ವಿಶೇಷ ವರದಿ
ಬಳ್ಳಾರಿ: ಬಳ್ಳಾರಿ ನಗರದಲ್ಲಿ ಬಹಳಷ್ಟು ರಸ್ತೆಗಳಲ್ಲಿ, ಪ್ರಮುಖ ರೋಡ್-ಸರ್ಕಲ್‍ಗಳಲ್ಲಿ ಕುಣಿಗಳು (ಗುಂಡಿಗಳು) ಬಾಯಿ ತೆರೆದು ನಿಂತಿದ್ದು, ಇವುಗಳಿಂದಾಗಿ ವಾಹನ ಸವಾರರಿಗೆ ಮಾತ್ರವಲ್ಲದೇ, ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು ಕೂಡಾ ತೀವ್ರ ತೊಂದರೆ, ಕಿರಿಕಿರಿ ಅನುಭವಿಸುವಂತಾಗಿದೆ.
ಬಳ್ಳಾರಿ ನಗರದ ಯಾವ `ರಸ್ತೆ’ಯನ್ನು ನೋಡಿದರೆ, ಏನಿದೆ ಗರ್ವ ಕಾರಣ? ಎನ್ನುವ ಹಾಗೆ, ರಸ್ತೆಗಳ ಪರಿಸ್ಥಿತಿ ತಯಾರಾಗಿ ನಿಂತಿದೆ. ರಸ್ತೆಗಳಲ್ಲಿ ತೆಗ್ಗು-ಕುಣಿಗಳು, ಗುಂಡಿಗಳು ಕಾಣಬಹುದಾಗಿದೆ. ಕೆಲವಡೆ `ದೊಡ್ಡ-ದೊಡ್ಡ’ ಗುಂಡಿಗಳನ್ನೂ ನೋಡಬಹುದಾಗಿದ್ದು, ಸರ್ಕಾರಿ ಇಲಾಖೆಗಳು ಈ ಬಗ್ಗೆ ಗಮನವನ್ನು ನೀಡುತ್ತಿಲ್ಲವೆ? ಎನ್ನುವ ಪ್ರಶ್ನೆಯೂ ಮೂಡುವುದು ಸಹಜ.
ಬೆಂಗಳೂರು ರಸ್ತೆ, ಬ್ರಾಹ್ಮಣ ಬೀದಿ, ತೇರು ಬೀದಿ, ಕಾಳಮ್ಮ ರಸ್ತೆ, ರಾಯಲ್ ಸರ್ಕಲ್, ಮೋತಿ ಸರ್ಕಲ್, ಸಂಗಂ ಸರ್ಕಲ್, ಎಸ್‍ಪಿ ಸರ್ಕಲ್, ಎಂಜಿ ರಸ್ತೆ, ಸತ್ಯನಾರಾಯಣ ಪೇಟೆ, ಗಾಂಧಿನಗರ, ನೆಹರು ಕಾಲನಿ, ಬಸವೇಶ್ವರ ನಗರ, ಸ್ಟೇಷನ್ ರಸ್ತೆ, ರಾಧಿಕಾ-ರಾಘವೇಂದ್ರ ಟಾಕೀಜ್ ರಸ್ತೆ, ಬಸ್‍ಸ್ಟಾಂಡ್ ರಸ್ತೆ, ಡಾ||ರಾಜ್‍ಕುಮಾರ್ ರಸ್ತೆ, ಸಂಗಂ ರಸ್ತೆ, ವಾಲ್ಮೀಕಿ ಸರ್ಕಲ್, ರೂಪನಗುಡಿ ರಸ್ತೆ, ಅಲ್ಲಂ ಭವನದ ರಸ್ತೆ, ಬೈಪಾಸ್ ರಸ್ತೆ, ಗುಗ್ಗರಹಟ್ಟಿ ರಸ್ತೆ, ಎಪಿಎಂಸಿ ಸರ್ಕಲ್ ರಸ್ತೆ, ಕೌಲ್‍ಬಜಾರ್, ರೇಡಿಯೋ ಪಾರ್ಕ್, ಓಪಿಡಿ ರಸ್ತೆ, ಬೆಳಗಲ್ ರಸ್ತೆ, ಸಿರುಗುಪ್ಪ ರಸ್ತೆ, ಫೋರ್ಟ್ ರಸ್ತೆ, ವಡ್ಡರ ಬಂಡೆ.. ಹೀಗೆ ಯಾವುದೇ ಪ್ರದೇಶಗಳಲ್ಲಿ ಕೂಡಾ `ಗುಂಡಿ’ಗಳು, `ತೆಗ್ಗು-ಕುಣಿ’ಗಳು, ಕೊಂಚ ಹದಗೆಟ್ಟ ರಸ್ತೆಗಳು ಕಣ್ಣಿಗೆ ರಾಚಿಬಡಿಯುತ್ತವೆ.
ಬಳ್ಳಾರಿ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಪಂಚಾಯತ್‍ರಾಜ್ ಇಲಾಖೆ, ಜಿಲ್ಲಾ ಆಡಳಿತ, ಮತ್ತಿತರೆ ಇಲಾಖೆಗಳ ಅಧಿಕಾರಿಗಳು `ಬಳ್ಳಾರಿ ರಸ್ತೆ’ಗಳನ್ನು ಅಭಿವೃದ್ಧಿಪಡಿಸುವತ್ತ ಚಿತ್ತ ಹರಿಸಲಿ. ಇಲ್ಲವಾದಲ್ಲಿ `ರಸ್ತೆ’ಗಳಲ್ಲಿ `ಕಣ್‍ಬಿಟ್ಟು’ಕುಳಿತಿರುವ, `ಬಾಯ್’ ತೆರೆದು ನಿಂತಿರುವ ತೆಗ್ಗು-ಕುಣಿಗಳನ್ನಾದರೂ ಮುಚ್ಚುವ ಕೆಲಸ ಮಾಡಲಿ ಎಂದು ನಾಗರೀಕರು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ.
ರಸ್ತೆಗಳಲ್ಲಿ `ಪಾಟ್-ಹೋಲ್ಸ್’ ಫಿಲಪ್ ಮಾಡಲಾಗುತ್ತದೆ. ತೆಗ್ಗು-ಕುಣಿಗಳನ್ನು ಖಂಡಿತವಾಗಿಯೂ ಮುಚ್ಚುತ್ತೇವೆ. ಆದ್ಯತೆಯ ಮೇರೆಗೆ ಇವೆಲ್ಲವನ್ನೂ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದ, ಭರವಸೆ ನೀಡಿದ್ದ ಅಧಿಕಾರಿಗಳ ಮಾತುಗಳು ಕಾರ್ಯರೂಪಕ್ಕೆ ಬರಲಿಲ್ಲ. ಒಂದು ವೇಳೆ ಯಾರದ್ದೋ ಒತ್ತಾಯಕ್ಕೆ, ಇಲ್ಲವೇ ಸಂಘಟನೆಗಳ ಅಗ್ರಹಕ್ಕೆ ರಸ್ತೆಗಳಲ್ಲಿನ `ಗುಂಡಿ’ಗಳನ್ನು ಮುಚ್ಚಿಹಾಕಿದ್ದರೂ, ಅದೆಲ್ಲವೂ ಕೇವಲ ತಾತ್ಕಾಲಿಕವಾಗಿ ನಡೆದಿರುತ್ತವೆ. ಮತ್ತೆ ಕೆಲವೇ ದಿನಗಳಲ್ಲಿ ಅವು `ಯಥಾ’ ರೀತಿ ಬಾಯಿ ತೆರೆದು ನಿಲ್ಲುತ್ತಿವೆ.
ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? `ರಸ್ತೆ’ಗಳನ್ನು ಅಂದವಾಗಿ-ಸುಂದರವಾಗಿ ಮಾಡುತ್ತಾರೋ, ಇಲ್ಲವೋ ತಿಳಿಯದಾಗಲಿ, ಅವುಗಳು ಬಾಯಿ ತೆರೆದು `ತೆಗ್ಗು-ಕುಣಿ’ಗಳಿಂದ ತುಂಬಿ ವಿಕಾರವಾಗಿ ಕಾಣದಂತಾಗಲಿ ಎಂದೇ ನಾಗರೀಕರು ಕೋರಿದ್ದಾರೆ. `ರಸ್ತೆ’ಯಲ್ಲಿನ `ಗುಂಡಿ’ (ಕುಣಿ)ಗಳನ್ನು ಕೂಡಲೇ ಮುಚ್ಚುವಂತೆ ಆಗ್ರಹ ಪಡಿಸಿದ್ದಾರೆ.