ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಡಾ|| ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ನಡೆಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ|| ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಇನ್ನು 100 ವರ್ಷಗಳ ನಂತರವೂ ಡಾ|| ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು ಈ ದೇಶಕ್ಕೆ ಬೇಕಾಗಿವೆ ಎಂದು ನುಡಿದರು. ಸ್ಕೂಲ್ ಬೆಲ್ ಹೊಡೆಯುವ ವ್ಯಕ್ತಿಯನ್ನು ಅಂಬೇಡ್ಕರರ ವಿರುದ್ಧ ಚುನಾವಣೆಗೆ ನಿಲ್ಲಿಸಿ ಎರಡು ಬಾರಿ ಸೋಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರರ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆಯೇ ಇಲ್ಲ ಎಂದು ಟೀಕಿಸಿದರು. ಡಾ|| ಬಿ.ಆರ್. ಅಂಬೇಡ್ಕರ್ ಅವರು ಅವರೊಬ್ಬ ಮಹಾನ್ ವ್ಯಕ್ತಿ. ಅವರು ಅನುಭವಿಸಿದ ಶೋಷಣೆ, ಕಷ್ಟ, ಅವಮಾನವನ್ನು ಬೇರೆ ಯಾರು ಅನುಭವಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಮಾತಿಗೆ ಗೌರವ ಸಿಗದಿದ್ದರೆ, ಸ್ವಲ್ಪ ಅವಮಾನ ಆದರೆ ಅಥವಾ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು, ನಿಷ್ಕ್ರಿಯರಾಗುವುದನ್ನು ನಾವು ಇಂದು ಕಾಣುತ್ತೇವೆ. ಡಾ|| ಬಿ.ಆರ್. ಅಂಬೇಡ್ಕರ್ ಅವರು ಅವಮಾನ ಆದಾಗಲೆಲ್ಲ ಹೆಚ್ಚು ಸಕ್ರಿಯರಾದರು. ಜೀವನ ಪೂರ್ತಿ ಅವರು ಕಾಂಗ್ರೆಸ್ ವಿರುದ್ಧ ಚಳವಳಿ ಮಾಡಿದರು. ಈ ದೇಶದಲ್ಲಿ ಪರಿವರ್ತನೆ ತರಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ ಎಂಬ ಚಿಂತನೆ ಅವರದಾಗಿತ್ತು ಎಂದು ವಿವರಿಸಿದರು.
ಗಾಂಧೀಜಿ ತಮ್ಮಿಂದ ವಯಸ್ಸಿನಲ್ಲಿ ಹಿರಿಯರಾದರೂ ಹೇಳುವ ವಿಚಾರವನ್ನು ನೇರವಾಗಿ ಹೇಳುವ ದಿಟ್ಟತನ ಮತ್ತು ಧಾಷ್ರ್ಯವನ್ನು ಅಂಬೇಡ್ಕರರು ಹೊಂದಿದ್ದರು. ಮಹಾನ್ ಓದುಗ, ದೇಶವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಪ್ರಾಮಾಣಿಕ ವ್ಯಕ್ತಿ ಅವರಾಗಿದ್ದರು ಎಂದು ನುಡಿದರು. ಬಿಜೆಪಿ, ಡಾ|| ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ ಎಂದು ತಿಳಿಸಿದರು. ಬಡವರಿಗೆ ಸರಕಾರದಿಂದ ಸಹಾಯ ಆಗಬೇಕೆಂಬ ಅಂಬೇಡ್ಕರರ ವಿಚಾರಧಾರೆಯನ್ನು ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಯೋಜನೆಗಳ ಮೂಲಕ ಜಾರಿಗೊಳಿಸಿವೆ ಎಂದು ವಿವರಿಸಿದರು. ಶಿಕ್ಷಣ, ಸಂಘಟನೆ ಇಲ್ಲದೆ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂಬ ಚಿಂತನೆ ಡಾ|| ಬಿ.ಆರ್. ಅಂಬೇಡ್ಕರ್ ಅವರದಾಗಿತ್ತು. ಭಾರತ ಮುಂದೆ ಬರಲು ಡಾ|| ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ವಿಚಾರಧಾರೆಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು. ಅಂಬೇಡ್ಕರರ ಶವಸಂಸ್ಕಾರಕ್ಕೆ ಜಾಗವನ್ನೂ ದೆಹಲಿಯಲ್ಲಿ ನೀಡಲಿಲ್ಲ. ಭಾರತರತ್ನವನ್ನು ಕಾಂಗ್ರೆಸ್ ಕೊಡಲಿಲ್ಲ. ಸಮ್ಮಿಶ್ರ ಸರಕಾರ ಇದ್ದಾಗ ವಾಜಪೇಯಿ ಅವರ ಸಲಹೆ ಮೇರೆಗೆ ವಿ.ಪಿ.ಸಿಂಗ್ ಸರಕಾರವು ಭಾರತರತ್ನವನ್ನು ಅವರಿಗೆ ನೀಡಿತು ಎಂದು ತಿಳಿಸಿದರು.
ಪಕ್ಷದ ರಾಜ್ಯ ವಕ್ತಾರರಾದ ಡಾ|| ಗಿರಿಧರ್ ಉಪಾಧ್ಯಾಯ ಅವರು ಮಾತನಾಡಿ, ಅಂಬೇಡ್ಕರ್ ಅವರ ಬ್ಯಾಡ್ಜ್ ಹಾಕಿಕೊಂಡು ಸತತ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷ ಅವರು ಇದ್ದಾಗ ಮತ್ತು ಮರಣಾನಂತರ ಅವಮಾನ ಮಾಡುತ್ತಾ ಹೋಗಿತ್ತು ಎಂದು ತಿಳಿಸಿದರು. ಈ ಅವಮಾನವನ್ನು ಸರಿಪಡಿಸುವ ಕೆಲಸವನ್ನು ನರೇಂದ್ರ ಮೋದಿ ಸರಕಾರ ಮಾಡಿದೆ ಎಂದರು.
ಡಾ. ಅಂಬೇಡ್ಕರರು ಅವರ ಕುರಿತ ಪುಸ್ತಕದ “ಸಾಮಾಜಿಕ ಕ್ರಾಂತಿ ಸೂರ್ಯ” ಹೆಸರಿನಂತೆ ಕೆಲಸ ಮಾಡಿದರು. ಸಾಮಾಜಿಕ ಪ್ರಜಾಪ್ರಭುತ್ವ ಉಳಿದರೆ ಮಾತ್ರ ದೇಶ ಉಳಿಯುತ್ತದೆ, ಕೇವಲ ರಾಜಕೀಯ ಪ್ರಜಾಪ್ರಭುತ್ವ ಬಂದರೆ ಸಾಕಾಗದು ಎಂದು ಅವರು ಪ್ರತಿಪಾದಿಸಿದ್ದರು ಎಂದು ತಿಳಿಸಿದರು. ಅವರೊಬ್ಬ ಜ್ಞಾನನಿಧಿ, ಸಾಮಾಜಿಕ ನೆಲೆಯಲ್ಲಿ ಅಗಾಧ ಜ್ಞಾನ ಅವರಲ್ಲಿತ್ತು. ಅಸ್ಪøಶ್ಯತೆ ವಿರುದ್ಧ ಆ ಕಾಲದಲ್ಲೇ ಅವರು ಹೋರಾಟ ಮಾಡಿದ್ದರು ಎಂದರು. ಅವರನ್ನು ರಾಷ್ಟ್ರನಾಯಕರನ್ನಾಗಿ ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲೇ ಇಲ್ಲ. ಅಂಬೇಡ್ಕರರ ಸಾಮರಸ್ಯದ ಸಂದೇಶವನ್ನು ಮನೆಮನೆಗೆ ಮತ್ತು ಮನಸ್ಸುಗಳಿಗೆ ತಲುಪಿಸುವ ಕೆಲಸ ನಾವು ಮಾಡಬೇಕೆಂದು ನುಡಿದರು. ನರೇಂದ್ರ ಮೋದಿಯವರು ಡಾ. ಅಂಬೇಡ್ಕರರ ಪಂಚ ತೀರ್ಥಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಬಿಜೆಪಿ ಹಾಗೂ ಬಿಜೆಪಿ ಸರಕಾರಗಳು ನಿಜರೂಪದಲ್ಲಿ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿವೆ ಎಂದರು. ಡಾ. ಅಂಬೇಡ್ಕರರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ವಿರೋಧಿಸಿದ್ದರು. ಆ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ನರೇಂದ್ರ ಮೋದಿಯವರು ರದ್ದುಪಡಿಸಿದರು. ನೆಹರೂ ದೇಶಕ್ಕೆ ಮಾಡಿದ ದ್ರೋಹವಿದು ಎಂದು ತಿಳಿಸಿದರು. ಜಾತ್ಯತೀತ ಶಬ್ದವನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಸಂವಿಧಾನದಲ್ಲಿ ಸೇರಿಸಿದರು ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.