ಹುಳಿಯಾರು: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಸಲುವಾಗಿ ಸರ್ಕಾರ ೨ ನೇ ಹಂತದ ನೊಂದಣಿ ಕಾರ್ಯ ಆರಂಭಿಸಿದ ೨೭ ಗಂಟೆಯೊಳಗೆ ಸ್ಥಗಿತಗೊಳಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಮೊದಲ ಹಂತದ ರಾಗಿ ಖರೀದಿ ಪ್ರಕ್ರಿಯೆ ಮುಗಿದು ರೈತರ ಖಾತೆಗಳಿಗೆ ಹಣ ವರ್ಗಾವಣೆಯಾದ ನಂತರ ೨ ನೇ ಹಂತದ ರಾಗಿ ಖರೀದಿಗಾಗಿ ನೊಂದಣಿ ಕಾರ್ಯಕ್ಕೆ ಸರ್ಕಾರ ಹಸಿರು ನಿಶಾನೆ ತೋರಿತ್ತು. ಆದರೆ ಏ.೨೫ ರಂದು ನೊಂದಣಿ ಕಾರ್ಯ ಆರಂಭಿಸುವುದಾಗಿ ಸರ್ಕಾರ ಘೋಷಿಸಿದ್ದರೂ ಸಹ ಏ.೨೬ ರ ಮಧ್ಯಾಹ್ನದವರೆವಿಗೂ ನೊಂದಣಿ ಕಾರ್ಯ ಆರಂಭವಾಗಲಿಲ್ಲ.
ಪರಿಣಾಮ ೩೩೭೭ ರೂ. ಬೆಂಬಲ ಬೆಲೆಯಲ್ಲಿ ರಾಗಿ ಮಾರುವ ಉತ್ಸಾಹದೊಂದಿಗೆ ಎಪಿಎಂಸಿಗೆ ಲಗ್ಗೆಯಿಟ್ಟಿದ್ದ ರೈತರಿಗೆ ಭಾರಿ ನಿರಾಸೆ ಮೂಡಿಸಿತ್ತು. ಮುಂಜಾನೆಯಿಂದಲೇ ಅನ್ನನೀರು ಇಲ್ಲದೆ ಉರಿ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಂತು ಬರಿಗೈಯಲ್ಲಿ ವಾಪಸ್ಸಾಗುವಾಗ ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಹಳ್ಳಿಗಳಿಂದ ಕೆಲಸ ಕಾರ್ಯ ಬಿಟ್ಟು ಬಂದು ಗಂಟೆಗಟ್ಟಲೆ ಕ್ಯೂ ನಿಂತರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಏ.೨೬ ರಂದು ಸಹ ಎಂದಿನಂತೆ ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತರು. ಅದೃಷ್ಟವಶತ್ ಮಧ್ಯಾಹ್ನದ ನಂತರ ನೊಂದಣಿ ಕಾರ್ಯ ಆರಂಭವಾಯಿತು. ನೂಕುನುಗ್ಗಲಿನಲ್ಲಿ ನೊಂದಣಿ ಮಾಡಿಸಿ ನಿಟ್ಟುಸಿರುವ ಬಿಟ್ಟರು. ನೊಂದಣಿ ಕಾರ್ಯ ಆರಂಭವಾಗಿರುವ ವಿಷಯ ತಿಳಿದ ಉಳಿದ ರೈತರು ಮರುದಿನ ಅಂದರೆ ಏ.೨೭ ರಂದು ಹಾಸಿಗೆಯಿಂದೆದ್ದು ನೇರವಾಗಿ ರಾಗಿ ಕೇಂದ್ರದ ಬಳಿ ಬಂದು ಠಿಕಾಣಿ ಹೂಡಿದರು.
ಏ.೨೭ ರಂದು ಸಂಜೆಯವರೆವಿಗೆ ನಿರಾತಂಕವಾಗಿ ನೊಂದಣಿ ಕಾರ್ಯ ನಡೆಯಿತು. ಯಾವುದೇ ತಂಟೆತಕರಾರು ಇಲ್ಲದೆ ರೈತರು ಉತ್ಸಾಹದಿಂದ ನೊಂದಣಿ ಮಾಡಿಸಿ ಹಿಂದಿರುಗಿದರು. ಆದರೆ ಸಂಜೆ ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿತು. ಏ.೨೮ ರ ಬೆಳಗ್ಗೆ ಪುನರಾರಂಭಗೊಳ್ಳಬಹುದೆಂಬ ಆಶಾಬಾವನೆಯಿಂದ ಹಿಂದಿರುಗಿದ ರೈತರಿಗೆ ಭಾರಿ ನಿರಾಸೆ ಮೂಡಿಸಿದೆ. ಪೂರ್ವ ನಿಗಧಿಯಂತೆ ೧.೧೪ ಮೆಟ್ರಿಕ್ ಟನ್ನಷ್ಟು ಖರೀಧಿ ನೊಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವೆಬ್ಸೈಟ್ ಲಾಕ್ ಮಾಡಲಾಗಿದೆ. ಇದು ಸಹಜವಾಗಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಇನ್ನೂ ಸಾವಿರಾರು ಸಣ್ಣ ಹಿಡುವಳಿದಾರ ರೈತರಿಂದ ರಾಗಿ ಖರೀದಿಸಿಲ್ಲ. ಅದರಲ್ಲೂ ಮೊದಲ ಮತ್ತು ಎರಡನೇ ಹಂತದ ರಾಗಿ ನೊಂದಣಿಗೆ ಬಂದಿದ್ದರೂ ನೊಂದಣಿಯಾಗದೆ ಹಿಂದಿರುಗಿದ ರೈತರಿದ್ದಾರೆ. ಅಲ್ಲದೆ ದೊಡ್ಡ ಹಿಡುವಳಿದಾರರ ಮನೆಗಳಲ್ಲಿ ನೂರಾರು ಚೀಲ ರಾಗಿ ದಾಸ್ತಾನಿದ್ದು ರೈತನ ಸಂಕಷ್ಟಕ್ಕೆ ನೆರವಾಗಬೇಕಾದ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ರೈತ ಸಮುದಾಯ ಆರೋಪಿಸುತ್ತಿದೆ.
ಎಲ್ಲ ರೈತರಿಂದ ರಾಗಿ ಖರೀದಿಸುವುದು ಸರ್ಕರದ ಕರ್ತವ್ಯ
ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಕುಸಿತವಾದಾಗ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀಧಿಸುವುದು ನಿಯಮ. ಆದರೆ ಸರ್ಕಾರ ಎಲ್ಲಾ ರೈತರ ರಾಗಿ ಖರೀದಿಸದೆ ಗರಿಷ್ಟ ಮಿತಿ ನಿಗದಿ ಮಾಡಿ ರೈತ ಸಮುದಾಯಕ್ಕೆ ಭಾರಿ ಅನ್ಯಾಯ ಮಾಡುತ್ತಿದೆ. ಕಳೆದ ವರ್ಷ ೨೧ ಲಕ್ಷ ಕ್ವಿಂಟಲ್ ಈಗ ೧೫ ಲಕ್ಷ ಕ್ವಿಂಟಲ್ ನಿಗದಿ ಮಾಡಿದೆ. ಅದರಲ್ಲೂ ಒಬ್ಬ ರೈತನಿಂದ ಗರಿಷ್ಟ ೨೦ ಕ್ವಿಂಟಲ್ ಮಿತಿ ವಿಧಿಸಿದೆ. ರಾಜ್ಯದಲ್ಲಿ ಇನ್ನೂ ಸಾವಿರಾರು ರೈತರು ಬೆಂಬಲ ಬೆಲೆಯಲ್ಲಿ ರಾಗಿ ಮಾರಿಲ್ಲ. ಹಾಗಾಗಿ ಸರ್ಕಾರ ಸ್ಥಗಿತಗೊಂಡಿರುವ ನೊಂದಣಿ ಕಾರ್ಯವನ್ನು ಪುನಃ ಆರಂಭಿಸಿ ಎಲ್ಲಾ ರೈತರಿಂದಲೂ ರಾಗಿ ಖರೀಧಿಸಿ ಸಾಮಾಜಿಕ ನ್ಯಾಯ ನೀಡಬೇಕು.
ಕೆಂಕೆರೆ ಸತೀಶ್, ರಾಜ್ಯ ಉಪಾಧ್ಯಕ್ಷರು, ರೈತ ಸಂಘ,