ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ನ ಅಯ್ಯಪ್ಪ ದೇವಸ್ಥಾನದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಗಾಯಗೊಂಡು ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ಮಾಲಾಧಾರಿಗಳ ಪೈಕಿ ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (18) ಮೃತಪಟ್ಟಿದ್ದಾರೆ. ಈ ಇಬ್ಬರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ.ಮೃತ ನಿಜಲಿಂಗಪ್ಪ ಬೇಪುರಿ, ಸಂಜಯ್ ಸವದತ್ತಿ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಜಿಲ್ಲಾ ಉಸ್ತುವಾರಿ ಸಚಿವರಾದ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಸಹ ಸಾಂತ್ವನ ಹೇಳಿದ್ದಾರೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ ಎಂದು ಲಾಡ್ ತಿಳಿಸಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ತೆರಳಿದ್ದ ಸಚಿವ ಲಾಡ್ ಅವರು ಇಬ್ಬರು ಮಾಲಾಧಾರಿಗಳು ಮೃತಪಟ್ಟ ಸುದ್ದಿ ತಿಳಿದ ಕೂಡಲೇ ಹುಬ್ಬಳ್ಳಿಗೆ ದೌಡಾಯಿಸಿದ್ದರು.ಉಳಿದ ಗಾಯಾಳುಗಳ ಚಿಕಿತ್ಸೆ ಮುಂದುವರಿದಿದ್ದು ಲಾಡ್ ಅವರು ಖುದ್ದು ಸ್ಥಳದಲ್ಲಿದ್ದು, ಅಗತ್ಯ ನೆರವಿಗೆ ಕ್ರಮ ಕೈಗೊಂಡಿದ್ದಾರೆ.ಗಾಯಗೊಂಡಿರುವ ಇತರ 7 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಒಬ್ಬ ಬಾಲಕನ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಕುಟುಂಬದವರ ಜತೆ ಚರ್ಚಿಸಿ ಇನ್ನು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಕಿಮ್ಸ್ ಆಸ್ಪತ್ರೆ ಬಳಿ ಲಾಡ್ ತಿಳಿಸಿದ್ದಾರೆ. ಕಿಮ್ಸ್ನಲ್ಲಿ ದಾಖಲಾಗಿರುವ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಚಿಕಿತ್ಸೆಗೆ ಬೆಂಗಳೂರಿನ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಕೊಡಿಸಲು ಸಚಿವ ಲಾಡ್ ಅವರು ಸಾಕಷ್ಟು ಮುತುವರ್ಜಿ ವಹಿಸಿದ್ದರು.