ಬೆಂಗಳೂರು: ರಾಜ್ಯದಲ್ಲಿ ಕೇವಲ ನಕಾರಾತ್ಮಕ ಧೋರಣೆಯನ್ನು ಆಚರಿಸುವ ವಿರೋಧ ಪಕ್ಷವಾದ ಕಾಂಗ್ರೆಸ್ ಬಗ್ಗೆ ಒಂದು ಖಂಡನಾ ನಿರ್ಣಯವನ್ನು ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಅಧಿವೇಶನದಲ್ಲಿ ಮಂಡಿಸಿದರು. ಈ ನಿರ್ಣಯವನ್ನು ಲಕ್ಷ್ಮಣ್ ಸವದಿ ಮತ್ತು ಅಪ್ಪಚ್ಚು ರಂಜನ್ ಅವರು ಅನುಮೋದಿಸಿದರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರರಾದ ಎಂ.ಜಿ.ಮಹೇಶ್ ಅವರು ತಿಳಿಸಿದರು. ಹೊಸಪೇಟೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರಕಾರವು ಇಷ್ಟೆಲ್ಲ ಪ್ರಗತಿಗಳನ್ನು ಮಾಡಿದರೂ ಹಾಗೂ ಜನೋಪಯೋಗಿ ಕೆಲಸಗಳನ್ನು ಮಾಡಿದರೂ ಕಳೆದ ಹಲವು ದಿನಗಳಿಂದ ನಕಾರಾತ್ಮಕ ಧೋರಣೆಯಿಂದ ಕಾಂಗ್ರೆಸ್ ಹೇಗೆಲ್ಲ ನಡೆದುಕೊಳ್ಳುತ್ತಿದೆ; ಸವಾಲುಗಳ ಮಧ್ಯದಲ್ಲಿ ರಚನಾತ್ಮಕ ವಿರೋಧ ಪಕ್ಷದ ಪಾತ್ರ ವಹಿಸಬೇಕಾದ ಕಾಂಗ್ರೆಸ್, ಅದನ್ನು ಮರೆತು ಸದಾ ಗೊಂದಲದೊಳಗಡೆ ತಾನೂ ಕೂಡ ಇದೆ. ಹಿಜಾಬ್, ಹಲಾಲ್, ಟಿಪ್ಪು ಸುಲ್ತಾನ್‍ನ ಪಠ್ಯಕ್ರಮದ ವಿಚಾರವೇ ಇರಬಹುದು- ಇವೆಲ್ಲ ವಿಚಾರದಲ್ಲೂ ತುಷ್ಟೀಕರಣದ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಬಂದ್ ಸಮರ್ಥನೆ, ಶಿವಮೊಗ್ಗದ ಹರ್ಷದ ಕೊಲೆ ಸಂದರ್ಭದಲ್ಲಿ ಮೆರವಣಿಗೆಯ ನಿಂದನೆ, ಕೋವಿಡ್ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರಕಾರ ನಿರ್ವಹಣೆಗೆ ಕೈಗೊಂಡ ಕ್ರಮಕ್ಕೆ ವಿರೋಧ- ಟೀಕೆಗಾಗಿಯೇ ಟೀಕಿಸುವ ಹಾಗೂ ಋಣಾತ್ಮಕ ಚಿಂತನೆಯನ್ನು ಕಾಂಗ್ರೆಸ್ ಮಾಡುತ್ತ ಬಂದಿದೆ ಎಂದು ಈ ನಿರ್ಣಯ ಗಮನ ಸೆಳೆದಿದೆ ಎಂದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಆದಾಗ ದರ ಕಡಿಮೆ ಮಾಡಲು ಕೇಂದ್ರ ಸರಕಾರ ತಿಳಿಸಿದಾಗ ಬಿಜೆಪಿಯ ರಾಜ್ಯ ಸರಕಾರಗಳು ಸ್ಪಂದಿಸಿದವು. ಆದರೆ, ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರ, ಛತ್ತೀಸ್‍ಗಡ ಮೊದಲಾದ ಕಡೆ ದರ ಕಡಿಮೆ ಮಾಡಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಟೀಕೆಯನ್ನೇ ಮಾಡುತ್ತ ಬಂದಿದೆ. ಕೋವಿಡ್ ವೇಳೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿ ಆಹಾರ ಭದ್ರತೆಯನ್ನು ಕೇಂದ್ರ ಸರಕಾರ ನೀಡಿದ್ದರೂ ಅದನ್ನೂ ಕಾಂಗ್ರೆಸ್ಸಿಗರು ಟೀಕಿಸುತ್ತಾ ಬಂದಿದ್ದಾರೆ ಎಂದು ಆಕ್ಷೇಪಿಸಲಾಗಿದೆ ಎಂದು ವಿವರಿಸಿದರು. ಒಕ್ಕೊರಲಿನಿಂದ ಈ ನಿರ್ಣಯ ಅಂಗೀಕರಿಸಲಾಗಿದೆ ಎಂದರು. ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಉಮೇಶ್ ಜಾಧವ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಇನ್ನೊಂದು ಅಭಿನಂದನಾ ನಿರ್ಣಯ ಮಂಡಿಸಿದರು. ಕಳೆದ 7 ವರ್ಷಗಳಿಂದ ನರೇಂದ್ರ ಮೋದಿಯವರ ಅಹರ್ನಿಶಿ ಸೇವೆ, ಉಕ್ರೇನ್ ಸಂದರ್ಭ ಮತ್ತು ಜಗತ್ತಿನ ಸಮಸ್ಯೆಗಳಿಗೆ ವಿಶ್ವವೇ ಒಂದು ಕುಟುಂಬ ಎಂಬ ರೀತಿಯಲ್ಲಿ ಅವರು ಸ್ಪಂದಿಸಿದ ರೀತಿ, ಲಸಿಕೆ ಕಳುಹಿಸಿದ್ದು, ಶ್ರೀಲಂಕಾ, ಅಫಘಾನಿಸ್ತಾನ, ಟರ್ಕಿ ಮತ್ತಿತರ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚಿದ ಕುರಿತು ಮೆಚ್ಚುಗೆ ಸೂಚಿಸಿ ನರೇಂದ್ರ ಮೋದಿಯವರನ್ನು ಅಭಿನಂದಿಸಲಾಗಿದೆ ಎಂದು ತಿಳಿಸಿದರು.
ಅಂತ್ಯೋದಯದ ಪರಿಕಲ್ಪನೆಯಲ್ಲಿ ಭಾರತ ಮಾತ್ರವಲ್ಲದೆ ಜಗತ್ತಿನ ಯಾರೂ ಹಸಿವಿನಿಂದ ಸಾಯಬಾರದು ಎಂಬುದನ್ನು ಸಾಕಾರಗೊಳಿಸಿದ ಪ್ರಧಾನಿಯವರನ್ನು ಅಭಿನಂದಿಸುವ ಎರಡನೇ ನಿರ್ಣಯವನ್ನು ಎಲ್ಲರೂ ಒಕ್ಕೊರಲಿನಿಂದ ಸ್ವಾಗತಿಸಿದರು ಎಂದರು.
ಜಗತ್ತಿನಲ್ಲೆಡೆ ವಿವಿಧ ರಾಷ್ಟ್ರಗಳು ಹಣದುಬ್ಬರವನ್ನು ತಡೆಯಲಾಗದ ಸ್ಥಿತಿಯಲ್ಲಿರುವಾಗ ಭಾರತವು ತನ್ನ ರಫ್ತು ನೀತಿಯಿಂದ ಅದನ್ನು ಸಮರ್ಥವಾಗಿ ನಿರ್ವಹಿಸಿದೆ. ಭಾರತವು ಹಣದುಬ್ಬರವನ್ನು ನಿಯಂತ್ರಿಸಿದ ರೀತಿಯನ್ನು ಕಾರ್ಯಕಾರಿಣಿ ಮೆಚ್ಚಿಕೊಂಡು ಅಭಿನಂದನೆ ಸಲ್ಲಿಸಲಾಯಿತು. 5 ರಾಜ್ಯಗಳ ಚುನಾವಣೆಯಲ್ಲಿ ನಾಲ್ಕರಲ್ಲಿ ನಮ್ಮ ಮಹತ್ತರ ಸಾಧನೆ ಕುರಿತು ಮೆಚ್ಚುಗೆ ಸೂಚಿಸಿದ್ದಾಗಿ ವಿವರ ನೀಡಿದರು. ನಿನ್ನೆ ಸಂಜೆ ನಡೆದ ಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ್ ಅವರು, ಸಂಘಟನೆಯ ವಿಸ್ತಾರ ಮತ್ತು ಬಿಜೆಪಿಗೆ ವಿಶ್ವ ಮಾನ್ಯತೆ ಲಭಿಸಿದ ಕುರಿತು ಗಮನ ಸೆಳೆದರು. ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳಿಗೆ ಭಾರತದ ಅವಶ್ಯಕತೆ ಹೆಚ್ಚಾಗಿದೆ. ವರ್ತಮಾನದ ಜಗತ್ತಿನ ರಾಜಕಾರಣದಲ್ಲಿ ಭಾರತದ ಪಾತ್ರದ ಕುರಿತು ಸವಿವರವಾದ ವಿಷಯ ಮಂಡನೆ ಮಾಡಿದರು. ನೌಕರಶಾಹಿಯ ಕಾರ್ಯ ವಿಸ್ತಾರ ಮತ್ತು ಅವರಿಗೆ ಹೊಳಪನ್ನು ನೀಡುವ ನಿಟ್ಟಿನಲ್ಲಿ ಭಾರತದ ಪ್ರಯತ್ನದ ಕುರಿತು ಅವರು ಬೆಳಕು ಚೆಲ್ಲಿದ್ದಾರೆ ಎಂದು ವಿವರಿಸಿದರು. ರಷ್ಯಾ- ಉಕ್ರೇನ್ ಯುದ್ಧ ಮತ್ತು ಆ ಯುದ್ಧ ಶಮನದ ನಿಟ್ಟಿನಲ್ಲಿ ಪ್ರಧಾನಿಯವರ ಪಾತ್ರದ ಕುರಿತು ವಿವರ ನೀಡಿದ್ದಾರೆ. ಈಶಾನ್ಯ ಭಾರತದಲ್ಲಿ ಬಿಜೆಪಿಯ 8 ಸರಕಾರಗಳ ರಚನೆ, ಅದರ ಹಿಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಅವರು ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು. ರಾಜ್ಯ ವಕ್ತಾರರು ಮತ್ತು ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹಾಗೂ ರಾಜ್ಯ ವಕ್ತಾರರಾದ ಎಂ.ಬಿ.ಜಿರಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.