ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅರೆ ವೈದ್ಯಕೀಯ ಸಿಬ್ಬಂದಿಯ ಪಾತ್ರ ಅತ್ಯಂತ ಅಗತ್ಯವಾಗಿದ್ದು, ಇದಕ್ಕಾಗಿ “ ಪ್ಯಾರಾ ಮೆಡಿಕಲ್ಸ್ ಕೌನ್ಸಿಲ್” ಸ್ಥಾಪಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಸರ್ಜನ್ ಡಾ. ಟಿ.ಎಚ್ ಆಂಜನಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿಂದು ರಾಷ್ಟ್ರಮಟ್ಟದ 6ನೇ ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿಸ್ಟ್ ಅಧಿವೇಶನ ಹಾಗೂ ಅರೆ ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ಕುರಿತ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ ಕೌನ್ಸಿಲ್ ಮಾದರಿಯಲ್ಲಿ ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕೌನ್ಸಿಲ್ ಸ್ಥಾಪಿಸಬೇಕು. ಇದರಿಂದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಅರೆ ವೈದ್ಯಕೀಯ ವಲಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದರು. ಕಳೆದ ಎರಡು ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ಕಾಲಾವಧಿಯಲ್ಲಿ ವೈದ್ಯರ ಪಾತ್ರ ಬಹುಮುಖ್ಯವಾಗಿತ್ತು. ಅಷ್ಟೇ ಮಹತ್ವದ ಜವಾಬ್ದಾರಿಯನ್ನು ಅರೆ ವೈದ್ಯಕೀಯ ಸಿಬ್ಬಂದಿ ನಿರ್ವಹಿಸಿದ್ದರು. ಹೀಗಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಅರೆ ವೈದ್ಯಕೀಯ ವಲಯ ಇನ್ನಷ್ಟು ರಚನಾತ್ಮಕ ರೀತಿಯಲ್ಲಿ ಬೆಳವಣಿಗೆ ಸಾಧಿಸಲು ಸರ್ಕಾರ ಸೂಕ್ತ ಕಾರ್ಯಯೋಜನೆ ರೂಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ. ಟಿ.ಎಚ್. ಆಂಜನಪ್ಪ ಅವರು, ಅಗಾಪೆ ಡಯಗ್ನೋಸಿಸ್ ನಿಂದ ಅಳವಡಿಸಿರುವ ಆಧುನಿಕ ತಂತ್ರಜ್ಞಾನದ ಮೂತ್ರ ಪಿಂಡ ಪರೀಕ್ಷಾ ಯಂತ್ರವನ್ನು ಲೋಕಾರ್ಪಣೆ ಮಾಡಿದರು. ಇದು ಪ್ರತಿ ಗಂಟೆಗೆ 182 ಮೂತ್ರಪಿಂಡ ಪರೀಕ್ಷೆ, ರಕ್ತ ಪರೀಕ್ಷೆ , ರೋಗನಿರೋಧಕ, ರೋಗಶಾಸ್ತ್ರ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದ್ದು, ಸಂಚಾರಿ ಆಂಬ್ಯುಲೆನ್ಸ್ ಮೂಲಕ ಹಳ್ಳಿಹಳ್ಳಿಗಳಲ್ಲಿ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.