ಮಂಡ್ಯ : ದೇಶದ ಜನರಿಗಾಗಿ ನಿಮ್ಮ ಸೇವೆ ಮುಡಿಪಾಗಿರಲಿ ಎಂದು ಇಂದು ವೈದ್ಯ ವೃತ್ತಿಗೆ ಪಾದಾರ್ಪಣೆ ಮಾಡುತ್ತಿರುವ ಯುವ ವೈದ್ಯರಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು. ಆದಿಚುಂಚನಗಿರಿ ಇನ್ನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ ಹಾಗೂ ಹೃದಯ ವಿಜ್ಞಾನ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಲಿಕೆ ಒಂದು ನಿರಂತರ ಪ್ರಕ್ರಿಯೆ. ನಿಜಜೀವನದಲ್ಲಿ ಮೊದಲು ಪರೀಕ್ಷೆ ನಂತರ ಕಲಿಕೆಯಿರುತ್ತದೆ. ನೋವನ್ನು ತೆಗೆದು ಶಮನ ಮಾಡುವ ಶಕ್ತಿಯನ್ನು ವೈದ್ಯವೃತ್ತಿ ಹೊಂದಿದೆ. ಇತರಿಗಾಗಿ ಜೀವಿಸುವುದೇ ವೈದ್ಯ ವೃತ್ತಿಯ ಉದಾರತೆಯಾಗಿದೆ. ದೈವಶಕ್ತಿಯ ಪ್ರತಿನಿಧಿಯಾಗಿರುವ ವೈದ್ಯರಲ್ಲಿ ದೈವತ್ವದ ಗುಣ, ಕರುಣೆ, ಮಾನವೀಯತೆ ಇರಬೇಕು. ಸಾಧನೆ.ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧನೆಯ ನಂತರವೂ ಬದುಕುವವನು ಸಾಧಕ. ನಿಮ್ಮ ಸಾಧನೆಗಳು ಚಿರಸ್ಥಾಯಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಿ, ಕರುಣೆಯಿಂದ ನಿರ್ಣಯಿಸಿ ಎಂದು ತಿಳಿಸಿದರು.
ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು :
ಅನಾದಿಕಾಲದಿಂದ ಅರಮನೆಗೂ ಗುರುಮನೆಗೆ ಸಂಬಂಧವಿತ್ತು. ಗುರುಗಳಿಂದಲೂ, ಗ್ರಾಮದ ಕಟ್ಟಕಡೆಯ ಮನುಷ್ಯನಿಂದಲೂ ಕಲಿಕೆಯಿದೆ. ಆಧ್ಯಾತ್ಮಿಕತೆ ಹಾಗೂ ಸ್ಥಳೀಯ ಜ್ಞಾನದಿಂದ ರಾಜ್ಯವನ್ನು ಸುಭಿಕ್ಷವಾಗಿ, ಸಂಪತ್ಭರಿತವಾಗಿ ಮಾಡಲು ಸಾಧ್ಯವಿದ್ದು, ಇದು ಸರ್ಕಾರದ ಧ್ಯೇಯವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಉತ್ತಮ ಸಚಿವರ ತಂಡ ನನ್ನೊಂದಿಗಿದೆ. ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರ ಹೆಚ್ಚಿನ ಒತ್ತು ನೀಡಲಾಗಿದ್ದು, ಹೆಚ್ಚಿನ ಅನುದಾನವನ್ನು ನೀಡಲಾಗಿದೆ. 7000 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ವಲಯಾವಾರು ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ, ಒಳ್ಳೆಯ ಆಡಳಿತ ನಮ್ಮ ಗುರಿಯಾಗಿದೆ ಎಂದರು.
ಬುದ್ಧನಿಂದ ಯಶ ಹಾಗೂ ಒಳಿತಿಗೆ ಮಾರ್ಗ :
ಗೌತಮ ಬುದ್ಧರು ಸುಖಭೋಗಗಳನ್ನು ತ್ಯಜಿಸಿ ಜ್ಞಾನವನ್ನು ಸಂಪಾದಿಸಿದರು. ಬುದ್ಧಜಯಂತಿಯ ಶುಭದಿನದಂದು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಔಚಿತ್ಯಪೂರ್ಣ. ಬುದ್ಧನ ಬಗ್ಗೆ ತಿಳಿದುಕೊಂಡರೆ ಯಶ ಹಾಗೂ ಒಳಿತಿಗೆ ಮಾರ್ಗ ದೊರೆಯುತ್ತದೆ ಎಂದರು.
ವಿಜ್ಞಾನ ಮ್ಯೂಸಿಯಂ ನಿರ್ಮಾಣಕ್ಕೆ ಸರ್ಕಾರದ ಸಹಕಾರ :
ಆದಿಚುಂಚನಗಿರಿಯ ಪೀಠಾದಿಪತಿಗಳಾದ ಪರಮಪೂಜ್ಯ ನಿರ್ಮಲಾನಂದಸ್ವಾಮಿಯವರಿಗೆ ರಾಜೀವ ಗಾಂಧಿ ವಿಶ್ವಿವಿದ್ಯಾಲಯದಿಂದ ಡಾಕ್ಟರೇಟ್ ನೀಡಿರುವುದು ಅತ್ಯಂತ ಸಮಂಜಸವಾಗಿದೆ. ಪೂಜ್ಯರು ಕರ್ನಾಟಕದ ವೈಜ್ಞಾನಿಕ ಹಾಗೂ ಆಧ್ಯಾತ್ಮಕ ಗುರುಗಳಾಗಿದ್ದಾರೆ. ಆದಿಚುಂಚನಗಿರಿ ಮಠ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನ್ನ, ವಿದ್ಯೆ, ಆರೋಗ್ಯವನ್ನು ನೀಡುತ್ತಾ ಬಂದಿದೆ. ಜ್ಞಾನ ಮತ್ತು ಧ್ಯಾನದಿಂದ ವಿಜ್ಞಾನವನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಮಠ ಮಾಡುತ್ತಿದೆ. ಇಲ್ಲಿ ಬಂದರೆ ವಿಜ್ಞಾನ, ವೈಚಾರಿಕತೆ ಬಗ್ಗೆ ಜ್ಞಾನ ಸಿಗುತ್ತದೆ. ವಿಜ್ಞಾನದ ಬಗ್ಗೆ ಮ್ಯೂಸಿಯಂ ನಿರ್ಮಿಸುವ ಆಸೆ ವ್ಯಕ್ತಪಡಿಸಿದ್ದಾರೆ, ಅದಕ್ಕೆ ಅನುದಾನ ಸೇರಿದಂತೆ ಎಲ್ಲ ಸಹಕಾರವನ್ನು ನೀಡಲಾಗುವುದು.