ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವಾಚ್ಯ ಪದ ಬಳಸಿ ನಿಂದನೆ ಮಾಡಿದ ಪ್ರಕರಣವನ್ನು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿಯ ೫ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಪರ್ಶ ಡಿಸೋಜಾ ಅವರು, ಪ್ರಕರಣದ ವಿಚಾರಣೆ ನಡೆಸಿದ ಬಳಿಕ, ಬೆಂಗಳೂರಿಗೆ ವರ್ಗಾಯಿಸಿ ಆದೇಶ ನೀಡಿದರು.
ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ವಕೀಲರಾದ ಎಂ.ಬಿ.ಝಿರಲಿ, ರವಿರಾಜ್ ಪಾಟೀಲ, ಸಿ.ಟಿ ರವಿ ಪರ ವಾದ ಮಂಡಿಸಿದರು. ಸಿ.ಟಿ.ರವಿ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು ಮಧ್ಯಾಹ್ನ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದರು. ತೀರ್ಪು ಪ್ರಕಟಿಸುವ ಮೊದಲೇ ಪ್ರಕರಣವನ್ನು ನ್ಯಾಯಾಧೀಶರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದರು.
ನ್ಯಾಯಾಲಯ ಆದೇಶ ನೀಡುತ್ತಿದ್ದಂತೆ ನ್ಯಾಯಾಲಯಕ್ಕೆ ದೌಡಾಯಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಸುನೀಲಕುಮಾರ್ ಅವರು ಸಿ.ಟಿ.ರವಿ ಅವರ ಜೊತೆಗೆ ಮಾತುಕತೆ ನಡೆಸಿದರು. ನಂತರ ಹಿರೇಬಾಗೇವಾಡಿ ಠಾಣೆ ಪೊಲೀಸರು ಸಿ.ಟಿ.ರವಿ ಅವರನ್ನು ಬೆಂಗಳೂರಿಗೆ ಕರೆದೊಯ್ದರು.
ಸಿ.ಟಿ.ರವಿಯಿಂದ ಸಚಿವೆಗೆ ಮಾನಹಾನಿ ಪ್ರಕರಣ: ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ
