ಮಸ್ಕಿ : ತಾಲೂಕಿನ ಬೆಳ್ಳಿಗಿನೂರು ಗ್ರಾಮದ ಶ್ರೀ ಕಾಳಿಕಾ ದೇವಿ ಜೋಡು ಪಲ್ಲಕ್ಕಿಯ ಮಹೋತ್ಸವವು ಶನಿವಾರ ಸಹಸ್ರಾರು ಭಕ್ತರ ಮಧ್ಯೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಯುಗಾದಿ ಹಬ್ಬದಂದು ಜೋಡು ಪಲ್ಲಕ್ಕಿಗಳಿಗೆ ಪೂಜಾಧಿ ಕೈಂಕರ್ಯಗಳು ಜರುಗಿ ಅಹೋರಾತ್ರಿ ಗ್ರಾಮೀಣ ಸೊಗಡಿನ ಭಜನೆ ಹಾಗೂ ಸುಮಧುರ ಸಂಗೀತ ಕಾರ್ಯಕ್ರಮದ ನೀನಾದದಲ್ಲಿ ಭಕ್ತವೃಂದ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿ ಸಮರ್ಪಣಾ ಭಾವ ಮೆರೆದರು.
ಸಂಭ್ರಮದ ಮೆರವಣಿಗೆ : ಶ್ರೀ ಕಾಳಿಕಾ ದೇವಿ ಜೋಡು ಪಲ್ಲಕ್ಕಿ ಉತ್ಸವಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡು ಜಯ ಘೋಷಣೆಯೊಂದಿಗೆ ಸಾಗಿದ ಜೋಡು ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಪಲ್ಲಕ್ಕಿ ಹೊತ್ತು ಭಕ್ತಿಯನ್ನು ಸಮರ್ಪಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಪಲ್ಲಕ್ಕಿಗಳಿಗೆ, ದಾರಿಯುದ್ದಕ್ಕೂ ಹಾಗೂ ಮಾಳಿಗೆಯ ಮೇಲೆ ನಿಂತು ಉತ್ಸವವನ್ನು ವೀಕ್ಷಿಸಿದ ಮಹಿಳೆಯರು ಮಕ್ಕಳು ಭಕ್ತಿ ಸಮರ್ಪಿಸಿದರು.
ಸಂಪ್ರದಾಯದ ಪರಂಪರೆಯ ವಾಡಿಕೆಯಂತೆ ಧಣಿ, ಕುಲಕರ್ಣಿ, ಮಾಲಿಪಾಟೀಲ್, ಪೊಲೀಸ್‌ಪಾಟೀಲ್, ಹೀಗೆ ಪ್ರಮುಖ ಮನೆತನಗಳ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಯುಗಾದಿ ಹಬ್ಬದ ಪಲ್ಲಕ್ಕಿ ಮಹೋತ್ಸವಕ್ಕೆ ಮೆರಗು ನೀಡಿದರು.