೆ ಇಲ್ಲದೆ ಮಾತನಾಡುತ್ತಿದ್ದಾರೆ. ಕಲಬುರಗಿ ರಿಪಬ್ಲಿಕ್ ಎಂದು ದೂರಿದ್ದಾರೆ. ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ಶಾಸಕ ಯಾವ ಪಕ್ಷದವರು?, ಪಡಿತರ ಅಕ್ಕಿ, ಮಕ್ಕಳ ಹಾಲು ಕದ್ದು 20ಕ್ಕೂ ಹೆಚ್ಚು ಪ್ರಕರಣಗಳಿಗೆ ಗುರಿಯಾಗಿರುವವರು ಯಾರು?, ಕಲಬುರಗಿಯಲ್ಲಿ ಹೆಚ್ಚು ಅಪರಾಧಗಳನ್ನು ಮಾಡಿದವರು ಯಾರು? ಎಂಬುದಕ್ಕೆ ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಪ್ರಯೋಗಾಲಯದ ವರದಿ ಬಂದಿದೆ. ಅದರ ಬಗ್ಗೆ ವಿಜಯೇಂದ್ರ ಏಕೆ ಮಾತನಾಡುತ್ತಿಲ್ಲ. ಮುನಿರತ್ನ, ಸಿ.ಟಿ.ರವಿ ಅವರ ಪ್ರಕರಣಗಳ ಬಗ್ಗೆ ಹಾಗೂ ಕೋವಿಡ್ ಹಗರಣದ ಬಗ್ಗೆ ಏಕೆ ಸತ್ಯಶೋಧನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಅನ್ವರ್ ಮಾನ್ಪಡಿಗೆ 150 ಕೋಟಿ ರೂ. ನೀಡಲು ಆಮಿಷವೊಡ್ಡಿದ ಪ್ರಕರಣದ ಬಗ್ಗೆ ಉಸಿರೆತ್ತುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯವರು ಹೇಳಿದ್ದೆಲ್ಲಾ ಸತ್ಯವಲ್ಲ. ನನ್ನ ರಾಜೀನಾಮೆ ಕೇಳುವ ಮೊದಲು ದಾಖಲೆ ಕೊಡಿ ಎಂದು ಒತ್ತಾಯಿಸಿದರು.
ಆತಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಪತ್ರದಲ್ಲಿ ನನ್ನ ಹೆಸರಿದೆಯೇ?
8 ಮಂದಿ ಆರೋಪಿಗಳಿದ್ದಾರೆ. ಅದರಲ್ಲಿ ಪ್ರಿಯಾಂಕ ಖರ್ಗೆ ಎಂದು ನಮೂದಾಗಿದೆಯೇ?, ಅವರದೇ ಕಂಪನಿಯ 8 ಮಂದಿ ಹೆಸರಿದೆ. ಇದರ ಬಗ್ಗೆ ಮೊದಲು ತನಿಖೆಯಾಗಲಿ ಎಂದರು.ಸಂತೋಷ್ ಪಾಟೀಲ್ ಆತಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ಹೆಸರನ್ನು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಈಗ ಬಿಜೆಪಿಯವರು ಆರೋಪ ಮಾಡುತ್ತಿರುವ ಪ್ರಕರಣದಲ್ಲಿ ನನ್ನ ಹೆಸರಿಲ್ಲ. ಗುತ್ತಿಗೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಾನಾ ರೀತಿಯ ಹೇಳಿಕೆಗಳು, ಗೊಂದಲಗಳಿವೆ. ಅದರ ಬಗ್ಗೆ ತನಿಖೆಯಾಗಬೇಕು ಎಂದರು.