ಕಾಂಗ್ರೆಸ್ ಪಕ್ಷದ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ- ಸಿ.ಟಿ.ರವಿ


ಬೆಂಗಳೂರು: ‘ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು… ಪುರಂದರ ದಾಸರು ಹೇಳಿದ್ದು ಕಾಂಗ್ರೆಸ್ ಮುಖಂಡರನ್ನು ನೋಡಿಯೇ ಇರಬೇಕು. ಸುಳ್ಳೇ ಅವರ ಮನೆಯ ದೇವರಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಚಿಕ್ಕಮಗಳೂರು ಶಾಸಕರಾದ ಸಿ.ಟಿ. ರವಿ ಅವರು ತಿಳಿಸಿದ್ದಾರೆ. 500 ಎಕರೆ ಜಮೀನು ಹೊಂದಿದ್ದಾರೆ ಎಂದು ನನ್ನ ಮೇಲೆ ಆರೋಪ ಮಾಡಿರುವ ನಿಮಗೆ ಕಾನೂನೇ ಉತ್ತರ ಕೊಡುತ್ತದೆ. ಕಾನೂನಿನ ಆ ಕಬಂಧ ಬಾಹುಗಳಿಂದ ನೀವು ಮತ್ತು ನಿಮ್ಮ ಜೀ ಹುಜೂರ್ (ಗ್ರಾಮ ಪಂಚಾಯಿತಿ ಗೆಲ್ಲದ) ನಾಯಕರು ತಪ್ಪಿಸಿಕೊಳ್ಳಲಾರಿರಿ. ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪ ಮೊದಲೇನಲ್ಲ. ಹಿಂದೆ ಕೆಲ ಬಾರಿ ನಿಮ್ಮಂತ ಪ್ರಚಾರ ಪ್ರಿಯರು ಮಾಧ್ಯಮಗಳ ಮುಂದೆ ಬಂದು ಠೂಸ್ ಪಟಾಕಿ ಹಾರಿಸಿ ಹೋಗಿದ್ದೀರಿ. ʼಬರಿಗೈʼ ತೋರಿಸಿ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳಲು ತಾವು ಮಾಡಿರುವ ಆರೋಪಕ್ಕೆ ಕಾನೂನು ಮೂಲಕವೇ ಉತ್ತರ ಕೊಡಲು ಸಿದ್ದನಾಗಿದ್ದೇನೆ. ತಾವು ಮಾಡಿದ ಸುಳ್ಳು ಆರೋಪಕ್ಕೆ ಸಾರ್ವಜನಿಕ ಕ್ಷಮೆ ಯಾಚಿಸದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ತಿಳಿಸಿದ್ದಾರೆ.


ಬಂಡಲ್ ಬಡಾಯಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನನ್ನ ಮೇಲೆ 500 ಎಕರೆ ಅಕ್ರಮ ಜಮೀನು ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅವರ ಬಳಿ ಇರುವ 500 ಎಕರೆ ಸಿ.ಟಿ.ರವಿಗೆ ಸೇರಿದ ಭೂಮಿಯ ದಾಖಲೆಗಳನ್ನು ತಂದು ಕೊಟ್ಟರೆ, ತಂದು ಕೊಟ್ಟ ಪುಣ್ಯಾತ್ಮನಿಗೆ ಅರ್ಧ ದಾನವಾಗಿ ಕೊಟ್ಟುಬಿಡುತ್ತೇನೆ ಎಂದು ಅವರು ಮಾಧ್ಯಮ ಪ್ರಕಟಣೆಯ ಮೂಲಕ ಸವಾಲೆಸೆದಿದ್ದಾರೆ. ಎಂ.ಲಕ್ಷ್ಮಣ ಎಂಬ ಮಹಾನ್ ಸುಳ್ಳುಗಾರ ಮಾಧ್ಯಮಗಳ ಮುಂದೆ ಕುಳಿತರೆ ಸಾಕು ಸಾಕ್ಷಾತ್ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ ಎಂದಿರುವ ಅವರು, ತಮ್ಮದೇ ಪಕ್ಷದ ನಾಯಕರ ಬೇನಾಮಿ ಆಸ್ತಿ ಬಗ್ಗೆ ಹೇಳುವ ಬದಲು ತಪ್ಪಾಗಿ ಲಕ್ಷ್ಮಣ ಅವರು ನನ್ನ ಹೆಸರು ಹೇಳಿದಂತಿದೆ. ನಿಮ್ಮ ಪಕ್ಷದ ನಾಯಕರು ಹೊಲದಲ್ಲಿ ಗುದ್ದಲಿ, ಪಿಕಾಸಿ ಹಿಡಿದು ಕೂಲಿ ನಾಲಿ ಮಾಡಿ ಕೋಟಿ ಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆಯೇ? ಹಾಗಾದರೆ ಅಕ್ರಮ ಆಸ್ತಿ ಮಾಡಿ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದಲ್ಲೇ ಇರುವಾಗ ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡುತ್ತಿದ್ದೀರಲ್ಲ ನಿಮಗೇನಾದರೂ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಆಧಾರ ರಹಿತವಾಗಿ ದಾಖಲೆಗಳಿಲ್ಲದೇ ಮಾಧ್ಯಮಗಳ ಮುಂದೆ ಸುಳ್ಳನ್ನು ಬಿತ್ತಿ ಸುಳ್ಳನ್ನು ಬೆಳೆಯುವ ನಿಮ್ಮ ಹಿಟ್ ಅಂಡ್ ರನ್ ಫಾಲ್ಸ್ ಲಕ್ಷ್ಮಣ ಅವರೇ ನಿಮ್ಮಲ್ಲಿ ದಾಖಲೆಗಳಿದ್ದರೆ ನೇರವಾಗಿ ಕಾನೂನು ಮೂಲಕವೇ ಹೋರಾಟ ನಡೆಸಿ.

ಅದು ಬಿಟ್ಟು ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಬಂದು ಮಾತಾಡುವ ತಾವು ದೊಡ್ಡವರ ಬಗ್ಗೆ ಮಾತನಾಡಿದರೆ ತಾವು ದೊಡ್ಡ ರಾಜಕೀಯ ವ್ಯಕ್ತಿಯಾಗುತ್ತೇನೆ ಎಂಬ ಭ್ರಮೆಯಿಂದ ತಾವು ಮಾಡಿರುವ ಆರೋಪಕ್ಕೆ ಕಾನೂನಿನ ಮೂಲಕವೇ ಶೀಘ್ರದಲ್ಲೇ ಉತ್ತರಿಸುವೆ ಎಂದು ಎಚ್ಚರಿಸಿದ್ದಾರೆ. ನನ್ನ ಸಾರ್ವಜನಿಕ ಜೀವನದಲ್ಲಿ 4 ಬಾರಿ ಚುನಾವಣೆಗೆ ನಿಂತು ಗೆದ್ದು ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ. ಚುನಾವಣೆಗೆ ನಿಂತಾಗ ಚುನಾವಣಾಧಿಕಾರಿಗಳಿಗೆ ನನ್ನ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸಿದ್ದೇನೆ. 2004 ರಲ್ಲಿ ಸಲ್ಲಿಸಿದ ಅಫಡವಿಟ್, 2021ರಲ್ಲಿ ಸಲ್ಲಿಸಿದ ಅಫಿಡವಿಟ್ ಗೂ ವ್ಯತ್ಯಾಸವನ್ನು ನೋಡಿ.ನಿಮ್ಮ ಪಕ್ಷದ ಮುಖಂಡರ ಆಸ್ತಿ ವ್ಯತ್ಯಾಸವನ್ನು ಗಮನಿಸಿ ಆಗ ಕಳ್ಳರು ಯಾರು ಅನ್ನುವುದು ನಿಮಗೆ ಅರ್ಥವಾಗುತ್ತದೆ. ನಾನು ಯಾವುದೇ ಅಸ್ವಾಭಾವಿಕವಾಗಿ ಆಸ್ತಿಯನ್ನು ಸಂಪಾದಿಸಿಲ್ಲ. ನನ್ನ ಮೇಲೆ ಒಂದಿಬ್ಬರು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ. ದೂರನ್ನು ಸಲ್ಲಿಸಿ ಮುಖಭಂಗಕ್ಕೆ ಒಳಗಾಗಿದ್ದಾರೆ. ನೀವೊಬ್ಬರು ಬಾಕಿ ಇದ್ದೀರಿ. ಈ ಹಿಂದೆ ಪ್ರತಿ ಬಾರಿ ಆಪಾದನೆಗಳು ಬಂದಾಗಲು ನಾನು ದೃತಿಗೆಟ್ಟಿಲ್ಲ. ಕಾನೂನು ಪ್ರಕಾರವೇ ಉತ್ತರ ಕೊಟ್ಟಿದ್ದೇನೆ. ನಾನು ಪಾರದರ್ಶಕವಾಗಿದ್ದೇನೆ. ಕೂಲಂಕಷವಾಗಿ ಪರಿಶೀಲನೆಗೂ ಸಿದ್ದರಿದ್ದೇನೆ. ನಿಮ್ಮ ಬಳಿ ನನ್ನ 500 ಎಕರೆ ಜಮೀನಿನ ದಾಖಲೆಗಳಿದ್ದರೆ ಅದನ್ನು ನನಗೆ ಕೊಟ್ಟು ನೀವು ಅರ್ಧ ಜಮೀನನ್ನು ನನ್ನಿಂದಲೇ ಬಳುವಳಿಯಾಗಿ ಪಡೆಯಿರಿ. ʼಸತ್ಯ ಹೊಸ್ತಿಲು ದಾಟುವಷ್ಟರಲ್ಲೇ ನಿಮ್ಮಂತ ಸುಳ್ಳುಗಾರರಿಂದ ಸುಳ್ಳು ಊರೆಲ್ಲ ಸುತ್ತಿ ಬಂತಂತೆʼ. ಆರೋಪಕ್ಕೆ ಕಾನೂನು ಮೂಲಕ ಉತ್ತರ ಕೊಡುವೆ. ಅದಕ್ಕೆ ನೀವು ಸಿದ್ದರಾಗಿರಿ ಎಂದು ಅವರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top